Advertisement

130ಕ್ಕೂ ಹೆಚ್ಚು ಅಕ್ರಮ ಕಲ್ಲುಕ್ರಷರ್‌ಗಳ ಆರ್ಭಟ

02:55 PM Jul 19, 2018 | |

ದೇವನಹಳ್ಳಿ: ಅನಧಿಕೃತವಾಗಿ ಪ್ರಾರಂಭವಾಗಿರುವ ಕಲ್ಲು ಕತ್ತರಿಸುವ ಘಟಕಗಳಿಂದ ಹೊರ ಬೀಳುವ ಧೂಳು ರೈತರ ಬೆಳೆ ನಾಶಕ್ಕೆ ಕಾರಣವಾಗಿದ್ದು ಅಧಿಕಾರಿಗಳು ಮಾತ್ರ ನಿದ್ದೆ ಮಂಪರಿನಲ್ಲಿದ್ದಾರೆ. ಈ ಘಟಕಗಳ ಶಬ್ದ ಮತ್ತು ಧೂಳಿನ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ಇಲಾಖೆಗಳ ಹಗ್ಗಜಗ್ಗಾಟದ ಪರಿಣಾಮವಾಗಿ ತಾಲೂಕಿನ ಕುಂದಾಣ, ಕೊಯಿರಾ, ಕನ್ನಮಂಗಲ, ಬಿದಲೂರು ಗ್ರಾಪಂ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗದ,ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಕಲ್ಲು ಕತ್ತರಿಸುವ 130ಕ್ಕೂ ಹೆಚ್ಚು ಘಟಕ ಕಾರ್ಯನಿರ್ವಹಿಸುತ್ತಿವೆ. ಇನ್ನೂ ನಾಯಿಕೊಡೆಗಳಂತೆ ತಲೆ ಎತ್ತಲಾರಂಭಿಸಿವೆ.

Advertisement

ಗ್ರಾಪಂ, ಕಂದಾಯ ಇಲಾಖೆ, ಬೆಸ್ಕಾಂ, ಭೂವಿಜ್ಞಾನ ಇಲಾಖಾ ಅಧಿಕಾರಿಗಳು ಅಕ್ರಮದಲ್ಲಿ ಶಾಮೀಲು ಆಗಿದ್ದಾರೆ. ಮುದ್ದನಾಯ ಕನಹಳ್ಳಿ, ತೈಲಗೆರೆ ವ್ಯಾಪ್ತಿಯಲ್ಲಿ  ತ್ರೋರಾತ್ರಿ ಕಲ್ಲು ದಿಮ್ಮಿಗಳು ಸಾಗಣೆಯಾಗುತ್ತಿದೆ. ಇಲ್ಲಿರುವ ನೂರಾರು ಕಲ್ಲು ಕತ್ತರಿಸುವ ಘಟಕಗಳಿಗೆ ಸ್ಥಳೀಯವಾಗಿ ಕಲ್ಲು ಪೂರೈಕೆಯಾಗುತ್ತಿದ್ದು, ಬೇರೆ ಕಡೆಗಳಿಂದ ಬರುತ್ತಿಲ್ಲ. ತಾಲೂಕಿನ ಕುಂದಾಣ ಹೋಬಳಿ ಅಕ್ರಮ ಕಲ್ಲುಗಣಿ ಗಾರಿಕೆ ತಾಣವಾಗಿ ಮಾರ್ಪಾಟು ಆಗಿದೆ. ಘಟಕ ಸ್ಥಾಪನೆ ಮುನ್ನಾ ಭೂ ಪರಿವರ್ತನೆ ಅವಶ್ಯಕತೆ ಇದೆ. ಸ್ಥಳೀಯ ನಿವಾಸಿಗಳಿಂದ ಕನಿಷ್ಠ 80 ಜನರಿಂದ ನಿರಾಪೇಕ್ಷಣಾ ಪತ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರಾಧಿಕಾರದ ವತಿಯಿಂದ ಅನುಮತಿ
ಪಡೆಯಬೇಕು. ಆದರೆ, ಸುಮಾರು 130ಕ್ಕೂ ಹೆಚ್ಚು ಕಲ್ಲುಕತ್ತರಿಸುವ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ರೈತರು ದೂರುತ್ತಿದ್ದಾರೆ.

ರೈತರು ಹೇಳ್ಳೋದೇನು?: ಮುದ್ದನಾಯಕನಹಳ್ಳಿ ಹಾಗೂ ಇತರೆ ಕಡೆ ಕಲ್ಲುಗಣಿಗಾರಿಕೆ ಮತ್ತು ಜೆಲ್ಲಿ ಕ್ರಷರ್‌ಗಳಿಂದ ರೈತರು ಬೆಳೆದ ಬೆಳೆಗಳಿಗೆ ಧೂಳು ಮತ್ತು ಸಿಡಿಮದ್ದುಗಳ ಶಬ್ದಗಳಿಂದ ಜನ ಆತಂಕ ಪಡುವಂತಾಗಿದೆ. ಮುದ್ದನಾಯಕನಹಳ್ಳಿ ಗ್ರಾಮದ ಸರ್ವೆ ನಂ.12ರಲ್ಲಿ ಹಾಗೂ ಸರ್ವೆ ನಂ.112 ತೈಲಗೆರೆ, ಸೊಣ್ಣೆನಹಳ್ಳಿ, ಮಾಯಸಂದ್ರ, ಮೀಸಗಾನಹಳ್ಳಿಗಳಲ್ಲಿ ಅಕ್ರಮ ಗಣಿಗಾರಿಕೆ ಜೆಲ್ಲಿ ಕ್ರಷರ್‌ಗಳಿಂದ ಬರುವ ಧೂಳುಗಳಿಂದ ಬೆಳೆನಾಶವಾಗುತ್ತಿದೆ.

