Advertisement
ಬೆಳಗಾವಿ ಲೋಕಸಭಾ ಕ್ಷೇತ್ರ ಅರಭಾವಿ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೈಲಹೊಂಗಲ, ಗೋಕಾಕ, ರಾಮದುರ್ಗ ಮತ್ತು ಸವದತ್ತಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಕಿತ್ತೂರು-ಖಾನಾಪುರ ವಿಧಾನಸಭಾ ಕ್ಷೇತ್ರಗಳು ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.
Related Articles
Advertisement
ಅರಭಾವಿಗೆ ಅಚ್ಚರಿಯ ಹೆಸರು: ಈಗಿನ ಮಾಹಿತಿಯ ಪ್ರಕಾರ ಈ ಬಾರಿ ಅರಭಾವಿ ಕ್ಷೇತ್ರಕ್ಕೆ ಹೊಸ ಹೆಸರು ಕೇಳಿ ಬರುತ್ತಿದೆ. ಕಳೆದ ಬಾರಿ ಅರವಿಂದ ದಳವಾಯಿ ಸ್ಪರ್ಧೆ ಮಾಡಿದ್ದರು. ಈ ಬಾರಿಯೂ ಸಹ ದಳವಾಯಿ ಅಲ್ಲದೆ ಜಿಪಂ ಮಾಜಿ ಸದಸ್ಯ ರಮೇಶ ಉಟಗಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಜೆಡಿಎಸ್ ಮುಖಂಡ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಜೆಡಿಎಸ್ ಬಿಡುವ ತೀರ್ಮಾನ ಮಾಡಿರುವ ಭೀಮಪ್ಪ ಗಡಾದ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ದಿಂದ ಸ್ಪರ್ಧೆ ಮಾಡಿದ್ದ ಭೀಮಪ್ಪ ಗಡಾದ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರಿಗೆ ತೀವ್ರ ಪೈಪೋಟಿ ಒಡ್ಡಿ 40 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದು ಇಲ್ಲಿ ಗಮನಿಸಬೇಕಾದ ಸಂಗತಿ.
ಇನ್ನು ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಕ್ಷೇತ್ರದಿಂದ ಈ ಬಾರಿ ಜೈನ, ಮರಾಠಾ ಅಥವಾ ಲಿಂಗಾಯತ ಸಮಾಜದ ವ್ಯಕ್ತಿಗೆ ಟಿಕೆಟ್ ಕೊಡಬೇಕೆಂಬ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರಿದ್ದಾರೆ. ಅದರಂತೆ ಈಗಾಗಲೇ ಜಿಪಂ ಮಾಜಿ ಸದಸ್ಯ ರಮೇಶ ಗೋರಲ್, ಚಂದ್ರಹಾಸ ಅಣ್ವೇಕರ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ರಮೇಶ ಕುಡಚಿ ಸಹ ಈ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದಾರೆ.
ಬೆಳಗಾವಿ ದಕ್ಷಿಣದಂತೆ ಸವದತ್ತಿ ಕ್ಷೇತ್ರ ಸಹ ಕುತೂಹಲಕ್ಕೆ ಕಾರಣವಾಗಿದೆ. ಹಾಲಿ ಶಾಸಕರಾಗಿದ್ದ ಆನಂದ ಮಾಮನಿ ನಿಧನದ ನಂತರ ಈ ಕ್ಷೇತ್ರದಲ್ಲಿ ಬಿಜೆಪಿ ಒಂದು ರೀತಿಯಲ್ಲಿ ಕಳೆಗುಂದಿದೆ. ಶಕ್ತಿ ಕಳೆದುಕೊಂಡಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಒಳ್ಳೆಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಚಿಂತನೆಯಲ್ಲಿ ರಾಜ್ಯ ನಾಯಕರಿದ್ದಾರೆ. ಟಿಕೆಟ್‌ಬಯಸಿ ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡರ, ಸೌರಬ್ ಛೋಪ್ರಾ ಹಾಗೂ ಉಮೇಶ ಬಾಳಿ ಅರ್ಜಿ ಸಲ್ಲಿಸಿದ್ದಾರೆ. ಈ ನಾಲ್ವರ =ಹೊರತಾಗಿ ಹೊರಗಿನ ನಾಯಕರು ಇಲ್ಲಿಂದ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳು ಸಹ ದಟ್ಟವಾಗಿ ಕೇಳಿ ಬರುತ್ತಿವೆ. ಸವದತ್ತಿ, ಅರಭಾವಿ, ರಾಮದುರ್ಗ, ಗೋಕಾಕ, ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ಮೇಲೆ ವಿಶೇಷ ಗಮನ ಹರಿಸಿರುವ ಕಾಂಗ್ರೆಸ್ ನಾಯಕರು ಅದಕ್ಕೆ ಬೇಕಾದ ಕಾರ್ಯತಂತ್ರಗಳನ್ನು ಈಗಿನಿಂದಲೇ ಸಿದ್ಧಪಡಿಸುತ್ತಿದ್ದಾರೆ. ಅಭ್ಯರ್ಥಿಗಳ ಹೆಸರು ಅಂತಿಮವಾಗುತ್ತಿದ್ದಂತೆ ಚುನಾವಣೆಯ ತಾಲೀಮಿಗೆ ಮತ್ತಷ್ಟು ರಂಗು ಬರಲಿದೆ.
