Advertisement

25ಕ್ಕೂ ಹೆಚ್ಚು ಶುದ್ಧ ಕುಡಿವ ನೀರಿನ ಘಟಕ ಸ್ಥಗಿತ

02:41 PM Dec 23, 2019 | Team Udayavani |

ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಗ್ರಾಮಿಣ ಭಾಗದ ಜನರ ಆರೋಗ್ಯಕಾಪಾಡುವ ಸಲುವಾಗಿ ಸರ್ಕಾರ ನೂರಾರು ಕೋಟಿ ರೂ. ಖರ್ಚುಮಾಡಿ ಶುದ್ಧ ನೀರು ಸರಬರಾಜು ಘಟಕಗಳನ್ನು ಸ್ಥಾಪನೆಮಾಡಿದ್ದಾರೆ. ಆದರೆ ಅವುಗಳಲ್ಲಿ ಕೆಲವು ಕಾರ್ಯನಿರ್ವಹಿಸಿ ಜನರಿಗೆ ಶುದ್ಧವಾದ ನೀರು ಸರಬರಾಜಾಗುತ್ತಿದ್ದರೆ, ಮತ್ತೆ ಕೆಲವು ಕೆಟ್ಟು ನಿಂತಿವೆ.

Advertisement

ತಾಲೂಕಿನಲ್ಲಿ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಹಕಾರ ಸಂಘಗಳು, ಭೂ ಸೇನಾ ನಿಗಮ, ಕೋರಮಂಡಲ್‌ ಸಕ್ಕರೆ ಕಾರ್ಖಾನೆ ಸೇರಿದಂತೆ ಖಾಸಗಿ ವ್ಯಕ್ತಿಗಳು ಸುಮಾರು 113 ಶುದ್ಧ ಕುಡಿಯುವ ನೀರು ಸರಬರಾಜು ಘಟಕಗಳಲ್ಲಿ ನಿರ್ಮಾಣ ಮಾಡಿದ್ದಾರೆ. ಆದರೆ ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಭೂ ಸೇನಾ ನಿಗಮ ಇಲಾಖೆ ವತಿಯಿಂದ ನಿರ್ಮಾಣವಾಗಿರುವ ಘಟಕಗಳು ಇನ್ನು ಉದ್ಘಾಟನೆಯಾಗದೆ ಉಳಿದಿರುವುದು ಖಂಡನೀಯ. ತಾಲೂಕಿನಲ್ಲಿ ಗ್ರಾಮಿಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 58 ಶುದ್ಧ ಕುಡಿಯುವ ನೀರು ಸರಬರಾಜು ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು, 8 ಘಟಕಗಳು ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಜನರಿಗೆ ಸೇವೆ ಸಿಗುತ್ತಿಲ್ಲ, 15 ಘಟಕಗಳು ಕೆಟ್ಟು ನಿಂತಿವೆ

ಇನ್ನುಳಿದ 35 ಘಟಕಗಳಲ್ಲಿ ಜನರಿಗೆ ನೀರು ಸರಬರಾಜಾಗುತ್ತದೆ. ಭೂ ಸೇನಾ ನಿಮಗದಿಂದ 28 ಶುದ್ಧ ಕುಡಿಯುವ ನೀರು ಸರಬರಾಜು ಘಟಕಗಳನ್ನು ನಿರ್ಮಿಸಲಾಗಿದ್ದು, 1ಘಟಕಗಳು ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಜನರಿಗೆ ಸೇವೆ ಸಿಗುತ್ತಿಲ್ಲ, 11 ಘಟಕಗಳು ಕೆಟ್ಟು ನಿಂತಿವೆ ಇನ್ನುಳಿದ 16 ಘಟಕಗಳಲ್ಲಿ ಜನರಿಗೆ ನೀರು ಸರಬರಾಜಾಗುತ್ತದೆ. ಸಹಕಾರ ಸಂಘದಿಂದ 10 ಘಟಕಗಳನ್ನು ನಿರ್ಮಾಣ ಮಾಡಿದ್ದು ಎಲ್ಲವೂ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿವೆ.

