Advertisement

ನಾಮಾವಶೇಷಗೊಳ್ಳುತ್ತಿರುವ 50ಕ್ಕೂ ಹೆಚ್ಚು ಕೆರೆಗಳು

09:13 PM Jul 05, 2019 | Sriram |

ಕೋಟೇಶ್ವರ: ಗೋಪಾಡಿ ಹಾಗೂ ಬೀಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಿಂದೆ ಇದ್ದ 51ಕ್ಕೂ ಹೆಚ್ಚು ಕೆರೆ ಹಾಗೂ ಗುಮ್ಮಿಗಳು ಹೂಳೆತ್ತದೇ ಬಹುತೇಕ ನಾಮವಾಶೇಷವಾಗಿದೆ. ಕೆಲವು ಕಡೆಗಳಲ್ಲಿ, ಇಲ್ಲಿ ಕೆರೆ ಇತ್ತೇ ಎಂದು ಸಂಶಯಪಡುವಷ್ಟರ ಮಟ್ಟಿಗೆ ಕೆರೆಗಳು ಮುಚ್ಚಿಹೋಗಿವೆ. ಕೆಲವೆಡೆ ಹೂಳೆತ್ತುವ ಕಾರ್ಯ ನಡೆದಿದೆ.

Advertisement

ಸರಕಾರಿ ಅಡಂಗಲ ಪ್ರಕಾರ 51 ಕೆರೆ
ಕುಂಬ್ರಿಯಿಂದ ಕೊಮೆ ತನಕ 1904ರ ಅಡಂಗಲ ಪ್ರಕಾರ ಒಟ್ಟು 51ಕ್ಕೂ ಮಿಕ್ಕಿ ಕೆರೆ ಹಾಗೂ ಗುಮ್ಮಿಗಳಿದ್ದವು. ಅವುಗಳು ಅಂದಿನ ಆ ಕಾಲಘಟ್ಟದಲ್ಲಿ ಆ ಭಾಗದ ಕೃಷಿಕರಿಗೆ ಆಧಾರ ವಾಗಿದ್ದವು. ಬಹುತೇಕ ಕಡೆ ಕೃಷಿಕರೇ ನಿರ್ವಹಣೆ ಮಾಡಿ ಕೃಷಿಗೆ ನೀರುಣಿಸುತ್ತಿದ್ದರು. ಕಾಲಕ್ರಮೇಣ ನಿರ್ವಹಣೆ ಜವಾಬ್ದಾರಿ ಹೊರುವವರಿಲ್ಲದೆ ಕೆರೆಯಲ್ಲಿ ಕೆಸರು ತುಂಬಿ, ಕಳೆ ಬೆಳೆದು ಕ್ರಮೇಣ ಆಸು-ಪಾಸಿನ ಹೊಯಿಗೆ ಸಹಿತ ಮಣ್ಣು ಆವರಿಸಿ ಕೆರೆ ಮಾಯವಾದವು.

