Advertisement

“ಕನಸುಗಳೀಗ ದೊಡ್ಡದಾಗಿವೆ’; ಈಗ ನಾವು ಸಣ್ಣ ಕನಸುಗಳನ್ನು ಕಾಣುತ್ತಿಲ್ಲ: ಪ್ರಧಾನಿ ಮೋದಿ

08:27 PM Nov 15, 2022 | Team Udayavani |

ಬಾಲಿ:“21ನೇ ಶತಮಾನದಲ್ಲಿ ಇಡೀ ಜಗತ್ತಿಗೆ ಭಾರತವೇ ಭರವಸೆಯ ಕಿರಣವಾಗಿದೆ. ನಾವೀಗ ಸಣ್ಣ ಕನಸುಗಳನ್ನು ಕಾಣುತ್ತಿಲ್ಲ. ನಮ್ಮದೇನಿದ್ದರೂ ದೊಡ್ಡ ದೊಡ್ಡ ಕನಸುಗಳೇ…’

Advertisement

ಇವು ಇಂಡೋನೇಷ್ಯಾದಲ್ಲಿರುವ ಭಾರತೀಯ ಸಮುದಾಯದ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತುಗಳು.

ಜಿ20 ಶೃಂಗದಲ್ಲಿ ಭಾಗಿಯಾಗಲು ಇಂಡೋನೇಷ್ಯಾದ ಬಾಲಿಗೆ ತೆರಳಿರುವ ಅವರು, ಮಂಗಳವಾರ ಭಾರತೀಯ ಸಮುದಾಯವನ್ನು ಉದ್ದೇಶಿಸಿಯೂ ಮಾತನಾಡಿದರು. “2014ರ ಹಿಂದಿನ ಭಾರತಕ್ಕೂ, 2014ರ ನಂತರದ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈಗ ದೇಶವು ಅಭೂತಪೂರ್ವ ವೇಗದಲ್ಲಿ ಮುಂದೆ ಸಾಗುತ್ತಿದೆ’ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಸಾಧನೆಗಳನ್ನು ತೆರೆದಿಟ್ಟರು.

ಈಗ ದೇಶದ ಯೋಚನೆಯೂ ದೊಡ್ಡದಾಗಿದೆ, ಧ್ಯೇಯವೂ ಎತ್ತರದ್ದೇ ಆಗಿದೆ. ಭಾರತದಲ್ಲಿ ಅತಿ ಎತ್ತರದ ಪ್ರತಿಮೆಗಳನ್ನು, ದೊಡ್ಡ ಸ್ಟೇಡಿಯಂಗಳನ್ನು ನಿರ್ಮಿಸಲಾಗುತ್ತಿದೆ. ಜತೆಗೆ, ಡಿಜಿಟಲ್‌ ತಂತ್ರಜ್ಞಾನ, ಆರೋಗ್ಯ, ಹಣಕಾಸು, ದೂರಸಂಪರ್ಕ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧನೆಗೈಯ್ಯುತ್ತಿದೆ ಎಂದೂ ಹೇಳಿದರು. ನಾವೀಗ ಸಣ್ಣ ಕನಸು ಕಾಣುತ್ತಿಲ್ಲ. 320 ದಶಲಕ್ಷಕ್ಕಿಂತಲೂ ಅಧಿಕ ಅಂದರೆ ಅಮೆರಿಕದ ಜನಸಂಖ್ಯೆಗಿಂತಲೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ನಾವು ತೆರೆದಿದ್ದೇವೆ. ಇಂದು ಭಾರತವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನೂ ಗಳಿಸಿದೆ ಎಂದರು.