ಕೋರಮಂಡಲ್‌ ಸಕ್ಕರೆ ಕಾರ್ಖಾನೆಯವರು ಮಾಕವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 8 ಘಟಕಗಳನ್ನು ಸ್ಥಾಪನೆಮಾಡಿದ್ದ ಎಲ್ಲವೂ ನೀರು ಸರಬರಾಜು ಮಾಡುತ್ತಿವೆ. ಪಟ್ಟಣದಲ್ಲಿ ಪುರಸಭೆ, ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಭೂ ಸೇನಾ ನಿಗಮ ಸೇರಿದಂತೆ ಯಾವುದೇ ಇಲಾಖೆಗಳಿಂದ ಶುದ್ಧ ಕುಡಿಯುವ ನೀರು ಸರಬರಾಜು ಘಟಕಗಳನ್ನು ನಿರ್ಮಾಣ ಮಾಡಿಲ್ಲ. ಆದರೆ ಟಿಎಪಿಸಿಎಸ್‌ಎಂ, ಕಸಬಾ ಸಹಕಾರ ಸಂಘದ ವತಿಯಿಂದ ತಲಾ ಒಂದು ಕುಡಿಯುವ ನೀರು ಸರಬರಾಜು ಘಟಕ ಗಳನ್ನು ನಿರ್ಮಾಣ ಮಾಡಿದ್ದಾರೆ. ಇದರ ಜತೆಗೆ ಖಾಸಗಿ ವ್ಯಕ್ತಿಗಳು ಘಟಕಗಳನ್ನು ನಿರ್ಮಿಸಿ ಜನರಿಗೆ ಶುದ್ಧ ನೀರು ಒದಗಿಸುತ್ತಿದ್ದಾರೆ.

ನಿರ್ವಹಣೆ ಕೊರತೆ: ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಿರುವ ಶುದ್ಧ ಕುಡಿಯುವ ನೀರು ಸರಬರಾಜು ಘಟಕಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಸೂಕ್ತವಾಗಿ ಕ್ರಮ ವಹಿಸುತ್ತಿಲ್ಲ ಎಂಬ ದೂರುಗಳು ಗ್ರಾಮೀಣಭಾಗದ ಜನರಿಂದ ಕೇಳಿಬರುತ್ತಿವೆ. ಘಟಕದ ಸುತ್ತಲು ಗಿಡಗಳು ಬೆಳೆಯುವುದು. ಅಕ್ಕಪಕ್ಕದಲ್ಲಿ ಕೊಳೆಚೆ ನೀರು ನಿಲ್ಲುವುದನ್ನು ಸಾಮಾನ್ಯವಾಗಿ ತಾಲೂಕಿನಲ್ಲಿ ಕಾಣಬಹುದಾಗಿದೆ. ಇದರಿಂದ ಘಕಟದಲ್ಲಿ ಶುದ್ಧ ನೀರು ಬರುತ್ತಿದೂ ಇಲ್ಲವೋ ಎಂಬ ಅನುಮಾನದಿಂದ ಕೆಲವರು ಇಲ್ಲಿ ನೀರನ್ನು ಪಡೆದುಕೊಳ್ಳುವುದಿಲ್ಲ ಎಂಬ ಆರೋಪಗಳು ಇವೆ.

