ಬೆಂಗಳೂರು: ಆಕ್ಸಿಜನ್ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ನಗರದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ (ಕಿಮ್ಸ್) ಚಿಕಿತ್ಸೆ ಪಡೆಯುತ್ತಿದ್ದ 50ಕ್ಕೂ ಹೆಚ್ಚು ಕೋವಿಡ್ 19 ಸೋಂಕುಪೀಡಿತರನ್ನು ಹಾಗೂ ಇತರೆ ರೋಗಿಗಳನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.
ಆಸ್ಪತ್ರೆಯಲ್ಲಿ 210 ಕೋವಿಡ್ 19 ಸೋಂಕಿತರು ಸೇರಿದಂತೆ ಒಟ್ಟು 350 ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ಆಕ್ಸಿಜನ್ ಸಿಲಿಡರ್ ಸರಬರಾಜಾಗಿರಲಿಲ್ಲ. ಸರಬರಾಜುದಾರರು ಸೋಮವಾರ ರಾತ್ರಿ ಸಿಲಿಡರ್ ಸರಬರಾಜು ಮಾಡುವುದಾಗಿ ಹೇಳಿದ್ದರಾದರೂ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡದ ಹಿನ್ನಲೆಯಲ್ಲಿ ಸಮಸ್ಯೆ ಎದುರಾಗಿದೆ.
ಇದರಲ್ಲಿ 27 ಮಕ್ಕಳು, 19 ಜನ ಗಂಭೀರ ಸಮಸ್ಯೆಯ ರೋಗಿಗಳಿದ್ದು, ತಕ್ಷಣ ರೋಗಿಗಳನ್ನು ಆ್ಯಂಬುಲೆನ್ಸ್ ಗಳ ಮೂಲಕ ವಿಕ್ಟೋರಿಯಾ, ಬೌರಿಂಗ್ ಹಾಗೂ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗಳಿಗೆ ವರ್ಗಾಯಿಸಿಸಲಾಗಿದೆ ಮತ್ತು ಎಲ್ಲಾ ರೋಗಿಗಳಿಗೆ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ.
Related Articles
ಕಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿ ಸಕಾಲದಲ್ಲಿ ಎಚ್ಚೆತ್ತು ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ವರ್ಗಾಯಿಸಿದ್ದರಿಂದ ಅನಾಹುತ ತಪ್ಪಿದಂತಾಗಿದೆ.
ಈ ಕುರಿತು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಿಮ್ಸ್ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಎಂಬ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ 40ಕ್ಕೂ ಹೆಚ್ಚು ರೋಗಿಗಳನ್ನು ವಿಕ್ಟೋರಿಯಾ, ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ 20 ದೊಡ್ಡ ಗಾತ್ರದ ಆಕ್ಸಿಜನ್ ಸಿಲಿಂಡರ್‌ಗಳನ್ನು ಕಿಮ್ಸ್ ಗೆ ಕಳುಹಿಸಲಾಗಿದೆ ಮಾತ್ರವಲ್ಲದೇ ಮುಂಜಾಗರೂಕತಾ ಕ್ರಮವಾಗಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 40 ಹಾಸಿಗೆಗಳನ್ನು ಸಿದ್ಧಪಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಲಿಕ್ವಿಡ್ ಆಕ್ಸಿಜನ್ ತಯಾರಿಕಾ ಕಂಪನಿಯಿಂದ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ, ಇದರಿಂದ ಆಕ್ಸಿಜನ್ ಬೆಂಬಲದೊಂದಿಗೆ ಚಿಕಿತ್ಸೆಯಲ್ಲಿದ್ದ ರೋಗಿಗಳಿಗೆ ಕೊರತೆ ಉಂಟಾಗಿದೆ. ಕೂಡಲೇ ಸರ್ಕಾರಿ ಅಧಿಕಾರಿಗಳ ನೆರವು ಪಡೆದು ಕೃತಕ ಉಸಿರಾಟ ವ್ಯವಸ್ಥೆಯ ನಿಗಾದಲ್ಲಿದ್ದ ರೋಗಿಗಳನ್ನು ಇತರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಹಿಸಲಾಗಿದೆ. ಸರ್ಕಾರವು ಅಗತ್ಯ ಆಕ್ಸಿಜನ್ ಪೂರೈಸಿದೆ, ಇದರಿಂದ ಸಂಭಾವ್ಯ ಅನಾಹುತ ತಪ್ಪಿದ್ದು ಸಕಾಲದಲ್ಲಿ ನೆರವು ನೀಡಿದಕ್ಕೆ ಋಣಿಯಾಗಿದ್ದೇವೆ ಎಂದು ಕಿಮ್ಸ್ ಆಡಳಿತ ಮಂಡಳಿ ತಿಳಿಸಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ
ಘಟನೆ ಕುರಿತು ಟ್ವಿಟ್ ನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಕಿಮ್ಸ್ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ಸಮಸ್ಯೆಯಿಂದ ಕೋವಿಡ್ ಸೋಂಕಿತರೂ ಸೇರಿದಂತೆ ಅನೇಕ ರೋಗಿಗಳು ಪರದಾಡುತ್ತಿರುವ ಸುದ್ದಿ ಗಮನಕ್ಕೆ ಬಂದಿದೆ. ಈ ಸಂಬಂಧ, ಈಗಾಗಲೇ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ರೋಗಿಗಳನ್ನು ಅಕ್ಸಿಜನ್ ಲಭ್ಯವಿರುವ ಆಸ್ಪತ್ರೆಗಳಿಗೆ ರವಾನಿಸಲು ಸೂಚಿಸಲಾಗಿದೆ. ಕೆಲವರನ್ನು ವಿಕ್ಟೋರಿಯಾ, ಬೌರಿಂಗ್ ಮತ್ತು ರಾಜೀವ್ ಗಾಂಧಿ ಆಸ್ಪತ್ರೆಗಳಿಗೆ ರವಾನಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆಮ್ಲಜನಕ ಕೊರತೆ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.