Advertisement

120ಕ್ಕೂ ಅಧಿಕ ಗಣೇಶ ಮೂರ್ತಿ ವಿಸರ್ಜನೆ

03:18 PM Sep 04, 2017 | Team Udayavani |

ರಾಯಚೂರು: ಗಣೇಶ ಚತುರ್ಥಿ ನಿಮಿತ್ತ ನಗರ ಸೇರಿ ಜಿಲ್ಲಾದ್ಯಂತ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ಒಂಭತ್ತನೇ ದಿನವಾದ ಶನಿವಾರ ರಾತ್ರಿ ವಿಜೃಂಭಣೆಯಿಂದ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಆದರೆ, ನಗರದಲ್ಲಿ ಮಾತ್ರ ರವಿವಾರ ಮಧ್ಯಾಹ್ನದವರೆಗೂ ವಿಸರ್ಜನೆ ಕಾರ್ಯ ಮುಂದಿವರಿದಿತ್ತು.

Advertisement

ನಗರದಲ್ಲಿ 120ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಖಾಸಬಾವಿಯಲ್ಲಿ ವಿಸರ್ಜಿಸಲಾಯಿತು. ಶನಿವಾರ ತಡರಾತ್ರಿಯಿಂದ ಶುರುವಾದ ಮೆರವಣಿಗೆ ಸೋಮವಾರ ಮಧ್ಯಾಹ್ನದವರೆಗೂ ನಡೆಯಿತು. ಚಂದ್ರಮೌಳೇಶ್ವರ ವೃತ್ತದಲ್ಲಿ ಕೇಂದ್ರೀಯ ಗಜಾನನ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ಡಾ| ಶಿವರಾಜ ಪಾಟೀಲ ಚಾಲನೆ ನೀಡಿದರು.

ನಂತರ ಶಾಸಕ ಡಾ| ಶಿವರಾಜ ಪಾಟೀಲ ವಿವಿಧ ಗಜಾನನ ಸಮಿತಿಗಳ ಸದಸ್ಯರೊಂದಿಗೆ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು. ಇದಕ್ಕೆ ನಗರಸಭೆ ಸದಸ್ಯ ಪವನಕುಮಾರ ಸೇರಿದತೆ ಇತರೆ ಮುಖಂಡರು ಸಾಥ್‌ ನೀಡಿದರು.

ನಂತರ ಶುರುವಾದ ಅದ್ಧೂರಿ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ವಿಜೃಂಭಣೆಯಿಂದ ನಡೆಯಿತು. ಡಿಜೆ ಮಾದರಿಯ ಧ್ವನಿ ವರ್ಧಕಗಳನ್ನು ಬಳಸಿ ಯುವಕರು ನಾನಾ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಗಣೇಶ ಮೂರ್ತಿಗಳ
ಅಹೋರಾತ್ರಿ ಮೆರವಣಿಗೆಯನ್ನು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು. ಎಲ್ಲ ಬಡಾವಣೆಗಳಲ್ಲಿನ ಬಹುತೇಕ ಮೂರ್ತಿಗಳ ಮೆರವಣಿಗೆ ಚಂದ್ರವೌಳೇಶ್ವರ ವೃತ್ತಕ್ಕೆ ತಲುಪಿತು. ಅಲ್ಲಿ ಕೇಂದ್ರ ಗಜಾನನ ಸಮಿತಿಯಿಂದ ಸನ್ಮಾನ ಸ್ವೀಕರಿಸಿದ ನಂತರ ಮುಂದೆ ಸಾಗಿದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೆರವಣಿಗೆ ಕೊಂಚ ನೀರಸವೆನಿಸಿತು. ರಾತ್ರಿ 12 ಗಂಟೆಯಾದರೂ ಗಣೇಶ ವಿಗ್ರಹಗಳಾಗಲಿ, ಹೆಚ್ಚಿನ ಸಂಖ್ಯೆಯ ಜನರಾಗಲಿ ಕಂಡು ಬರಲಿಲ್ಲ.

ಬಿಗಿ ಬಂದೋಬಸ್ತ್: ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮ ಕೈಗೊಂಡಿದ್ದರು. ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ 150 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಎಸ್ಪಿ ನಿಶಾ ಜೇಮ್ಸ ನೇತೃತ್ವದಲ್ಲಿ ಇಬ್ಬರು ಎಎಸ್ಪಿ, ಮೂವರು ಡಿವೈಎಸ್ಪಿ, ಐವರು ಸಿಪಿಐ, 12 ಪಿಎಸ್‌ಐ, 40 ಎಎಸ್‌ಐ, ಒಂದು ಕೆಎಸ್‌ ಆರ್‌ಪಿ, ಮೂರು ಸಶಸ್ತ್ರ ತುಕಡಿ, 150ಕ್ಕೂ ಅಧಿಕ ಗೃಹರಕ್ಷಕ ದಳದ ಸಿಬ್ಬಂದಿ, 3-4 ಅಗ್ನಿಶಾಮಕ ದಳದ ತಂಡ, ಆ್ಯಂಬ್ಯುಲನ್ಸ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ, ಎಸ್‌ಪಿ ನಿಶಾ ಜೇಮ್ಸ್‌ ರಾತ್ರಿಯಿಡಿ ನಗರದಲ್ಲಿ ಸಂಚರಿಸುವ ಮೂಲಕ ಭದ್ರತೆ ಬಗ್ಗೆ ಪರಿಶೀಲಿಸುತ್ತಿದ್ದದ್ದು ಕಂಡು ಬಂತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next