ಹನೂರು: ಕೊರೊನಾ ವೈರಸ್‌ನಿಂದ ಉಂಟಾಗುವ ಆರೋಗ್ಯದ ಏರುಪೇರಿನ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಂತೆ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ, ಚಿಕಿತ್ಸೆ ಪಡೆದಿರುವ ಘಟನೆ ಕಾಡಂಚಿನ ಗೊರಸಾಣೆ ಗ್ರಾಮದಲ್ಲಿ ನಡೆದಿದೆ.
ಏನಿದು ಘಟನೆ?: ಜಗತ್ತಿನಲ್ಲಿ ಕೊರೊನಾ ವೈರಸ್ ಹರಡುತ್ತಿದ್ದು, ಈ ವೈರಸ್ ಮನುಷ್ಯನ ಮೇಲೆ ಪ್ರಭಾವ ಬೀರುವ ಬಗ್ಗೆ, ಆರೋಗ್ಯದಲ್ಲಿ ಏರುಪೇರಾಗುವ ಬಗ್ಗೆ ಗೊರಸಾಣೆ ಗ್ರಾಮದ ಶಿಕ್ಷಕ ಪ್ರೇಮ್ ಕುಮಾರ್, ವಿದ್ಯಾರ್ಥಿಗಳಿಗೆ ಪ್ರವಚನ ನೀಡುತ್ತಿದ್ದರು. ಈ ವೇಳೆ ಕಾಯಿಲೆಯು ಮಾರಣಾಂತಿಕವಾಗಿದ್ದು, ಚೀನಾದಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಈ ರೋಗ ಬೇಗ ಹರಡುವ ಲಕ್ಷಣ ಹೊಂದಿದೆ. ಇದರಿಂದ ಶಾಲೆ, ಕಾಲೇಜು, ಕಾರ್ಖಾನೆಗಳಿಗೆ ರಜೆ ನೀಡಲಾಗಿದೆ.
ಆದ್ದರಿಂದ ನಾವು ಆರೋಗ್ಯ ಕಡೆ ಹೆಚ್ಚಿನ ನಿಗಾವಹಿಸಿ, ಏನಾದರೂ ಏರುಪೇರು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗಳಿಗೆ ತೆರಳಿ ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸುತ್ತಿದ್ದರು. ಶಿಕ್ಷಕರು ಈ ರೀತಿ ಹೇಳುತ್ತಿದ್ದಂತೆ ಶಾಲೆಯ 15ಕ್ಕೂ ಹೆಚ್ಚು ಮಕ್ಕಳು ಜ್ವರ ಮತ್ತು ತಲೆ ನೋವಿನಿಂದ ಬಳಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಎಚ್ಚೆತ್ತ ಶಾಲೆಯ ಶಿಕ್ಷಕರು ಕೂಡಲೇ ಅಸ್ವಸ್ಥ ಮಕ್ಕಳನ್ನು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಎಲ್ಲಾ ಮಕ್ಕಳ ಆರೋಗ್ಯ ಸ್ಥಿರ: ಮಹದೇಶ್ವರ ಬೆಟ್ಟದ ವೈದ್ಯಾಧಿಕಾರಿ ಮುಕುಂದ ಉದಯವಾಣಿಯೊಂದಿಗೆ ಮಾತನಾಡಿ, ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ರಕ್ತದ ಮಾದರಿ ಪಡೆದು ಮಲೇರಿಯಾ ಪರೀಕ್ಷೆ ಮಾಡಲಾಗಿದೆ. ಯಾವ ಮಕ್ಕಳಿಗೂ ಸೋಂಕು ಇಲ್ಲ. ಅಸ್ವಸ್ಥಗೊಂಡ ಮಕ್ಕಳ ಪೈಕಿ 4-5 ಜನರಿಗೆ ಮಾತ್ರ ಸ್ವಲ್ಪ ಪ್ರಮಾಣದ ಜ್ವರ ಕಾಣಿಸಿಕೊಂಡಿದೆ. ಅವರಿಗೆ ಮಾತ್ರೆ, ಅಗತ್ಯ ಔಷಧಿ ನೀಡಲಾಗಿದೆ. ಬಳಿಕ ಶಾಲೆಗೆ ತೆರಳಿ ಇನ್ನುಳಿದ ಮಕ್ಕಳ ಆರೋಗ್ಯವನ್ನೂ ತಪಾಸಣೆ ಮಾಡಲಾಗಿದ್ದು, ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದರು.
ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ: ಶಿಕ್ಷಕರು ಕೊರೊನಾ ಬಗ್ಗೆ ತಿಳಿಸುತ್ತಿದ್ದಾಗ ವಿದ್ಯಾರ್ಥಿಗಳು ಹೆದರಿಕೊಂಡಿದ್ದಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿದ್ದು ಈ ರೀತಿ ನಡೆದಿದೆ. ಕೊರೊನಾದ ಯಾವುದೇ ಲಕ್ಷಣಗಳು ಕೂಡ ಕಂಡುಬಂದಿಲ್ಲ. ಅಲ್ಲದೆ, ಶಾಲೆಯ ಕುಡಿಯುವ ನೀರು, ನೀರಿನ ತೊಂಬೆ ಎಲ್ಲವನ್ನೂ ಪರಿಶೀಲಿಸಿದ್ದು, ಎಲ್ಲಾ ಉತ್ತಮವಾಗಿದೆ ಎಂದು ತಿಳಿಸಿದರು.
ಕೊರೊನಾ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾಗ ಮಕ್ಕಳು ಹೆದರಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಕೂಡಲೇ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಇದೀಗ ಮಕ್ಕಳ ಆರೋಗ್ಯ ಸ್ಥಿರವಾಗಿದೆ.
-ಟಿ.ಆರ್.ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