ರಬಕವಿ–ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜುಲೈ 25 ರಿಂದ ಇಲ್ಲಿಯವರೆಗೆ 65 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದ ವರದಿಯಾಗಿದೆ ಎಂದು ರಬಕವಿ- ಬನಹಟ್ಟಿ ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ 50 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬಿದ್ದ ಮನೆಗಳ ಕುರಿತು ಸರ್ವೆ ಕಾರ್ಯವನ್ನು ಆರಂಭಿಸಲಾಗಿದೆ. ಪೂರ್ಣ ಬಿದ್ದ ಮತ್ತು ಭಾಗಶಃ ಹಾನಿಗೆ ಒಳಗಾದ ಮನೆಗಳ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದರು.
ಸಂಕಷ್ಟದಲ್ಲಿ ನೇಕಾರಿಕೆಯ ಕುಟುಂಬಗಳು: ರಬಕವಿ ಬನಹಟ್ಟಿ ತಾಲ್ಲೂಕಿನ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಜನರು ನೇಕಾರಿಕೆಯನ್ನು ಅವಲಂಬಿಸಿದ್ದಾರೆ. ಈಗ ಮಳೆಯಿಂದಾಗಿ ನೇಕಾರರ ಮಗ್ಗಗಳಿಗೆ ಕೂಡಾ ತೊಂದರೆಯಾಗಿದೆ. ಇದರಿಂದಾಗಿ ಜೀವನ ನಡೆಸಲು ತೊಂದರೆಯಾಗುತ್ತಿದೆ.
ಮೇಲ್ಮುದ್ದಿ ಮತ್ತು ಜಂತಿ ಮನೆಗಳನ್ನು ಹೊಂದಿದವರು ವಾಸಕ್ಕಾಗಿ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಇಲ್ಲಿಯ ವಾಸಿಗಳು ರಾತ್ರಿಯ ಸಮಯದಲ್ಲಿ ಮನೆಯಲ್ಲಿ ಮಲಗಬಾರದು ಎಂದು ತಹಶೀಲ್ದಾರ್ ಇಂಗಳೆ ತಿಳಿಸಿದ್ದಾರೆ.
ಮಳೆಯಿಂದ ಹಾನಿಗೆ ಒಳಗಾದ ಕುಟುಂಬದ ಸದಸ್ಯರು 08353- 230555 ಸಹಾಯವಾಣಿಗೆ ಸಂಪರ್ಕಿಸಲು ಕೋರಲಾಗಿದೆ.
ಮಳೆಯಿಂದ ಹಾನಿಗೆ ಒಳಗಾದ ಮನೆಗಳ ಕುರಿತು ಆಯಾ ಇಲಾಖೆಯವರು ಸರ್ವೆ ಕಾರ್ಯವನ್ನು ಆರಂಭಿಸಿದ್ದಾರೆ. ಸರ್ವೆ ಕಾರ್ಯವನ್ನು ಪಾರದರ್ಶಕತೆಯಿಂದ ನಿರ್ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮತ್ತು ಭಾಗಶಃ ಬಿದ್ದ ಮನೆಗಳಿಗೆ ಆದಷ್ಟು ಬೇಗನೆ ಪರಿಹಾರ ನೀಡಲಾಗುವುದು.
– ಸಿದ್ದು ಸವದಿ, ಶಾಸಕರು ತೇರದಾಳ ಮತಕ್ಷೇತ್ರ