Advertisement

ಹದಿನೈದಕ್ಕೂ ಹೆಚ್ಚು ಮರ ಧರೆಗೆ

12:44 AM Apr 18, 2019 | Lakshmi GovindaRaju |

ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸುರಿದ ಗಾಳಿ ಸಹಿತ ಮಳೆಗೆ ವಿವಿಧೆಡೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ, ನಿರಂತರವಾಗಿ ಎರಡು ಗಂಟೆ ಕಾಲ ಸುರಿದ ಪರಿಣಾಮ ಪ್ರಮುಖ ಜಂಕ್ಷನ್‌ಗಳು ಹಾಗೂ ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

Advertisement

ಮೆಜೆಸ್ಟಿಕ್‌, ಮಲ್ಲೇಶ್ವರ, ಶಿವಾಜಿನಗರ, ಕೆ.ಆರ್‌.ಮಾರುಕಟ್ಟೆ, ವಸಂತನಗರ, ಜಯನಗರ, ಕಾಚರಕನಹಳ್ಳಿ, ಯಲಹಂಕ ಸೇರಿದಂತೆ ಹಲವು ಭಾಗಗಳಲ್ಲಿ ತೀವ್ರ ಮಳೆಯಾದ ಪರಿಣಾಮ ರಸ್ತೆಗಳಲ್ಲಿ ನೀರು ಹರಿಯುತ್ತಿದ್ದ ದೃಶ್ಯಗಳು ಕಂಡುಬಂದವು.

ಟಿನ್‌ ಫ್ಯಾಕ್ಟರಿ, ನೃಪತುಂಗ ರಸ್ತೆ, ಆರ್‌.ಟಿ.ನಗರ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು. ಜತೆಗೆ ಹಲವೆಡೆ ಮರಗಳು ಉರುಳಿಬಿದ್ದ ಪರಿಣಾಮ ವಾಹನಗಳು ಜಖಂಗೊಂಡ ಘಟನೆಯೂ ನೆಡೆದಿದೆ. ಇದರೊಂದಿಗೆ ಕಮ್ಮನಹಳ್ಳಿ, ಬಾಣಸವಾಡಿ ಸೇರಿದಂತೆ ಕೆಲವೆಡೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.

15ಕ್ಕೂ ಹೆಚ್ಚು ಮರ ಧರೆಗೆ: ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ಸದಾಶಿವನಗರ, ಆರ್‌.ಟಿ.ನಗರ, ಲುಂಬಿಣಿ ಗಾರ್ಡನ್‌, ನಾಗರಬಾವಿ, ಕೆ.ಆರ್‌.ಪುರ, ಜಯಮಹಲ್‌, ಕ್ವೀನ್ಸ್‌ ರಸ್ತೆ, ಜಯನಗರ, ಶಾಂಪುರ, ಆರ್‌.ಆರ್‌.ನಗರ, ಹೆಬ್ಟಾಳ, ಎನ್‌.ಆರ್‌.ಕಾಲೋನಿ, ಆನಂದನಗರ ಸೇರಿ ಹಲವೆಡೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಯಸ್ಸಾದ ಹಾಗೂ ಒಣಗಿದ ಮರಗಳ ತೆರವಿಗೆ ಬಿಬಿಎಂಪಿ ಅರಣ್ಯ ವಿಭಾಗ ಮುಂದಾಗದ ಪರಿಣಾಮ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸುತ್ತಲೇ ಇವೆ. ಆದರೂ ಪಾಲಿಕೆ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಎಲ್ಲಿ, ಎಷ್ಟು ಪ್ರಮಾಣ ಮಳೆ?: ಬೆಂಗಳೂರು ಉತ್ತರ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಬಾಣಸವಾಡಿಯಲ್ಲಿ 73 ಮಿ.ಮೀ ಮಳೆಯಾಗಿದೆ. ಉಳಿದಂತೆ ನಾಗರಬಾವಿ 26.5, ಹೆಮ್ಮಿಗೇ ಪುರ 15.5, ಬಿದರಹಳ್ಳಿ 14.5, ಕೊಟ್ಟಿಗೇಪಾಳ್ಯ 14 ಮಿ.ಮೀ, ಕಣ್ಣೂರು 8.5, ಮಂಡೂರು 6, ಕೆಂಗೇರಿ 9.5, ಆರ್‌.ಆರ್‌.ನಗರ 6.5, ಸಾರಕ್ಕಿ, ಯಲಹಂಕ 5, ಮಾರೇನಹಳ್ಳಿ 3, ಬೇಗೂರಿನಲ್ಲಿ 2 ಮಿ.ಮೀ ಮಳೆಯಾಗಿರುವುದು ವರದಿಯಾಗಿದೆ.

ಕೆರೆಗಳಾದ ಅಂಡರ್‌ಪಾಸ್‌ಗಳು: ಮಳೆಯಿಂದ ನಗರದ ಕೇಂದ್ರ ಭಾಗದ ಹಲವಾರು ಅಂಡರ್‌ ಪಾಸ್‌ಗಳು ಅಕ್ಷರಶಃ ಕೆರೆಗಳಂತಾದ ಪರಿಣಾಮ ವಾಹನ ಸವಾರರು ಸಮಸ್ಯೆ ಎದುರಿಸಿದರು. ಓಕಳಿಪುರ, ಶೇಷಾದ್ರಿಪುರ ರೈಲ್ವೆ ಕೆಳಸೇತುವೆ, ಕೆ.ಆರ್‌.ವೃತ್ತ, ಸ್ಯಾಂಕಿ ರಸ್ತೆ ಅಂಡರ್‌ ಪಾಸ್‌, ಹಳೇ ಮದ್ರಾಸ್‌ ರಸ್ತೆಯ ಬೆನ್ನಿಗಾನಹಳ್ಳಿ ರೈಲ್ವೆ ಅಂಡರ್‌ಪಾಸ್‌, ಟಿನ್‌ಫ್ಯಾಕ್ಟರಿ, ಹೆಬ್ಟಾಳ ಮೇಲ್ಸೇತುವೆ ಕೆಳಗೆ, ಚಾಲುಕ್ಯ ವೃತ್ತ ಮತ್ತು ಟೆಂಡರ್‌ಶ್ಯೂರ್‌ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಯಿತು.

ಉಕ್ಕಿದ ರಾಜಕಾಲುವೆಗಳು: ನಗರದಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ನಗರದ ಹಲವಾರು ರಾಜಕಾಲುವೆಗಳು ಉಕ್ಕಿ ಹರಿದಿದ್ದು, ಸಮೀಪದ ವಸತಿ ಪ್ರದೇಶಗಳಿಗೆ ಮಳೆನೀರು ನುಗ್ಗಿತ್ತು. ಮಹದೇವಪುರ, ಬೊಮ್ಮನಹಳ್ಳಿ ವಲಯದ ಕೆಲವು ಕಡೆ ರಾಜಕಾಲುವೆಗಳು ಉಕ್ಕಿ ಹರಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಲಿಸುತ್ತಿದ್ದ ಕಾರಿಗೆ ಬೆಂಕಿ: ಬಾಣಸವಾಡಿಯ ಸುಬ್ಬಣ್ಣಪಾಳ್ಯ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇನ್ನು ಬಾಣಸವಾಡಿ, ಕಾಚರಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ರಸ್ತೆಗಳಲ್ಲಿ ರಸ್ತೆಯಲ್ಲಿ ಹರಿದ ಮಳೆನೀರಲ್ಲಿ ವಾಹನಗಳು ಮುಳುಗಿರುವ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next