ಇದೇ ವೇಳೆ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಬಾಂಧವ್ಯ, ಸ್ನೇಹ-ಸಂಬಂಧದ ಬಗ್ಗೆಯೂ ಮೋದಿ ವಿವರಿಸಿದರು. ತಮ್ಮ ಜೀವಿತಾವಧಿಯಲ್ಲಿ ಅಯೋಧ್ಯೆ ಅಥವಾ ದ್ವಾರಕೆಗೆ ಭೇಟಿ ನೀಡಲು ಬಯಸದ ಯಾರೊಬ್ಬರೂ ಇಲ್ಲಿರಲಿಕ್ಕಿಲ್ಲ. ಭಾರತದ ಸಿಂಧಿಗಳು, ತಮಿಳರು, ಬೊಹ್ರಾ ಮುಂತಾದ ಸಮುದಾಯಗಳು ಈಗ ಇಂಡೋನೇಷ್ಯಾದಲ್ಲಿ ಬಾಳಿ-ಬದುಕಿ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡಿವೆ. ಮುಂದಿನ ಜನವರಿಯಲ್ಲಿ ಪ್ರವಾಸಿ ಭಾರತೀಯ ದಿವಸ ಆಚರಣೆ ವೇಳೆ ನೀವೆಲ್ಲರೂ ಭಾರತಕ್ಕೆ ಭೇಟಿ ನೀಡಬೇಕು ಎಂದೂ ಅವರು ಆಹ್ವಾನವಿತ್ತರು.

Advertisement

ಕಾಂಬೋಡಿಯಾ ಪ್ರಧಾನಿಗೆ ಕೋವಿಡ್‌:
ಜಿ20 ಶೃಂಗಕ್ಕೆಂದು ಆಗಮಿಸಿದ ಕಾಂಬೋಡಿಯಾ ಪ್ರಧಾನಿ ಹುನ್‌ ಸೆನ್‌ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಸ್ವದೇಶಕ್ಕೆ ವಾಪಸಾಗಿದ್ದಾರೆ. ಇತ್ತೀಚೆಗಷ್ಟೇ ನಡೆದ ಆಸಿಯಾನ್‌ ಶೃಂಗದ ಆತಿಥ್ಯವನ್ನು ಕಾಂಬೋಡಿಯಾ ವಹಿಸಿತ್ತು. ಅದರಲ್ಲಿ ಭಾರತದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರೂ ಭಾಗಿಯಾಗಿದ್ದರು.

ಡೋಲು ಬಾರಿಸಿದ ಮೋದಿ
ಬಾಲಿಯಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲು ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಉಡುಗೆ ತೊಟ್ಟು ಕಾಯುತ್ತಿದ್ದ ಭಾರತೀಯರು, “ಭಾರತ್‌ ಮಾತಾಕೀ ಜೈ’ ಎಂದು ಘೋಷಣೆ ಕೂಗಲಾರಂಭಿಸಿದರು. ಮೋದಿ ಸಭಾಂಗಣದೊಳಗೆ ಪ್ರವೇಶಿಸುವ ವೇಳೆ ಜೋರಾಗಿ ಡೋಲು ಬಾರಿಸಿ ಅವರನ್ನು ಸ್ವಾಗತಿಸಲಾಯಿತು. ಅದನ್ನು ನೋಡಿದ ಮೋದಿ ಅವರೂ ಉಳಿದ ಡ್ರಮ್ಮರ್‌ಗಳ ಜೊತೆ ಸೇರಿ ಅವರೂ ಡೋಲು ಬಾರಿಸಿದ್ದು ಕಂಡುಬಂತು.

ಮೋದಿ-ಸುನಕ್‌ ಮೊದಲ ಭೇಟಿ
ಇನ್ಫೋಸಿಸ್‌ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಅವರು ಪ್ರಧಾನಿ ಮೋದಿ ಅವರನ್ನು ಮುಖಾಮುಖಿ ಭೇಟಿಯಾದರು. ಜಿ20 ಶೃಂಗದ ವೇಳೆ ಉಭಯ ನಾಯಕರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು, ಕುಶಲೋಪರಿ ವಿಚಾರಿಸಿದರು.. ಈ ಮೊದಲು ಅಕ್ಟೋಬರ್‌ನಲ್ಲಿ ಮೋದಿ-ರಿಷಿ ದೂರವಾಣಿ ಮೂಲಕ ಮಾತನಾಡಿ, ಎರಡೂ ದೇಶಗಳ ನಡುವೆ ಸಮತೋಲಿತ ಮತ್ತು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವುದರ ಪ್ರಾಮುಖ್ಯತೆಯನ್ನು ಚರ್ಚಿಸಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next