Advertisement

Dakshina kannada ಜಿಲ್ಲೆಯ 12 ಸಾವಿರಕ್ಕೂ ಹೆಚ್ಚು ಮತದಾರರಿಂದ ಮನೆಯಿಂದಲೇ ಮತ ಚಲಾವಣೆ

12:21 PM Apr 24, 2023 | Team Udayavani |

ಮಂಗಳೂರು:ಇದೇ ಮೊದಲ ಬಾರಿಗೆ ಚುನಾವಣ ಆಯೋಗವು 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದ್ದು, ದ.ಕ. ಜಿಲ್ಲೆಯಲ್ಲಿ ಈ ಅವಕಾಶವನ್ನು 12,868 ಮತದಾರರು ಆಯ್ಕೆ ಮಾಡಿಕೊಂಡಿದ್ದಾರೆ.

Advertisement

ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಒಟ್ಟು 46,970 ಮಂದಿ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಮನೆಯಿಂದಲೇ ಮತದಾನದ ಅವಕಾಶಕ್ಕಾಗಿ ನಮೂನೆ 12 ಡಿಯನ್ನು ನೀಡಲಾಗಿತ್ತು. ಮನೆ ಯಿಂದ ಮತದಾನ ಬಯಸುವವರು ಎ. 17ರೊಳಗೆ ನಮೂನೆ ಭರ್ತಿ ಮಾಡಿ ಆಯಾ ಬಿಎಲ್‌ ಒಗಳಿಗೆ ಹಿಂತಿರುಗಿಸಬೇಕಾಗಿತ್ತು. ಅದರಂತೆ ಈಗ 10,808 ಮಂದಿ 80 ವರ್ಷ ಮೇಲ್ಪಟ್ಟ ಹಾಗೂ 2,060 ಅಂಗವಿಕಲ ಮತದಾರು ಮನೆ ಯಿಂದಲೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಮತದಾನ ಪ್ರಕ್ರಿಯೆಗಳನ್ನು ನಿರ್ವಹಿಸಲು ಜಿಲ್ಲೆಯಲ್ಲಿ ಒಟ್ಟು 368 ತಂಡಗಳನ್ನು ರಚಿಸಲಾಗಿದೆ. ಪ್ರತೀ ತಂಡದಲ್ಲಿ ಇಬ್ಬರು
ಮತಗಟ್ಟೆ ಅಧಿಕಾರಿಗಳು, ವೀಡಿಯೋಗ್ರಾಫ‌ರ್‌, ಮೈಕ್ರೋ ಅಬ್ಸರ್ವರ್‌, ಪೊಲೀಸ್‌ ಸಿಬಂದಿ ಬ್ಲಾಕ್‌ ಮಟ್ಟದ ಪಕ್ಷದ ಏಜೆಂಟರ ತಂಡ ಮುಂಚಿತವಾಗಿ ಬಿಎಲ್‌ಒಗಳ ಮೂಲಕ ಮತದಾರರಿಗೆ ತಿಳಿಸಲಾದ ದಿನದಂದು ಅವರ ಮನೆಗಳಿಗೆ ತೆರಳಿ ಅಂಚೆ ಮತಪತ್ರದಲ್ಲಿ ಅವರ ಮತವನ್ನು ದಾಖಲಿಸಿಕೊಂಡು ಕವರ್‌ನಲ್ಲಿ ಅದನ್ನು ಸೀಲ್‌ ಮಾಡಲಾಗುತ್ತದೆ. ಪ್ರತಿದಿನ ಸಂಗ್ರಹವಾದ
ಆಯಾ ತಾಲೂಕಿನ ಒಟ್ಟು ಮತಪತ್ರಗಳನ್ನು ಪ್ರತೀ ತಾಲೂಕಿನಲ್ಲಿ ನಿಗದಿಪಡಿಸಲಾದ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗುತ್ತದೆ.

