ಹುಣಸೂರು: ಪಟ್ಟಣ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಉದ್ಯಾನವನಗಳನ್ನು ನಿರ್ಮಿಸಲು ನಗರಸಭೆ ವಿವಿಧ ಬಡಾವಣೆಗಳಲ್ಲಿ ಸ್ಥಳಗಳನ್ನು ಗುರುತಿಸಿದ್ದು, ಈ ಸಾಲಿನಲ್ಲಿ ಕನಿಷ್ಠ 5 ಉದ್ಯಾನವನಗಳ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವಾ ಹೇಳಿದರು.
2019ನೇ ಸಾಲಿನ ವಿಶ್ವ ಪರಿಸರ ದಿನ (ಜೂ.5) ಆಚರಣೆ ಸಂಬಂಧ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ನಾಗರಿಕರೊಂದಿಗೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ ಇರುವ ಪಾರ್ಕ್‌ಗಳ ಅಭಿವೃದ್ಧಿಗೆ ಬೇಕಾದ ಮೂಲಸೌಕರ್ಯಗಳಾದ ವಾಕಿಂಗ್ ಪಾಥ್, ಕಾಂಪೌಂಡ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಆದರೆ ಪಾರ್ಕಿನಲ್ಲಿ ಗಿಡಗಳನ್ನು ನೆಡುವ, ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿಯುತ ಕಾರ್ಯ ಆಗಬೇಕಿದೆ ಎಂದರು.
ರೋಟರಿ ಸಂಸ್ಥೆಯ ಶ್ಲಾಘನೀಯ ಕಾರ್ಯ: ಹುಣಸೂರು ರೋಟರಿ ಸಂಸ್ಥೆ 2016ರಿಂದ ಪಟ್ಟಣದ ಮಾರುತಿ ಬಡಾವಣೆಯ ಎರಡು ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸಿದೆ. ಈ ಬಾರಿ ಪಾರ್ಕಿನಲ್ಲಿ ಮಕ್ಕಳಿಗಾಗಿ ವಿವಿಧ ರೀತಿಯ ಆಟಿಕೆಗಳನ್ನು ಸ್ಥಾಪಿಸಲು ಸಂಸ್ಥೆ ಮುಂದೆ ಬಂದಿದೆ. ಪಾರ್ಕ್‌ಗಳ ಅಭಿವೃದ್ಧಿ, ಗಿಡಗಳನ್ನು ನೆಟ್ಟು ಪಾಲನೆ ಪೋಷನೆ ನಡೆಸುವ ಕಾರ್ಯ ಕೇವಲ ನಗರಸಭೆಯ ಕರ್ತವ್ಯ ಎಂದು ನಾಗರಿಕರು ಭಾವಿಸಬಾರದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ವಿವಿಧ ಸಂಘ ಸಂಸ್ಥೆಗಳು ಪಾರ್ಕ್ ಗಳ ಅಭಿವೃದ್ಧಿಗಾಗಿ ಪ್ರಾಯೋಜಕತ್ವ ಪಡೆದು ನಗರ ಸಭೆಯೊಂದಿಗೆ ಕೈಜೋಡಿಸಬೇಕೆಂದು ಕೋರಿದರು.
ಮಳೆ ಕೊಯ್ಲು ಕಡ್ಡಾಯಗೊಳಿಸಿ: ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹುಣಸೂರು ಪಟ್ಟಣ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುವ ಕಟ್ಟಡಗಳಲ್ಲಿ ಮಳೆಕೊಯ್ಲು ಘಟಕ ಸ್ಥಾಪನೆ ಕಡ್ಡಾಯಗೊಳಿಸಿ. ಶಾಲಾ ಕಾಲೇಜುಗಳ ಆವರಣದಲ್ಲಿ ಮಕ್ಕಳ ಹೆಸರಲ್ಲಿ ಮಕ್ಕಳಿಂದಲೇ ಸಸಿ ನೆಡುವ ಕಾರ್ಯ ಕೈಗೊಳ್ಳಿರಿ ಎಂದು ಸಲಹೆ ನೀಡಿ, ñಮ್ಮ ಸಂಸ್ಥೆಯ ವತಿಯಿಂದ ಕೆಎಚ್ಬಿ ಕಾಲನಿ ಮೂರನೇ ಹಂತದ ಬಡಾವಣೆಯ ಪಾರ್ಕ್ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಸಂಜಯ್ ಮಾತನಾಡಿ, ಲಕ್ಷ್ಮ್ಮಣತೀರ್ಥ ನದಿಗೆ ಚರಂಡಿನೀರು ಸೇರುತ್ತಿರುವುದನ್ನು ತಡೆಯಲು ಮೆಶ್‌ಗಳನ್ನು ನಿರ್ಮಿಸಿರಿ. ನದಿ ದಂಡೆಯ ಬದಿಯಲ್ಲಿ ಸಸಿಗಳನ್ನು ನೆಟ್ಟಲ್ಲಿ ಉತ್ತಮ ಎಂದರು.
ಪುರಸಭೆ ಮಾಜಿ ಸದಸ್ಯ ಎಚ್.ಎಸ್.ವರದರಾಜು ತಾವು ದೇವರಾಜ ಅರಸು ಕಾಲನಿಯ ಪಾರ್ಕ್ ಅಭಿವೃದ್ಧಿಪಡಿಸಿಕೊಡುವುದಾಗಿ ಭರವಸೆ ನೀಡಿದರು. ಹೊಟೇಲ್ ಮಾಲೀಕರ ಸಂಘದ ವಿಶ್ವನಾಥ್, ಚಿಗುರು ಸಂಪನ್ಮೂಲ ಕೇಂದ್ರದ ಶಂಕರ್, ಖಾಲೀದ್ ಗುರುಪುರ, ಕಾಫಿವರ್ಕ್ಸ್ನ ನಟರಾಜ್ ಇತರರು ಇದ್ದರು.