Advertisement

3.47 ಲಕ್ಷಕ್ಕೂ ಹೆಚ್ಚು ಇ-ಟ್ರಾವೆಲ್‌ ಪಾಸ್‌ ವಿತರಣೆ: ದೇಶ್‌ಮುಖ್‌

08:10 AM May 15, 2020 | mahesh |

ಮುಂಬಯಿ: ಲಾಕ್‌ಡೌನ್‌ ಸಮಯದಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಜನರಿಗೆ ಪೊಲೀಸರು ಈವರೆಗೆ 3.47 ಲಕ್ಷಕ್ಕೂ ಹೆಚ್ಚು ಇ-ಟ್ರಾವೆಲ್‌ ಪಾಸ್‌ ನೀಡಿದ್ದಾರೆ ಎಂದು ರಾಜ್ಯ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಬುಧವಾರ ಹೇಳಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ, ತುರ್ತು ಸಂದರ್ಭಗಳಲ್ಲಿ ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಅಥವಾ ಇತರ ರಾಜ್ಯಗಳಿಗೆ ಪ್ರಯಾಣಿಸಬೇಕಾದ ಜನರು ಪೊಲೀಸ್‌ ಇಲಾಖೆಯಿಂದ ಪಾಸ್‌ಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಪೊಲೀಸರು 3,47,522 ಪಾಸ್‌ಗಳನ್ನು ನೀಡಿದ್ದಾರೆ ಎಂದು ದೇಶ್‌ಮುಖ್‌ ಹೇಳಿದರು.

Advertisement

ಲಾಕ್‌ಡೌನ್‌ ಜಾರಿಗೆ ಬಂದಾಗಿನಿಂದ, ಪೊಲೀಸರು ಐಪಿಸಿ ಸೆಕ್ಷನ್‌ 188ರ ಅಡಿಯಲ್ಲಿ 1,05,532 ಅಪರಾಧಗಳನ್ನು ದಾಖಲಿಸಿದ್ದಾರೆ. ಇದುವರೆಗೆ 20,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ದೇಶಮುಖ್‌ ಹೇಳಿದ್ದಾರೆ. ವಿವಿಧ ಅಪರಾಧಗಳಿಗಾಗಿ ಪೊಲೀಸರು 4.05 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದರು. ಈವರೆಗೆ ಪೊಲೀಸರ ಮೇಲೆ ಹಲ್ಲೆ ನಡೆದ 214 ಘಟನೆಗಳು ನಡೆದಿದ್ದು, ಇದಕ್ಕಾಗಿ 764 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಅಲ್ಲದೆ, ವಿವಿಧ ಜಿಲ್ಲೆಗಳು ಮತ್ತು ನಗರ ನಿಯಂತ್ರಣ ಕೊಠಡಿಗಳಲ್ಲಿ ಸ್ವೀಕರಿಸಿದ 90,555 ಕರೆಗಳನ್ನು ಪೊಲೀಸರು ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು. ಕೋವಿಡ್ ವಿರುದ್ಧದ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದಾಗ ಹಲವಾರು ಪೊಲೀಸ್‌ ಸಿಬ್ಬಂದಿಗಳು ಸಹ ಸೋಂಕಿಗೆ ತುತ್ತಾಗಿದ್ದಾರೆ ಎಂದು ಅವರು ಹೇಳಿದರು. ಈವರೆಗೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 709 ಪೊಲೀಸ್‌ ಸಿಬ್ಬಂದಿ ಮತ್ತು 84 ಅಧಿಕಾರಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ ಮುಂಬಯಿ ಪೊಲೀಸ್‌ ಪಡೆಯ ಐವರು ಮತ್ತು ಪುಣೆ, ಸೋಲಾಪುರ ನಗರ ಮತ್ತು ನಾಸಿಕ್‌ ಗ್ರಾಮೀಣ ಪ್ರದೇಶದ ತಲಾ ಒಬ್ಬರು ಸೇರಿದಂತೆ ರಾಜ್ಯದಲ್ಲಿ ಕನಿಷ್ಠ ಎಂಟು ಪೊಲೀಸ್‌ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್ ವೈರಸ್‌ ಹರಡುವಿಕೆಯನ್ನು ಹೊಂದಲು ರಾಜ್ಯದಾದ್ಯಂತ ಕನಿಷ್ಠ 2,97,282 ಜನರನ್ನು ನಿರ್ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ವದಂತಿಗಳನ್ನು ಹರಡಬೇಡಿ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸಚಿವರು ಜನತೆಗೆ ಮನವಿ ಮಾಡಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next