Advertisement

ಒಂದೇ ತಿಂಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಸೋಂಕಿತರ ಸಾವು

12:36 AM Aug 27, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಕೋವಿಡ್ 19 ವೈರಸ್ ಸೋಂಕು ಪ್ರಕರಣಗಳು ಮತ್ತು ಸೋಂಕಿತರ ಸಾವು ದಾಖಲೆ ಬರೆದಿವೆ.

Advertisement

ಒಟ್ಟಾರೆ ಸೋಂಕು ಪ್ರಕರಣಗಳು ಮೂರು ಲಕ್ಷ ಗಡಿದಾಟಿದ್ದರೆ, ಈವರೆಗೂ ವೈರಸ್‌ಗೆ ಬಲಿಯಾದವರ ಸಂಖ್ಯೆ ಐದು ಸಾವಿರ ಗಡಿದಾಟಿದೆ.

ಇದರೊಂದಿಗೆ ಬುಧವಾರ ಹೊಸದಾಗಿ 8,580 ಮಂದಿಗೆ ಸೋಂಕು ತಗುಲಿರುವುದು, ಸೋಂಕು ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 7,249 ಮಂದಿ ಗುಣಮುಖರಾಗಿರುವುದು, 133 ಸೋಂಕಿತರು ಸಾವಿಗೀಡಾಗಿರುವುದು ವರದಿಯಾಗಿದೆ.

ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳು 3,00,406ಕ್ಕೆ, ಸೋಂಕಿಗೆ ಬಲಿಯಾದವರ ಸಂಖ್ಯೆ 5,091ಕ್ಕೆ, ಗುಣಮುಖರಾದವರ ಸಂಖ್ಯೆ 2,11,688ಕ್ಕೆ ಏರಿಕೆಯಾಗಿದೆ. ಸದ್ಯ 83,608 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಈ ಪೈಕಿ 760 ಸೋಂಕಿತರಿಗೆ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದ ಸೋಂಕು ಪ್ರಕರಣಗಳು ಜುಲೈ 27 ರಂದು ಒಂದು ಲಕ್ಷ, ಆಗಸ್ಟ್ 13 ರಂದು ಎರಡು ಲಕ್ಷ ಗಡಿದಾಟಿದ್ದವು. ಆ ಬಳಿಕ ನಿತ್ಯ ಸರಾಸರಿ 7,500 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಮೂರು ಲಕ್ಷದ ಗಡಿ ದಾಟಿವೆ.

Advertisement

ಇನ್ನು ಸೋಂಕು ರಾಜ್ಯಕ್ಕೆ ಕಾಲಿಟ್ಟು 140 ದಿನಕ್ಕೆ ಮೊದಲ ಒಂದು ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಆದರೆ, ಆಗಸ್ಟ್ನಲ್ಲಿ ಸೋಂಕು ತೀವ್ರಗೊಂಡ ಹಿನ್ನೆಲೆ ಒಂದರಿಂದ ಎರಡು ಲಕ್ಷಕ್ಕೇರಲು 17 ದಿನ ಹಿಡಿದಿತ್ತು. ಆದರೆ, ಕೇವಲ 13 ದಿನಗಳಲ್ಲಿ ಸೋಂಕು ಪ್ರಕರಣಗಳು ಎರಡರಿಂದ ಮೂರು ಲಕ್ಷಕ್ಕೇರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ.

ತಿಂಗಳಲ್ಲಿಯೇ ಮೂರು ಸಾವಿರಕ್ಕೂ ಅಧಿಕ ಸೋಂಕಿತರು ಸಾವು

ಆಗಸ್ಟ್ ನಲ್ಲಿ ಸೋಂಕು ಪ್ರಕರಣಗಳ ಜತೆಗೆ ಸೋಂಕಿತರ ಸಾವು ಕೂಡಾ ಹೆಚ್ಚಳವಾಗಿದೆ. ರಾಜ್ಯಕ್ಕೆ ಕೋವಿಡ್ 19 ಸೋಂಕು ಕಾಲಿಟ್ಟು ನಾಲ್ಕೂವರೆ ತಿಂಗಳಿಗೆ (130 ದಿನಕ್ಕೆ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ತಲುಪಿತ್ತು.

ಆದರೆ, ಕಳೆದ ಒಂದು ತಿಂಗಳಲ್ಲಿ (ಜು.27-ಆ.26) 3,213 ಸೋಂಕಿತರ ಸಾವಾಗಿದೆ. ಅಂದರೆ, ನಿತ್ಯ ಸರಾಸರಿ 103 ಸೋಂಕಿತರ ಸಾವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಾವು ಐದು ಸಾವಿರಕ್ಕೇರಿಕೆಯಾಗಿದೆ.