Advertisement

ಹಣ ನೀಡಲಾಗುತ್ತದೆ:  ತಾಲೂಕಿನಲ್ಲಿ ಸರ್ಕಾರದಿಂದ ನಿರ್ಮಾಣ ಮಾಡಿರುವ ನೀರು ಸರಬರಾಜು ಘಟಕಗಳಿಂದ ಜನರಿಗೆ ಉಚಿತವಾಗಿ ನೀರು ನೀಡಲಾಗುತ್ತಿಲ್ಲ. ಎಲ್ಲರೂ ಹಣವನ್ನು ಪಾವತಿಮಾಡಿಯೇ ನೀರು ಪಡೆಯಬೇಕಾಗಿದೆ. ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಘಟಕಗಳಲ್ಲಿ 20 ಲೀ ಶುದ್ಧ ನೀರು ಪಡೆಯಲು ಜನರು 2 ರೂ. ನೀಡಬೇಕು. ಸಹಕಾರ ಸಂಘ ಮತ್ತು ಕೋರಮಂಡಲ್‌ ಸಕ್ಕರೆ ಕಾರ್ಖಾನೆಯಿಂದ ನಿರ್ಮಾಣ ಮಾಡಿರುವ ಘಟಕಗಳಲ್ಲಿ 5 ರೂ. ನೀಡಬೇಕು. ಖಾಸಗಿ ಘಟಕಗಳಲ್ಲಿ 20 ಲೀಟರ್‌ಗೆ 05 ರಿಂದ 20 ರೂ.ವರೆಗೂ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ದುರಸ್ತಿ ಮಾಡಿಸುತ್ತೇವೆ:  ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕೆ.ಆರ್‌.ಪೇಟೆ ಉಪ ವಿಭಾಗದ ಸಕಾಯಕ ಕಾರ್ಯಪಾಲ ಎಂಜಿನಿಯರ್‌ ಸತೀಶ್‌ಬಾಬು ಮಾತನಾಡಿ, ನಾವುಗಳು ತಾಲೂಕಿನಲ್ಲಿ ನಿರ್ಮಾಣ ಮಾಡಿರುವ ಎಲ್ಲ ಘಟಕಗಳನ್ನು ಸ್ವತ್ಛವಾಗಿಟ್ಟುಕೊಂಡಿದ್ದೇವೆ. ಆದರೆ ಘಟಕಗಳ ಸರಬರಾಜು ಮಾಡಿರುವ ಕಂಪನಿ ಯವರು ಉಚಿತವಾಗಿ ನಿರ್ವಹಣೆ ಮಾಡುವ ಅವಧಿ ಮುಕ್ತಾಯವಾಗಿರುವುದರಿಂದ ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿ ಮಾಡಿಸಲು ಸಾಧ್ಯವಾಗಿಲ್ಲ. ಈಗಾಗಲೇ ಶುದ್ಧ ಕುಡಿವ ನೀರು ಸರಬರಾಜು ಘಟಕಗಳ ನಿರ್ವಹಣೆಮಾಡಲು ಅರ್ಹ ವ್ಯಕ್ತಿಗಳನ್ನು ಆಹ್ವಾನಿಸಿ ಟೆಂಡರ್‌ ಕರೆಯಲಾಗಿದ್ದು ಒಂದು ತಿಂಗಳ ಅವಧಿಯ ಒಳಗಾಗಿ ಎಲ್ಲ ಘಟಕಗನ್ನು ದುರಸ್ತಿ ಮಾಡಿಸಲಾಗುವುದು ಎಂದರು.

ಕೆಟ್ಟು ನಿಂತ ಘಟಕಗಳು: ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಶುದ್ಧಕುಡಿಯುವ ನೀರು ಸರಬರಾಜು ಘಟಕಗಳು ಕೆಟ್ಟು ನಿಂತಿವೆ. ಇದಕ್ಕೆ ಕಾರಣ ನಿಮಾರ್ಣವಾಗಿರುವ ಘಟಕ ಗಳನ್ನು ಘಟಕವನ್ನು ಸರಬರಾಜು ಮಾಡಿರುವ ಕಂಪನಿಯವರು 5 ವರ್ಷಗಳ ಕಾಲ ನಿರ್ವಹಣೆ ಮಾಡುವುದಾಗಿ ಭರವಸೆ ನೀಡಿದ್ದರೂ. ಆದರೆ ಈಗ 5 ವರ್ಷದ ಅವಧಿ ಮುಗಿದಿರುವುದರಿಂದ ಘಟಕಗಳ ನಿರ್ವಹಣೆಯಾರು ಮಾಡದೇ ಇರುವುದರಿಂದ ಸಣ್ಣ ತಾಂತ್ರಿಕ ಕಾರಣಗಳಿಂದಲೇ ಬಹತೇಕ ಘಟಕಗಳು ಸ್ಥಗಿತವಾಗಿವೆ. ಈಗ ಅವುಗಳನ್ನು ದುರಸ್ತಿ ಮಾಡಿಸಲು ಅಧಿಕಾರಿಗಳು ಕ್ರಮ ವಹಿಸದಿರುವುದರಿಂದ ಜನರಿಗೆ ಘಟಕಗಳಿದ್ದರೂ ಶುದ್ಧ ನೀರು ಸಿಗದಂತಾಗಿದೆ.

 

ಎಚ್‌.ಬಿ.ಮಂಜುನಾಥ

Advertisement

Udayavani is now on Telegram. Click here to join our channel and stay updated with the latest news.

Next