ಅಲ್ಲದೆ, ಸಿಡಿಮದ್ದು ಸಿಡಿಸಲಾಗುತ್ತಿದೆ. ಇದರಿಂದಾಗಿ ಗ್ರಾಮಗಳಲ್ಲಿ ಹಲವು ಸಮಸ್ಯೆಗಳು ಕಾಡುತ್ತಿದೆ ಎಂದು ಮುದ್ದನಾಯಕನಹಳ್ಳಿ ರೈತ ಮುಖಂಡ ರಮೇಶ್‌ ಹೇಳುತ್ತಾರೆ. ಹಾಗೆಯೇ ಸಾರ್ವಜನಿಕರ ದೂರಿನಿಂದ ಎಚ್ಚೆತ್ತುಕೊಂಡ ಹಿಂದಿನ ಉಪ ತಹಶೀಲ್ದಾರ್‌ ಪ್ರಸನ್ನಕುಮಾರ್‌ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿನ ಕಲ್ಲು ಗ್ರಾನೈಟ್‌ ಘಟಕಗಳು ಯಾವುದೇ ಅನುಮತಿ ಪಡೆಯದ ಬಗ್ಗೆ
ಮಾಹಿತಿ ನೀಡಿರುವುದಾಗಿ ರೈತ ವೀರಣ್ಣ ಆರೋಪ ಮಾಡಿದ್ದಾರೆ.

ಅಧಿಕಾರಿಗಳಿಗೆ ದೂರು ಕೊಟ್ಟರೂ ಕ್ರಮವಿಲ್ಲ ಇತ್ತೀಚೆಗೆ ರೇಷ್ಮೆ ಬೆಳೆದಿದ್ದ ರೈತ ಶಿವಕುಮಾರ್‌ ತೋಟದಲ್ಲಿ ಬೆಳೆ ಸಮೃದ್ಧವಾಗಿ ಬಂದಿದ್ದರೂ ನಂತರ ಕೈಕೊಟ್ಟು ಸುಮಾರು 20ಸಾವಿರ ರೂ.ನಷ್ಟವಾಗಿದೆ. ಈ ರೀತಿಯ ಸಮಸ್ಯೆ ಸುಮಾರು 10 ವರ್ಷಗಳಿಂದ ಅನುಭವಿಸುತ್ತಿದ್ದೇವೆ. ಕೃಷಿ ಮತ್ತು ವ್ಯವಸಾಯವಲ್ಲದೆ ಬೇರೆ ಯಾವುದೇ ಉದ್ಯೋಗವಿಲ್ಲ.

Advertisement

ಧೂಳಿನಿಂದ ದನಕರುಗಳು ಸಾಯುತ್ತಿವೆ. ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಗಳಲ್ಲಿ ವಾಸಮಾಡಲು ಭಯ ಪಡುವಂತಾಗಿದೆ. ಇನ್ನು ಪಾತ್ರೆ, ಸಾಮಾನು ಅಲಗಾಡುವ ಶಬ್ಧಕ್ಕೆ ಮಕ್ಕಳು ಗಾಬರಿಗೊಳ್ಳುತ್ತಿದ್ದಾರೆ. ಈ ಘಟಕಗಳಿಗೆ ಗ್ರಾಪಂ ನೀಡಿರುವ ನಿರಾಕ್ಷೇಪಣಾ ಪತ್ರ ರದ್ದುಗೊಳಿಸುವಂತೆ ಕಂದಾಯ ಇಲಾಖೆ, ಪೊಲೀಸ್‌ ಮತ್ತು ಬೆಸ್ಕಾಂ ಅಧಿಕಾರಿಗಳು ತಹಶೀಲ್ದಾರ್‌ರಿಗೆ ಮಾ.14,2018ರಲ್ಲಿ ವರದಿ ನೀಡಿದ್ದೇವೆ. ವರದಿ ನೀಡಿ ಮೂರು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅನಧಿಕೃತ ಗ್ರಾನೈಟ್‌ ಕಾರ್ಖಾನೆಗಳು ನಿರ್ಮಾಣ ವಾಗಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಗೆ  ಸಹಕರಿಸಲಾಗುವುದು.
ಸುರೇಶ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ 

ಅನಧಿಕೃತವಾಗಿ ಕಲ್ಲು ಕತ್ತರಿಸುವ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುವುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. 
 ಎಂ.ರಾಜಣ್ಣ, ತಹಶೀಲ್ದಾರ್‌

ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next