ಬುಧವಾರ ಎಲ್ಲೆಲ್ಲಿ? ಎಷ್ಟು ಮಂದಿಗೆ ಸೋಂಕು?
ಬುಧವಾರ ಹಿಂದೆದಿಗಿಂತಲೂ ಅತಿ ಹೆಚ್ಚು 67,066 ಸೋಂಕು ಪರೀಕ್ಷೆಗಳು ನಡೆದಿದ್ದು, 8580 ಮಂದಿಗೆ ಪಾಸಿಟಿವ್ ವರದಿ ಬಂದಿವೆ. ಈ ಪೈಕಿ ಬೆಂಗಳೂರು 3284, ಮೈಸೂರು 951, ಬಳ್ಳಾರಿ 510, ದಕ್ಷಿಣ ಕನ್ನಡ 314, ಬೆಳಗಾವಿ, ದಾವಣಗೆರೆ, ಧಾರವಾಡ, ಉಡುಪಿ 200ಕ್ಕೂ ಹೆಚ್ಚು, ಉಳಿದಂತೆ 12 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು, ಆರು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು, ಮೂರು ಜಿಲ್ಲೆಗಳಲ್ಲಿ 50ಕ್ಕೂ ಕಡಿಮೆ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿತರ ಸಾವಿನಲ್ಲಿ ಅತಿ ಹೆಚ್ಚು ಬೆಂಗಳೂರಿನಲ್ಲಿ 31, ಮೈಸೂರು 20, ದಕ್ಷಿಣ ಕನ್ನಡ 11 ವರದಿಯಾಗಿವೆ.

ಸೋಂಕಿತರ ಸಾವು – ದಿನಾಂಕ

100 – ಜೂನ್ 17

1000 – ಜುಲೈ 16

2000 – ಜುಲೈ 28

3000 – ಆಗಸ್ಟ್ 8

4000 – ಆಗಸ್ಟ್ 17

5000 – ಆಗಸ್ಟ್ 26


ಪ್ರಕರಣಗಳು – ದಿನಾಂಕ

ಮೊದಲ ಪ್ರಕರಣ – ಮಾರ್ಚ್ 9

1,000 – ಮೇ 15

10,000 – ಜೂನ್ 24

50,000 – ಜುಲೈ 16

1,00,000 – ಜುಲೈ 27

2,00,000 – ಆಗಸ್ಟ್ 13

3,00,000- ಆಗಸ್ಟ್ 26

ಸೋಂಕು ಪ್ರಕರಣಗಳಲ್ಲಿ ಟಾಪ್ ಮೂರು ಜಿಲ್ಲೆಗಳು

ಜಿಲ್ಲೆ – ಒಟ್ಟು ಪ್ರಕರಣ – ಗುಣಮುಖರು -ಸಾವು

ಬೆಂಗಳೂರು – 115371 –  77531 – 1786

ಬಳ್ಳಾರಿ – 19046 – 13264 – 237

ಮೈಸೂರು – 14880 – 10656 – 381

ನಿಜವಾಯ್ತು ತಜ್ಞರ ಭವಿಷ್ಯ


ರಾಜ್ಯದಲ್ಲಿ ಸೋಂಕು ಪ್ರಕರಣಗಳು ಆಗಸ್ಟ್ ಅಂತ್ಯಕ್ಕೆ ಮೂರು ಲಕ್ಷದ ಗಡಿದಾಟಲಿರುವ ಬಗ್ಗೆ ಈ ಮೊದಲೇ ತಜ್ಞರು ಅಂದಾಜಿಸಿದ್ದರು. ಈ ಬಗ್ಗೆ `ತಜ್ಞರ ಭವಿಷ್ಯ ನಿಜ.. ತಿಂಗಳಲ್ಲೇ ಲಕ್ಷ ಸೋಂಕು..!’ ಎಂಬ ಶೀರ್ಷಿಕೆ ಅಡಿ ಆಗಸ್ಟ್ 1 ರಂದು `ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಪ್ರಕರಣಗಳು ಮೂರು ಲಕ್ಷ ದಾಟಲಿವೆ ಎಂದು ಹೇಳಿದ್ದರು. ಅದನ್ನು ವರದಿಯಲ್ಲೂ ಉಲ್ಲೇಖಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next