ನಿಗದಿಪಡಿಸಿದ ದಿನದಂದು ಚುನಾವಣ ತಂಡ ಭೇಟಿ ನೀಡುವ ಸಂದರ್ಭ ಮತದಾರ ಮನೆಯಲ್ಲಿ ಇರದಿದ್ದಲ್ಲಿ 2ನೇ ಅವಕಾಶವನ್ನು ನೀಡಲಾಗುತ್ತದೆ. ಆ ದಿನವೂ ಸಿಗದಿದ್ದರೆ ಆ ಮತದಾರನಿಗೆ ಮತದಾನ ರದ್ದಾಗಲಿದೆ ಎಂದು ಜಿಲ್ಲೆಯ ಅಂಚೆ
ಮತಪತ್ರ ಸಹಾಯಕ ನೋಡಲ್‌ ಅಧಿಕಾರಿ ಪ್ರದೀಪ್‌ ಡಿ’ಸೋಜಾ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಅರ್ಜಿ ನೀಡಿದ್ದು 46,970 ಮಂದಿಗೆ ಮಾತ್ರ
ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ಪ್ರಕಾರ 80 ವರ್ಷ ಮೇಲ್ಪಟ್ಟ 46,927 ಹಾಗೂ ಅಂಗವಿಕಲ 14,007 ಮಂದಿ ಸೇರಿ ಒಟ್ಟು
60,934 ಮಂದಿ ಮನೆಯಿಂದ ಮತದಾನಕ್ಕೆ ಅರ್ಹತೆ ಪಡೆದಿದ್ದರು. ಆದರೆ ಬಿಎಲ್‌ಒಗಳು ಮನೆಗಳಿಗೆ ನಮೂನೆ 12 ಡಿ ನೀಡಲು ಹೋದ ಸಂದರ್ಭದಲ್ಲಿ ಅವರಲ್ಲಿ ಬಹುತೇಕರು ವಿಳಾಸ ಬದಲಾಯಿಸಿದ್ದು, ಕೆಲವರು ಮೃತಪಟ್ಟಿದ್ದರೂ ಹೆಸರು ಪಟ್ಟಿಯಿಂದ ಡಿಲೀಟ್‌ಗೊಂಡಿರದ ಕಾರಣ, ಜಿಲ್ಲೆಯಲ್ಲಿ 46,970 ಮಂದಿಗೆ ಅರ್ಜಿ ನೀಡಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

139 ಮಂದಿ ಅಗತ್ಯ ಸೇವೆಯ ಗೈರು ಮತದಾರರಿಗೂ ಅವಕಾಶ

ಮತದಾನದ ದಿನದಂದು ಅಗತ್ಯ ಸೇವೆಗಳಾದ ಕೆಎಸ್‌ಆರ್‌ಟಿಸಿ ಚಾಲಕರು, ವೈದ್ಯರು, ಮೆಸ್ಕಾಂ ಲೈನ್‌ಮ್ಯಾನ್‌ಗಳು, ಪತ್ರಕರ್ತರು ಸೇರಿದಂತೆ ತಮ್ಮ ದೈನಂದಿನ ಅಗತ್ಯ ಸೇವೆಯ ಹಿನ್ನೆಲೆಯಲ್ಲಿ ಮತದಾನಕ್ಕೆ ಗೈರಾಗುವುದನ್ನು ತಪ್ಪಿಸಲು ಈ ಬಾರಿ ಅಂತಹವರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಜಿಲ್ಲೆಯಲ್ಲಿ 139 ಮಂದಿ ನಮೂನೆ 12 ಡಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅವರಿಗೆ ವಿಧಾನಸಭಾ ಕ್ಷೇತ್ರದ ತಾಲೂಕು ಕಚೇರಿಗಳ ಅಂಚೆ ಮತದಾನ ಕೇಂದ್ರಗಳಲ್ಲಿ ಮೇ 2ರಿಂದ 4ರ ವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕೋವಿಡ್‌ ಸೋಂಕಿತ ಮತದಾರರು ಇಲ್ಲ!
ಕೋವಿಡ್‌ ಸೋಂಕಿತರಿಗೂ ಈ ಬಾರಿ ಮನೆಯಿಂದ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ದ.ಕ. ಜಿಲ್ಲೆಯಲ್ಲಿ ಅಂತಹ
ಮತದಾರರಿಂದ ಅರ್ಜಿ ಬಂದಿಲ್ಲ.

ಮನೆಯಿಂದಲೇ ಮತದಾನ ಆಯ್ದುಕೊಂಡಿರುವ 80 ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲ ಮತದಾರರಿಗೆ ಎ. 29ರಿಂದ ಮೇ 6ರ ವರೆಗೆ ಅಂಚೆ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆಗಳು ನಡೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ಈ ಮತದಾನದಲ್ಲಿ ಪಾಲ್ಗೊಳ್ಳುವ ಅಧಿಕಾರಿ, ಸಿಬಂದಿಗೆ ಎ. 23ರಂದು ಜಿಲ್ಲಾ ಮಟ್ಟದಲ್ಲಿ ತರಬೇತಿಯನ್ನು ನಡೆಸಲಾಗಿದೆ.
– ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಚುನಾವಣ ಅಧಿಕಾರಿ, ದ.ಕ. ಜಿಲ್ಲೆ

*ಸತ್ಯಾ.ಕೆ

Advertisement

Udayavani is now on Telegram. Click here to join our channel and stay updated with the latest news.

Next