Advertisement

ನೀರು ತರುವುದೇ ನಿತ್ಯ ಕಾಯಕ

10:24 AM Mar 06, 2019 | |

ಬೈಲಹೊಂಗಲ: ಇಲ್ಲಿ ಹನಿ ನೀರಿಗಾಗಿ ದಿನವಿಡೀ ಕಸರತ್ತು ಮಾಡಬೇಕು. ಇದ್ದ ನೀರಿನ ಟ್ಯಾಂಕ್‌ಗಳು ದುರಸ್ತಿಗೊಳ್ಳದಿರುವುದರಿಂದ ಜನರು ನೀರಿಗಾಗಿ ಪರದಾಡಬೇಕು. ಹೀಗಾಗಿ ಜನರಿಗೆ ನೀರು ತರುವುದೇ ನಿತ್ಯ ಕಾಯಕವಾಗಿದೆ.

Advertisement

ಇದು ತಾಲೂಕಿನ ಕೆಲ ಗ್ರಾಮಗಳಲ್ಲಿರುವ ಜಲಕ್ಷಾಮದ ನೈಜ ಚಿತ್ರಣ. ತಾಲೂಕಿನಲ್ಲಿ 52 ಗ್ರಾಮ ಪಂಚಾಯತಗಳಿದ್ದು, ಅವುಗಳ ವ್ಯಾಪ್ತಿಯಲ್ಲಿ ಬರುವ ಬೈಲವಾಡ, ಸಂಗೊಳ್ಳಿ, ಸಂಪಗಾಂವ, ಚಿವಟಗುಂಡಿ, ಹಾರುಗೊಪ್ಪ, ನೇಸರಗಿ, ಮೇಕಲಮರಡಿ, ಬಾಂವಿಹಾಳ ಸೇರಿದಂತೆ ಮೊದಲಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ. ತಾಲೂಕಿನ ಬೈಲವಾಡದಲ್ಲಿ 16 ಬೋರ್‌ವೆಲ್‌ಗ‌ಳಿದ್ದು, ಇವುಗಳಲ್ಲಿ ಕೇವಲ ಎರಡು ಬೋರ್‌ವೆಲ್‌ಗ‌ಳಲ್ಲಿ ಮಾತ್ರ ನೀರು ಬರುತ್ತಿದೆ.

ಸಂಗೊಳ್ಳಿ ಗ್ರಾಮದಲ್ಲಿ ಕೆಲವೆಡೆ ಸಾರ್ವಜನಿಕ ನಲ್ಲಿಗಳಿವೆ. ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಪ್ರತಿಯೊಂದು ಮನೆಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಇನ್ನು ಕೆಲ ಗ್ರಾಮದಲ್ಲಿ ನಿತ್ಯ ನೀರಿಗಾಗಿ ಪರದಾಡುವುದರ ಜತೆಗೆ ಪರಸ್ಪರ ಜಗಳ ಮಾಡುವಂತಾಗಿದೆ.

ಇದ್ದೂ ಇಲ್ಲವಾದ ನೀರಿನ ಘಟಕ: ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಕರ್ನಾಟಕ ರೂರಲ್‌ ಇನ್‌ ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಲಿ. (ಕೆಆರ್‌ ಐಡಿಎಲ್‌) ಜಂಟಿಯಾಗಿ ತಾಲೂಕಿನಲ್ಲಿ 94 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಾಗಿವೆ. ಸುಮಾರು 40ಕ್ಕಿಂತಲೂ ಹೆಚ್ಚು ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ಹನಿ ನೀರಿಗಾಗಿ ಜನ ಪರದಾಡುವುದು ಮಾತ್ರ ತಪ್ಪುತ್ತಿಲ್ಲ.

ಎಲ್ಲೆಲ್ಲಿವೆ ಘಟಕಗಳು?: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಿಪಂನ ಕುಡಿಯುವ ನೀರುಮತ್ತು ನೈರ್ಮಲ್ಯ ವಿಭಾಗದಿಂದ 16 ಘಟಕಗಳನ್ನು ಮತ್ತು ಕೆಆರ್‌ಐಡಿಎಲ್‌ದಿಂದ 78 ಘಟಕಗಳನ್ನು ನಿರ್ಮಿಸಲಾಗಿದೆ. ಒಟ್ಟು ತಾಲೂಕಿನಲ್ಲಿ 94 ಘಟಕಗಳನ್ನು ತೆರೆಯಲಾಗಿದೆ. ಚಿವಟಗುಂಡಿ ಗ್ರಾಮದಲ್ಲಿ ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ 18 ಹಳ್ಳಿಗಳ ಬಹುಗ್ರಾಮ ಕುಡಿವ ನೀರಿನ ಯೋಜನೆ ಕಾಮಗಾರಿಗೆ ಚಾಲನೆ ನೀಡಿದರೂ ಈವರೆಗೆ ಈ ವಿಭಾಗದ ಗ್ರಾಮಸ್ಥರಿಗೆ ಮಲಪ್ರಭಾ ನದಿಯ
ಒಂದು ಹನಿ ನೀರು ತಲುಪದಿರುವುದು ವಿಪರ್ಯಾಸದ ಸಂಗತಿ. ಬೈಲಹೊಂಗಲ ಪಟ್ಟಣದಲ್ಲಿ ಐದು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಮಲಪ್ರಭೆ ಒಡಲು ಖಾಲಿಯಾಗಿ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Advertisement

ತಾಲೂಕಿನಲ್ಲಿ ಜಲಕ್ಷಾಮ ಇರುವ ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾಡಳಿತದಿಂದ ಹಣಕಾಸಿನ ನೆರವು ದೊರಕಿದರೆ ತಾಲೂಕಿನ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸೂಚಿಸಲಾಗುವುದು. 
ದೊಡ್ಡಪ್ಪ ಹೂಗಾರ,
ತಹಶೀಲ್ದಾರ್‌

ಬೈಲವಾಡ ಗ್ರಾಮದಲ್ಲಿ ಹನಿ ನೀರಿಗೂ ಮಹತ್ವ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರದಲ್ಲೇ ನೀರಿನ ಸಮಸ್ಯೆ ಪರಿಹರಿಸಬೇಕು.
. ಸಂಜಯ ಗಿರೆಪ್ಪಗೌಡರ,
  ಬೈಲವಾಡ ನಿವಾಸಿ

„ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next