Advertisement

Dharwad: ಪಶು ಇಲಾಖೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುದ್ದೆ ಖಾಲಿ

04:19 PM Nov 03, 2023 | Team Udayavani |

ಧಾರವಾಡ: ಬರಗಾಲದ ಛಾಯೆಯ ಸಂಕಷ್ಟದಲ್ಲಿ ರೈತರ ಜೀವನಾಡಿ ಆಗಿರುವ ಜಾನುವಾರುಗಳ ಸಂರಕ್ಷಣೆ ಹೊಣೆ ಹೊರಬೇಕಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಲ್ಲಿಯೇ ಶೇ.50ಕ್ಕಿಂತೂ ಹೆಚ್ಚು ಹುದ್ದೆಗಳೇ ಖಾಲಿಯಿವೆ…!

Advertisement

ಹೌದು. ಜಿಲ್ಲೆಯ 2.30 ಲಕ್ಷ ಜಾನುವಾರುಗಳ ಸಂರಕ್ಷಣೆ ಹೊಣೆ ಹೊತ್ತಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಾರ್ಯ ಚಟುವಟಿಕೆಗಳ ಭಾರ ಹೊರಬೇಕಾದ ಅಗತ್ಯ ಮಾನವ ಸಂಪನ್ಮೂಲವೇ ನಿಗದಿತ ಪ್ರಮಾಣಕ್ಕಿಂತಲೇ ಕುಸಿದು ಹೋಗಿದೆ. ಇಡೀ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರ ಕೊರತೆ ಜತೆಗೆ ಇಲಾಖೆಯ ಕಾರ್ಯ ಚಟುವಟಿಕೆಗಳ ಅನುಷ್ಠಾನ, ಲಸಿಕಾ ಅಭಿಯಾನಗಳಿಗೂ ಕೆಲಸದ ಒತ್ತಡದ ಭಾರ ಹೆಚ್ಚುವಂತೆ ಮಾಡಿದೆ.

ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ 1 ಉಪನಿರ್ದೇಶಕ (ಆಡಳಿತ) ಕಚೇರಿ, 1 ಪಾಲಿಕ್ಲಿನಿಕ್‌, 11 ಪಶು ಆಸ್ಪತ್ರೆ, 54 ಪಶು ಚಿಕಿತ್ಸಾಲಯ, 42 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ 5 ಸಂಚಾರಿ ಪಶು ಚಿಕಿತ್ಸಾಲಯಗಳಿವೆ. ಇದಲ್ಲದೇ ಪ್ರತಿವರ್ಷ ಲಸಿಕಾ ಕಾರ್ಯಕ್ರಮದಡಿ ಕಾಲಕಾಲಕ್ಕೆ ಜಾನುವಾರುಗಳಿಗೆ ಗಂಟಲು ಬೇನೆ, ಚಪ್ಪೆ ಬೇನೆ, ಕಾಲುಬಾಯಿ ಬೇನೆ, ಕಂದು ರೋಗದ ಲಸಿಕೆ, ಕುರಿ ಮತ್ತು ಮೇಕೆಗಳಲ್ಲಿ ಕರಳು ಬೇನೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಲಸಿಕೆ ಹಾಕುವ ಕಾರ್ಯ ಸದಾ ಇದ್ದೇ ಇರುತ್ತದೆ.

ಈಗಂತೂ ಬರಗಾಲದ ಸಂಕಷ್ಟದಲ್ಲಿ ಈ ಒತ್ತಡ ಮತ್ತಷ್ಟು ಹೆಚ್ಚಿಸಿದ್ದು, ಜಾನುವಾರುಗಳ ಮೇವು ಸೇರಿದಂತೆ ಇಲಾಖಾ ಕಾರ್ಯ ಚಟುವಟಿಕೆಗಳ ಭಾರವೂ ಹೆಚ್ಚಿಸಿದೆ. ಆದರೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಸಂಖ್ಯೆ ಮಾತ್ರ ಏರಿಕೆ ಇಲ್ಲದೇ ಕಾರ್ಯ ಭಾರದ ಒತ್ತಡ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ.

