ಕಲಬುರಗಿ: ಮಹಾನಗರದಲ್ಲಿನ ಪ್ಲಾಸ್ಟಿಕ್ ಬಳಕೆ ವಿರುದ್ಧ ಪಾಲಿಕೆ ಆಯುಕ್ತರು ಕಾರ್ಯಾಚರಣೆ ಕೈಗೊಂಡಿದ್ದು, ಶುಕ್ರವಾರ ನಗರದ ಕಪನೂರ ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಪ್ಲಾಸ್ಟಿಕ್ ತಯಾರಿಕಾ ಘಟಕ ಹಾಗೂ ಎಪಿಎಂಸಿ ಗಂಜ್‌ದಲ್ಲಿನ ದಾಸ್ತಾನು ಮಳಿಗೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಹಾಗೂ ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ, ಪ್ಲಾಸ್ಟಿಕ್ ತಯಾರಿಕಾ ಘಟಕಕ್ಕೆ ಬೀಗ ಜಡೆದಿದ್ದಾರೆ. ಕಪನೂರ ವಸಾಹತು ಪ್ರದೇಶದಲ್ಲಿ ಎದುರುಗಡೆ ಪ್ಲಾಸ್ಟಿಕ್ ಕೊಡಗಳ ತಯಾರಿಕೆ ಘಟಕ ಎಂಬುದಾಗಿ ನಮೂದಿಸಿ ಹಿಂದುಗಡೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟಿಕ್ ತಯಾರಿಕೆ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಈ ದಾಳಿಯಲ್ಲಿ 1 ಟನ್ ಪ್ಲಾಸ್ಟಿಕ್ ಜಫ್ತು ಮಾಡಿಕೊಂಡ ಘಟಕಕ್ಕೆ ಬೀಗ ಜಡಿಯಲಾಗಿದೆ. ಅದೇ ರೀತಿ ನೆಹರು ಗಂಜ್‌ನ ಮಳಿಗೆಯೊಂದರಲ್ಲಿ ಒಂದೂವರೆ ಟನ್ ಪ್ಲಾಸ್ಟಿಕ್ ದಾಸ್ತಾನು ಮಾಡಿರುವುದನ್ನು ಪತ್ತೆ ಮಾಡಿ ದಾಳಿ ನಡೆಸಲಾಗಿದೆ. ಒಟ್ಟಾರೆ ಈ ಎರಡೂ ದಾಳಿಯಲ್ಲಿ ಒಟ್ಟಾರೆ 25 ಕ್ವಿಂಟಲ್‌ಗೂ ಅಧಿಕ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ. ಈಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡಿರುವ ಉದಾಹರಣೆಗಳೇ ಇಲ್ಲ.
ಪಾಲಿಕೆ ಆಯುಕ್ತರಾದ ಸ್ನೇಹಲ್ ಲೋಖಂಡೆ, ಉಪಆಯುಕ್ತ ಆರ್. ಪಿ.ಜಾಧವ್, ಪಾಲಿಕೆ ಆರೋಗ್ಯಾಧಿಕಾರಿ ಡಾ| ವಿನೋದಕುಮಾರ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳುಹಾಗೂ ಕಲಬುರಗಿ ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ದಾಳಿಗೆ ಸಿಮೀತವಾಗದಿರಲಿ : ಪ್ಲಾಸ್ಟಿಕ್ ತಯಾರಿಕಾ ಘಟಕ ಹಾಗೂ ದಾಸ್ತಾನು ಜತೆಗೆ ವ್ಯಾಪಾರಿಗಳ ಮೇಲೆ ದಾಳಿ ನಡೆಯುತ್ತಲೇ ಬಂದಿವೆ. ಆದರೆ ಬುಡ ಸಮೇತ ಪ್ಲಾಸ್ಟಿಕ್ ಬಳಕೆ ಕಿತ್ತು ಹಾಕಲು ಸಾಧ್ಯವಾಗ್ತಾ ಇಲ್ಲ. 2 ವರ್ಷಗಳ ಹಿಂದೆಯೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಭಾಷಣದಲ್ಲಿ ಕಲಬುರಗಿ ನಗರದಾದ್ಯಂತ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲಾಗುವುದಾಗಿ ಪ್ರಕಟಿಸಲಾಗಿತ್ತು. ಆದರೆ ಇಂದಿನ ದಿನದವರೆಗೂ ರಾಜಾರೋಷವಾಗಿ ಪ್ಲಾಸ್ಟಿಕ್ ತಯಾರಿಕೆ ಎಲ್ಲೇಡೆ ಅವ್ಯಾಹುತವಾಗಿ ನಡೆಯುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಮಹಾನಗರದಲ್ಲಿ ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ರಮಾಣಿಕ ಪ್ರಯತ್ನ ಮುಖ್ಯವಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕೆಂದು ಜನರು ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಕಾರ್ಯಾನುಷ್ಠಾನಕ್ಕೆ ಈಗ ಮುಂದಾಗಲಾಗಿದೆ. ಹೀಗಾಗಿ ದಿನಾಲು ಕಾರ್ಯಾಚರಣೆಗೆ ಇಳಿಯಲಾಗಿದೆ. ದಾಳಿ ನಿರಂತರ ಮುಂದುವರೆಯಲಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ಲಾಸ್ಟಿಕ್ ಬಳಕೆಗೆ ಸಾರ್ವಜನಿಕರು ಸಹ ಹಿಂದೇಟು ಹಾಕಬೇಕು. –
ಸ್ನೇಹಲ್ ಲೋಖಂಡೆ, ಪಾಲಿಕೆ ಆಯುಕ್ತ