Advertisement
ಗುರುವಾರ ಬೆಳಗ್ಗೆ 9ರಿಂದ 10 ಗಂಟೆವರೆಗೆ ನಡೆದ ಫೋನ್‌ಇನ್‌ನಲ್ಲಿ ಸಿಇಒ ಜಿ.ಜಗದೀಶ್ ವಿವಿಧ ತಾಲೂಕುಗಳಿಂದ ಬಂದಿದ್ದ ಕರೆ ಸ್ವೀಕರಿಸಿ ಕ್ರಮದ ಭರವಸೆ ನೀಡಿದರು.
Related Articles
Advertisement
ಮುಳಬಾಗಿಲಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿರುವ ಕುರಿತು ಗಂಗಾಧರ್ ದೂರು ದಾಖಲಿಸಿದರೆ, ಮಾಲೂರಿನ ಚಿಕ್ಕಇಗ್ಗಲೂರಿನ ನಿವಾಸಿ ಅಂಬೇಡ್ಕರ್ ವಸತಿ ಯೋಜನೆಯಡಿ ರಾಜೀವ್‌ಗಾಂಧಿ ವಸತಿ ನಿಗಮದಿಂದ ತಮ್ಮ ಖಾತೆಗೆ 1 ರೂ., ಬಂದಿರುವುದಾಗಿ ದೂರಿದಾಗ ಸ್ಪಂದಿಸಿದ ಸಿಇಒ ಜಿ.ಜಗದೀಶ್, ಫಲಾನುಭವಿ ಖಾತೆ ಬಗ್ಗೆ ಅರಿಯಲು ಸ್ಯಾಂಪಲ್ ಆಗಿ ಹಣ ಜಮೆ ಮಾಡಿದ್ದಾರೆ. ಶೀಘ್ರ ಹಣ ಜಮೆ ಆಗುತ್ತದೆ ಎಂದು ಭರವಸೆ ನೀಡಿದರು.
ತಿಂಗಳಿಗೊಮ್ಮೆ ನೀರು: ಬಂಗಾರಪೇಟೆ ಹುಲಿಬೆಲೆ ಗ್ರಾಪಂನಲ್ಲಿ ಗ್ರಾಮಕ್ಕೆ ತಿಂಗಳಿಗೊಮ್ಮೆ ಕುಡಿವ ನೀರು ಸರಬರಾಜು ಆಗುತ್ತಿದೆ. ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳ ಗಮನಕ್ಕೆ ತಂದರೂ ಗಮನಹರಿಸುತ್ತಿಲ್ಲ ಎಂದು ಬೈರೇಗೌಡ, ಸಹಾಯಕ ಪ್ರಾಧ್ಯಾಪಕ ಪ್ರೊ.ರವಿಕುಮಾರ್ ದೂರಿದರು. ಸ್ಪಂದಿಸಿದ ಸಿಇಒ ಬಗೆಹರಿಸುವ ಭರವಸೆ ನೀಡಿದರು.
ಶ್ರೀನಿವಾಸಪುರದ ಗೌನಪಲ್ಲಿ ಬಸ್ ನಿಲ್ದಾಣದ ಬಳಿ ಪೆಟ್ಟಿಗೆ ಅಂಗಡಿಯಲ್ಲಿ ಮಾಂಸ ಮಾರಾಟದಿಂದ ದುರ್ವಾಸನೆ ಬೀರುವ ಕುರಿತು ದೂರು ನೀಡಿದ್ದರೂ ಕ್ರಮ ವಹಿಸಿಲ್ಲ ಎಂದು ನಜೀರ್ ಅಹಮದ್ ದೂರಿದರು.
ಕ್ರಮಕ್ಕೆ ಸೂಚನೆ: ಕೋಲಾರ ತಾಲೂಕಿನ ಮುದುವಾಡಿ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಸರ್ಕಾರಿ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿರುವ ಬಗ್ಗೆ ನಾಗೇಶ್ ದೂರಿದಾಗ ಈ ಬಗ್ಗೆ ತಾಪಂ ಇಒ ಅವರಿಗೆ ಸ್ಥಳ ತನಿಖೆ ನಡೆಸಿ ಕ್ರಮಕ್ಕೆ ಸೂಚಿಸುವುದಾಗಿ ಸಿಇಒ ನುಡಿದರು.
ಬಂಗಾರಪೇಟೆ ಕೆಸರನಹಳ್ಳಿ ಗ್ರಾಪಂ ನಲ್ಲಿ 15 ತಿಂಗಳಿನಿಂದ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಸಂಬಳದ ಚೆಕ್‌ಗೆ ಅಧ್ಯಕ್ಷರು-ಪಿಡಿಒ ಸಹಿ ಮಾಡುತ್ತಿಲ್ಲ ಎಂದು ರವಿಕುಮಾರ್ ದೂರಿದರು.
ಮುಳಬಾಗಿಲಿನ ವರಸಿದ್ಧಿ ವಿನಾಯಕ ಶಾಲೆಯಲ್ಲಿ ಕೊಠಡಿ – ಶೌಚಾಲಯದ ಕೊರತೆ ಇದೆ ಎಂದು ನಂಗಲಿ ಶ್ರೀನಿವಾಸ್ ದೂರಿದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಡಿಡಿಪಿಐಗೆ ಸೂಚಿಸಿದರು.
ಇಚ್ಛಾಶಕ್ತಿ ಕೊರತೆ: ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿಇಒ ಜಗದೀಶ್, ಜಿಲ್ಲೆಯ 3 ಕಡೆ ಕುಡಿವ ನೀರಿನ ಸಮಸ್ಯೆ, ಸ್ವಚ್ಛತೆ ಕೊರತೆ, ಕೋಲಾರ ಮತ್ತು ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಆಗದಿರುವುದು, ವಸತಿ, ಇ ಸ್ವತ್ತು ಸಂಬಂಧ ದೂರುಗಳು ಬಂದಿದೆ. ನೀರಿನ ಸಮಸ್ಯೆ ಉಂಟಾಗಿದ್ದರೆ ಅದು ಪಿಡಿಒ, ಎಂಜಿನಿಯರ್‌ಗಳ ಇಚ್ಛಾಶಕ್ತಿ ಕೊರತೆ. ತಕ್ಷಣ ಕ್ರಮಕ್ಕೆ ಸೂಚನೆ ನೀಡುವುದಾಗಿ ಹೇಳಿದರು.
ಜಿಪಂ ಸಹಾಯಕ ಯೋಜನಾಧಿಕಾರಿ ಮುನಿರಾಜು, ಡಿಡಿಪಿಐ ಕೆ.ರತ್ನಯ್ಯ, ತೋಟಗಾರಿಕೆ ಉಪನಿರ್ದೇಶಕ ಡಾ.ಕೆ.ವಿ.ಕೃಷ್ಣಮೂರ್ತಿ, ಬಿಸಿಎಂ ಅಧಿಕಾರಿ ರಾಜಣ್ಣ ಮತ್ತಿತರರಿದ್ದರು.