ಬೆಳಗಾವಿ ಉತ್ತರಕ್ಕೆ ಪೈಪೋಟಿ
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಸಾಕಷ್ಟು ಪೈಪೋಟಿ ಕಂಡುಬಂದಿದೆ. ಈಗಾಗಲೇ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಮಾಜಿ ಶಾಸಕರಾದ ಫಿರೋಜ ಸೇಠ ಪ್ರಮುಖರು. ಇದಲ್ಲದೆ ಮಾಜಿ ಸಚಿವ ಹಾಗೂ ಹಿರಿಯ ಮುಖಂಡ ಎ.ಬಿ. ಪಾಟೀಲ ಸಹ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಫಿರೋಜ ಸೇಠ ಅಲ್ಲದೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಟಕದ ಅಧ್ಯಕ್ಷ ರಾಜು ಸೇಠ, ಹಿರಿಯ ಮುಖಂಡ ಹಸನ್ ಭಾವಿಕಟ್ಟಿ, ಅಜೀಮ ಪಟವೇಗಾರ, ಸಿದ್ದಿಕ್ ಅಂಕಲಗಿ ಅರ್ಜಿ ಸಲ್ಲಿಸಿದ್ದಾರೆ.
ಇದರಲ್ಲಿ ಫಿರೋಜ ಸೇಠ ಇಲ್ಲವೇ ರಾಜು ಸೇಠ ಅವರಿಗೆ ಟಿಕೆಟ್ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಗೋಕಾಕದಲ್ಲಿ ಅಶೋಕ ಪೂಜಾರಿ ಬಿಟ್ಟರೆ ಬೇರೆಯವರ ಹೆಸರು ಪ್ರಸ್ತಾಪವಾಗಿಲ್ಲ. ರಾಮದುರ್ಗ ಕ್ಷೇತ್ರದಿಂದ ಮಾಜಿ ಶಾಸಕ ಅಶೋಕ ಪಟ್ಟಣ ಹೊರತುಪಡಿಸಿ ರಾಜೇಂದ್ರ ಪಾಟೀಲ ಸೇರಿದಂತೆ ಇನ್ನೂ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಮತ್ತು ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಏಳು ಕ್ಷೇತ್ರಗಳಲ್ಲಿ ಜಯ ಗಳಿಸುವ ಗುರಿ ಹೊಂದಿದ್ದೇವೆ. ವಾತಾವರಣ ಸಹ ನಮ್ಮ ಪರವಾಗಿದೆ. ಮುಖ್ಯವಾಗಿ ಈ ಬಾರಿ ಬಿಜೆಪಿಯಿಂದ ಮೂರರಿಂದ ನಾಲ್ಕು ಕ್ಷೇತ್ರಗಳು ನಮ್ಮ ವಶವಾಗಲಿವೆ. –ವಿನಯ ನಾವಲಗಟ್ಟಿ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.
ಕೇಶವ ಆದಿ