ಸುಳ್ಯ : ಕೊಕ್ಕರೆ ಅಥವಾ ಬೆಳ್ಳಕ್ಕಿ. ಇದರ ದೇಹ ಸೌಂದರ್ಯ, ಹಾರಾಟ ನೋಡಲು ಅಂದ. ಮನಸ್ಸಿಗೆ ಮುದ ನೀಡುತ್ತದೆ. ಇಂತಹ ಕೊಕ್ಕರೆಗಳ ಹಿಂಡೊಂದು ಕಳಂಜ ಗ್ರಾಮದ ಪಟ್ಟೆ ಬಳಿ ಬೀಡು ಬಿಟ್ಟಿದೆ. ಒಂದೆರೆಡಲ್ಲ, ಸಾವಿರಕ್ಕಿಂತ ಮಿಕ್ಕಿ ಬೆಳ್ಳಕ್ಕಿಗಳಿವೆ.
ಕಳಂಜದ ಪಟ್ಟೆ ಬಳಿಯಲ್ಲಿ ರಸ್ತೆ ಸನಿಹ ತಾಗಿಕೊಂಡಿರುವ ಖಾಸಗಿ ಜಮೀನಿನ ಅಕೇಶಿಯಾ ಮರದಲ್ಲಿ ಕೊಕ್ಕರೆ ಸಂಸಾರವಿದೆ. ದೂರದಿಂದ ದಿಟ್ಟಿಸಿದರೆ ಮರದಲ್ಲಿ ಬಿಳಿ ಹೂವುಗಳು ಬಿಟ್ಟಂತೆ ಕಾಣುತ್ತದೆ. ಇದು ಇಲ್ಲಿಗೆ ವಲಸೆ ಬಂದು ಒಂದು ವರ್ಷವೇ ಕಳೆದಿದೆ. ರಸ್ತೆಯಲ್ಲಿ ತೆರಳುವ ಜನರಿಗೆ ದಿನಂಪ್ರತಿ ಕೊಕ್ಕರೆ ನಿನಾದ ಕೇಳಿಸದೆ ಇರದು ಅನ್ನುತ್ತಾರೆ ಸ್ಥಳೀಯರು.
ಸಂಜೆ 6.30ರ ಅನಂತರ ಒಂದೊಂದಾಗಿ ಅಕೇಶಿಯಾ ಮರದತ್ತ ಕೊಕ್ಕರೆ ಆಗಮಿಸುತ್ತವೆ. ಆರಂಭದಲ್ಲಿ ಆವಾಸ ಸ್ಥಾನದ ಸುತ್ತ ಒಂದೆರೆಡು ಸುತ್ತು ಹೊಡೆದು, ಆಸುಪಾಸಿನ ತೆಂಗಿನ ಮರದಲ್ಲಿ ಕುಳಿತುಕೊಳ್ಳುತ್ತವೆ. ಕತ್ತಲು ಹೆಚ್ಚಾದಂತೆ ಮರದ ಬಳಿ ಸೇರಿಕೊಳ್ಳುತ್ತದೆ. ಹೀಗೆ 7.30-8 ಗಂಟೆಯ ಹೊತ್ತಿಗೆ ಬರೋಬ್ಬರಿ 1,500ಕ್ಕೂ ಮಿಕ್ಕಿ ಕೊಕ್ಕರೆ ಸಮಾಗಮಗೊಳ್ಳುತ್ತವೆ. ಇದರ ಜತೆಗೆ ನೀರ ಕಾಗೆಗಳು ಇವೆ. ಅವೆರೆಡು ಜತೆಯಾಗಿ ವಾಸಿಸುತ್ತವೆ. ಮರುದಿನ ಬೆಳ್ಳಂಬೆಳಗ್ಗೆ 4 ಗಂಟೆ ವೇಳೆ ವಿಶ್ರಾಂತ ಪ್ರದೇಶ ಬಿಟ್ಟು ಆಹಾರ ಹುಡುಕಲು ತೆರಳುತ್ತವೆ. ಜೌಗು ಪ್ರದೇಶ, ಕೆಸರು ಗದ್ದೆಗಳಲ್ಲಿ, ಕೆರೆಗಳ ತೆಳು ನೀರಿನಲ್ಲಿ ಕಪ್ಪೆ, ಏಡಿ, ಮೀನುಗಳು, ಸೀಗಡಿ ಮೊದಲಾದ ಆಹಾರ ಹುಡುಕಿ ಸಂಜೆ ವೇಳೆ ಮರಳಿ ಬರುವುದು ದಿನನಿತ್ಯದ ರೂಢಿಯಾಗಿದೆ.