ಹುದ್ದೆಗಳು ಖಾಲಿ-ಖಾಲಿ : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಡಿಯ “ಎ, ಬಿ, ಸಿ, ಡಿ’ ಎಂಬ ನಾಲ್ಕು ದರ್ಜೆಯಲ್ಲಿ ಮಂಜೂರಾದ 448 ಹುದ್ದೆಗಳ ಪೈಕಿ 206 ಹುದ್ದೆಗಳಷ್ಟೇ ಭರ್ತಿಯಾಗಿದ್ದು, 242 ಹುದ್ದೆಗಳು ಖಾಲಿ ಇವೆ. ಈ ಪೈಕಿ “ಎ’ ದರ್ಜೆಯ 78 ಹುದ್ದೆಗಳ ಪೈಕಿ 48 ಭರ್ತಿಯಿದ್ದರೆ 29 ಖಾಲಿಯಿದ್ದರೆ, “ಸಿ’ ದರ್ಜೆಗೆ ಮಂಜೂರಾದ 191 ಹುದ್ದೆಗಳ ಪೈಕಿ 104 ಭರ್ತಿಯಾಗಿದ್ದರೆ 87 ಖಾಲಿ ಉಳಿದಿವೆ. ಇನ್ನು “ಡಿ’ ದರ್ಜೆಯ 168 ಹುದ್ದೆಗಳ ಪೈಕಿ 46 ಭರ್ತಿಯಾಗಿದ್ದರೆ 122 ಹುದ್ದೆಗಳು ಖಾಲಿಯಿದ್ದು, ಪಾಲಿಕ್ಲಿನಿಕ್‌ ಗೆ ಮಂಜೂರಾದ 4 ಹುದ್ದೆಗಳು ಭರ್ತಿಯಾಗದೇ ಹಾಗೇ ಖಾಲಿ ಇವೆ. ಈ ಪೈಕಿ ಜಿಲ್ಲೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳು (ವಿಸ್ತರಣೆ)-4, ಮುಖ್ಯ ಪಶು ವೈದ್ಯಾಧಿಕಾರಿಗಳು(ಆಸ್ಪತ್ರೆ)-3, ಮುಖ್ಯ/ಹಿರಿಯ ಪಶು ವೈದ್ಯಾಧಿಕಾರಿಗಳು-4, ಹಿರಿಯ/ಪಶು ವೈದ್ಯಾಧಿಕಾರಿಗಳು-20, ಜಾನುವಾರು ಅಧಿಕಾರಿಗಳು-3, ಹಿರಿಯ ಪಶು ವೈದ್ಯಕೀಯ
ಪರೀಕ್ಷಕರು-21, ಪಶು ವೈದ್ಯಕೀಯ ಪರೀಕ್ಷಕರು-22, ಕಿರಿಯ ಪಶು ವೈದ್ಯಕೀಯ ಪರೀಕ್ಷಕರು-33, ವಾಹನ ಚಾಲಕರು-5, ಬೆರಳಚ್ಚುಗಾರರು-1, ದ್ವಿತೀಯ ದರ್ಜೆ ಸಹಾಯಕರು-1 ಹುದ್ದೆಗಳು ದಶಕಗಳಿಂದಲೇ ಭರ್ತಿಯಾಗದೇ ಹಾಗೇ ಉಳಿದಿವೆ.

Advertisement

ಮುಖ್ಯ ಹಿರಿಯ ಪಶು ವೈದ್ಯಾಧಿಕಾರಿಗಳ ಕೊರತೆ
ಜಿಲ್ಲೆಯಲ್ಲಿ ಮಂಜೂರಾತಿ ಇರುವ 76 ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿಗಳ ಹುದ್ದೆಗಳಲ್ಲಿ 47 ಭರ್ತಿಯಿದ್ದು, ಉಳಿದ 29 ಹುದ್ದೆಗಳು ಖಾಲಿಯಾಗಿಯೇ ಇವೆ. ಈ ಪೈಕಿ ಧಾರವಾಡ ತಾಲೂಕಿನ 19 ಹುದ್ದೆಗಳಲ್ಲಿ 5, ಹುಬ್ಬಳ್ಳಿ ತಾಲೂಕಿನ 19 ಹುದ್ದೆಗಳಲ್ಲಿ 2, ಕಲಘಟಗಿ ತಾಲೂಕಿನ 14 ಹುದ್ದೆಗಳಲ್ಲಿ 7, ಕುಂದಗೋಳ ತಾಲೂಕಿನ 12 ಹುದ್ದೆಗಳಲ್ಲಿ 9, ನವಲಗುಂದ ತಾಲೂಕಿನ 8 ಹುದ್ದೆಗಳಲ್ಲಿ 5 ಭರ್ತಿಯಾಗದೇ ಖಾಲಿ ಉಳಿದಿವೆ. ಇದಲ್ಲದೇ ಅಣ್ಣಿಗೇರಿಗೆ ಮಂಜೂರಾದ 3 ಹಾಗೂ ಅಳ್ನಾವರಕ್ಕೆ ಮಂಜೂರಾದ 1 ಹುದ್ದೆಗಳು ಸಹ ಭರ್ತಿಯಾಗದೇ ಹಾಗೇ ಇವೆ. ಇದರಿಂದ ಜಾನುವಾರುಗಳಿಗೆ ನಿಗದಿತ ಚಿಕಿತ್ಸೆಗೂ ಸಂಕಷ್ಟ ಎದುರಾಗಿದ್ದರೆ, ಒಬ್ಬರ ಮೇಲೆಯೇ 2-3 ವೈದ್ಯರ ಕೆಲಸದ ಒತ್ತಡವೂ ಬೀಳುವಂತಾಗಿದೆ. ಹೀಗಾಗಿ ಕೆಲ ಕಡೆ 2-3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಒಬ್ಬರೇ ವೈದ್ಯರು ನೋಡಿಕೊಳ್ಳುವ ಅನಿವಾರ್ಯತೆ ಇದೆ.

ಜಿಲ್ಲೆಗೆ ಮಂಜೂರಾತಿ ಇರುವ ಹುದ್ದೆಗಳ ಪೈಕಿ ಅರ್ಧದಷ್ಟು ಖಾಲಿಯಿದ್ದು, ಈ ಹುದ್ದೆಗಳ ಭರ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕೊರತೆಯ ಮಧ್ಯೆಯೂ ಪ್ರಸಕ್ತ ಸಾಲಿನ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ 1.76 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.95.97 ಸಾಧನೆ ಮಾಡಲಾಗಿದ್ದು, ಇದರ ಜತೆಗೆ ಚರ್ಮಗಂಟು ರೋಗಕ್ಕೂ ನಿಗದಿತ ಸಮಯಕ್ಕೆ ಲಸಿಕೆ ಹಾಕುವ ಮೂಲಕ ನಿಯಂತ್ರಣದಲ್ಲಿ ಇಡಲಾಗಿದೆ.
*ರವಿ ಸಾಲಿಗೌಡರ,
ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

*ಶಶಿಧರ್‌ ಬುದಿ

Advertisement

Udayavani is now on Telegram. Click here to join our channel and stay updated with the latest news.

Next