ಬೀಜಾಡಿಯಲ್ಲಿ 27 ಕೆರೆ
ಬೀಜಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಧಿಕೃತವಾಗಿ 27 ಕೆರೆಗಳಿವೆ. ಅವುಗಳಲ್ಲಿ ಮೂಡುಕೊಳ, ಗುಂಡಿಕೆರೆ, ಬೆಳ್ಳಂಗ್‌ ಕೆರೆ, ಥೀ ಕೆರೆ, ನೀರಶ್ವಾಲೆ ಕೆರೆ ಹಾಗೂ ಭಟ್ರ ಕೆರೆ ಹೂಳೆತ್ತಲಾಗಿದ್ದು ಉದ್ಯೋಗ ಖಾತ್ರಿ ಯೋಜನೆಯಡಿ 1.37 ಕೋಟಿ ರೂ. ಮೊತ್ತವನ್ನು ಕಾಮಗಾರಿಗೆ ವ್ಯಯಿಸಲಾಗಿದೆ. ಮಿಕ್ಕುಳಿದ ಕಟ್ಟಿನಗುಂಡಿ, ಗೋವಿನ ಕೆರೆ, ಹುಣ್ಸೆಕೆರೆ, ಚಾತ್ರಕೆರೆ, ಎಳ್ಳುಕೆರೆ, ಮಠದಕೆರೆ, ಚಿಕ್ಕುಕೆರೆ ಮುಂತಾದವು ಹೂಳೆತ್ತದಿದ್ದಲ್ಲಿ ನಾಮಾವಶೇಷವಾಗಲಿದೆ. ಗೋಪಾಡಿಯ ಗೋವಿಂದ ಕೆರೆ, ಗಾಣಿಗ ಕೆರೆ, ಕಲ್ಕೇರಿ ಕರೆ, ಗೋಳಿಬೆಟ್ಟು ಕೆರೆ, ದಾಸರ ಕೆರೆ ಅಭಿವೃದ್ಧಿಯಾಗಬೇಕಿದೆ. ಈ ಬಾರಿ ಮಳೆಯೂ ಕಡಿಮೆ ಇರುವುದರಿಂದ ಇಂತಹ ಕೆರೆಗಳ ಹೂಳೆತ್ತುವುದರಿಂದ ಮುಂದಿನ ಬೇಸಗೆಯಲ್ಲಿ ನೀರಿನ ಹಾಹಾಕಾರವನ್ನು ಸ್ವಲ್ಪವಾದರೂ ತಡೆಯಬಹುದಾಗಿದೆ.

ಕಾರ್ಮಿಕರ ಕೊರತೆ
ಇಂತಹ ಕೆರೆಗಳ ಹೂಳೆತ್ತಲು ಅವಕಾಶ ಹಾಗೂ ಅನುದಾನಗಳಿವೆ. ಆದರೆ ಈ ಯೋಜನೆಯಲ್ಲಿ ನೀಡುವ ದಿನದ ಗರಿಷ್ಠ ಸಂಬಳ ಕಾರ್ಮಿಕರ ನಿತ್ಯ ಜೀವನಕ್ಕೂ ಸಾಲುತ್ತಿಲ್ಲ. ಆದ್ದರಿಂದ ಕಾರ್ಮಿಕರ ಕೊರತೆಯಾಗಿ ಕಾಮಗಾರಿ ನನೆಗುದಿಗೆ ಬಿದ್ದಿದೆ.

ವಿವಿಧ ಕಾರಣದಿಂದ ವಿಳಂಬ
ಬೀಜಾಡಿ ಪರಿಸರದ ಆಯ್ದ ಕೆರೆಗಳ ಹೂಳೆತ್ತುವ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ ಉದ್ಯೋಗ ಖಾತ್ರಿ ಯೋಜನೆಯಡಿ ಮೂರು ತಂಡಗಳು ಕಾಮಗಾರಿಯ ಹೊಣೆ ಹೊತ್ತಿವೆ. ವಿವಿಧ ಕಾರಣಗಳಿಂದಾಗಿ ಕಾಮಗಾರಿ ಮುಂದುವರಿಸಲು ವಿಳಂಬವಾಗುತ್ತಿದೆ.
-ಗಣೇಶ, ಪಿ.ಡಿ.ಒ., ಬೀಜಾಡಿ ಗ್ರಾ.ಪಂ.

Advertisement

ಹೂಳೆತ್ತುವುದು ಅಗತ್ಯ
ಇಲ್ಲಿನ 50ಕ್ಕೂ ಮಿಕ್ಕಿ ಕೆರೆಗಳು ಹೇಳಹೆಸರಿಲ್ಲದಂತಾಗಿದೆ. ಅವುಗಳನ್ನು ಗುರುತಿಸಿ ಹೂಳೆತ್ತಿದ್ದಲ್ಲಿ ಬೀಜಾಡಿ ಹಾಗೂ ಗೋಪಾಡಿಯ ನಿವಾಸಿಗಳಿಗೆ ಮುಂದಿನ ವರ್ಷಗಳಲ್ಲಿ ಎದುರಾಗುವ ಜಲಕ್ಷಾಮವನ್ನು ನಿಭಾಯಿಸಬಹುದು.
-ಶೇಷಗಿರಿ ಗೋಟ, ಹಿರಿಯ ಕೃಷಿಕರು

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next