ವಾಸಸ್ಥಾನದ ಹತ್ತಿರದಲ್ಲಿ ಹಲವು ಮನೆಗಳಿವೆ. ವಾಹನಗಳ ಓಡಾಟವೂ ಇದೆ. ಆದರೆ ಇವ್ಯಾವುದೂ ಕೊಕ್ಕರೆ ಆವಾಸಕ್ಕೆ ಭಂಗವಾಗಿಲ್ಲ. ಕೊಕ್ಕರೆಗಳು ಶಾಂತ ಸ್ವಭಾವದ ಹಕ್ಕಿಗಳಾದರೂ ಗೊಂದಲಗೊಂಡಾಗ ತಮ್ಮ ಹಿಂಡಿನಲ್ಲಿ ಕರ್ಕಶವಾಗಿ ಗದ್ದಲವೆಬ್ಬಿಸುತ್ತದೆ. ಆ ಸದ್ದು ಮನೆ ಮಂದಿಗೆ ತೊಂದರೆ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಸಂತಾನೋತ್ಪತಿ
ಮರದ ಕೊಂಬೆ, ಪೊದೆಗಳಲ್ಲಿ ಕಸ ಕಡ್ಡಿಗಳಿಂದ ಗೂಡು ಕಟ್ಟಿಕೊಳ್ಳುವ ಕೊಕ್ಕರೆಗಳು ಇತರ ಉದ್ದ ಕಾಲಿನ ನೀರು ಹಕ್ಕಿಗಳ ಜತೆ ಗುಂಪು ಗುಂಪಾಗಿ ನೆಲೆಸುತ್ತವೆ. ಗೂಡಿನ ಸುತ್ತಲಿನ 3-4 ಮೀಟರ್ ವ್ಯಾಪ್ತಿ ಪ್ರದೇಶವನ್ನು ಗಡಿಯಾಗಿ ಪರಿಗಣಿಸಿ ಶತ್ರುಗಳಿಂದ ಕಾಪಾಡಿಕೊಳ್ಳುತ್ತವೆ. 3-5 ಮೊಟ್ಟೆ ಇಟ್ಟು, 21-25ದಿನಗಳವರೆಗೆ ಸರದಿಯಲ್ಲಿ ಗಂಡು, ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಟ್ಟು ಮರಿ ಮಾಡುತ್ತವೆ. 40-45 ದಿನಗಳ ಅನಂತರ ಮರಿ ಹಕ್ಕಿ ಸ್ವತಂತ್ರವಾಗಿ ಹಾರಾಡುತ್ತವೆ.
ಫೋಟೋಗೆ ಬಂಧಿಯಾಗುವುದಿಲ್ಲ!
ರಸ್ತೆ ಬದಿಯಲ್ಲಿ ಈ ಕೊಕ್ಕರೆ ಆವಾಸ ಇದ್ದರೂ ಪೊದೆ ತುಂಬಿದ ಮರಗಳ ನಡುವೆ ಇವು ಗೂಡು ಕಟ್ಟಿವೆ. ಆವಾಸ ತಾಣದ ಸುತ್ತಲೂ ಎತ್ತರದ ಮರಗಳಿವೆ. ಹಾಗಾಗಿ ಕೊಕ್ಕರೆಯ ಪೂರ್ಣ ಚಿತ್ರಣ ಸುಲಭವಾಗಿ ಸಿಗದು. ಒಂದೆಡೆ ಕತ್ತಲು, ಪೊದೆ ತುಂಬಿದ ಪ್ರದೇಶವಾದ ಕಾರಣ ಫೋಟೋ ಅಥವಾ ವೀಡಿಯೋ ತೆಗೆಯಲು ಸಾಧ್ಯವಿಲ್ಲ. ನಸು ಕತ್ತಲಿನಲ್ಲಿ ದೂರದಿಂದ ಹಾರಿ ಬರುವ ಕೊಕ್ಕರೆ ಸಾಲು ಕಣ್ತುಂಬಿಕೊಳ್ಳಬಹುದಷ್ಟೆ. ಹಾಗಾಗಿ ಡಿಜಿಟಲ್ ಯುಗದಲ್ಲಿಯೂ ಕೊಕ್ಕರೆ ಕೆಮರಾದೊಳಗೆ ಬಂಧಿಯಾಗದು.
ಕಿರಣ್ ಪ್ರಸಾದ್ ಕುಂಡಡ್ಕ