Advertisement

ಜನವರಿಯಿಂದ 332 ಟೆಕ್‌ ಕಂಪೆನಿಗಳಿಂದ ಉದ್ಯೋಗಿಗಳಿಗೆ ಗೇಟ್‌ಪಾಸ್‌

01:00 AM Feb 11, 2023 | Team Udayavani |

ಹೊಸದಿಲ್ಲಿ: ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ 332 ಟೆಕ್‌ ಕಂಪೆನಿಗಳು ಬರೋಬ್ಬರಿ 1,00,746 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ. ವೆಚ್ಚ ತಗ್ಗಿಸುವ ಉದ್ದೇಶದಿಂದ ಮತ್ತು ಸಂಭಾವ್ಯ ಆರ್ಥಿಕ ಹಿಂಜರಿಕೆಯ ಆತಂಕದಿಂದ ಈ ಕ್ರಮ ಕೈಗೊಂಡಿವೆ.

Advertisement

ವರದಿಯೊಂದರ ಪ್ರಕಾರ, ಗೂಗಲ್‌, ಮೈಕ್ರೋಸಾಫ್ಟ್, ಸೇಲ್ಸ್‌ ಫೋರ್ಸ್‌, ಅಮೆಜಾನ್‌ ಸಹಿತ ಅನೇಕ ದೊಡ್ಡ ಟೆಕ್‌ ಕಂಪೆನಿಗಳು 2023ರಲ್ಲಿ ತಮ್ಮ ಕಂಪೆನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು ತಗ್ಗಿಸಿವೆ. ಟೆಕ್‌ ದೈತ್ಯ ಗೂಗಲ್‌ ಅತೀ ಹೆಚ್ಚು ಅಂದರೆ 12,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದು ಕಂಪೆನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ.6ರಷ್ಟು ಆಗಿದೆ. ಅದೇ ರೀತಿ ಪ್ರಮುಖವಾಗಿ ಮೈಕ್ರೋಸಾಫ್ಟ್ 10,000 ಉದ್ಯೋಗಿಗಳು, ಅಮೆಜಾನ್‌ 8,000, ಸೇಲ್ಸ್‌ಫೋರ್ಸ್‌ 8,000, ಡೆಲ್‌ 6,650, ಐಬಿಎಂ 3,900, ಸ್ಯಾಪ್‌ 3,000, ಜೂಮ್‌ 1,300, ಕಾಯಿನ್‌ಬೇಸ್‌ 950 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿವೆ.

ಯಾಹೂ ಸೇರ್ಪಡೆ: ಯಾಹೂ ಕಂಪೆನಿಯು ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ. 1,600 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಯಾಹೂ ಘೋಷಿಸಿದೆ. ಕಂಪೆನಿಯ ಒಟ್ಟು ಉದ್ಯೋಗಿಗಳ ಪೈಕಿ ಶೇ.20ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕಂಪೆನಿ ಗುರುವಾರ ಪ್ರಕಟಿಸಿದೆ. ಮೈಕ್ರೋಸಾಫ್ಟ್ ಮಾಲಕತ್ವದ ಗಿಟ್‌ಹಬ್‌ ಕೂಡ ಮುಂದಿನ ತ್ತೈಮಾಸಿಕದಲ್ಲಿ ಒಟ್ಟು ಉದ್ಯೋಗಿಗಳ ಪೈಕಿ ಶೇ.10ರಷ್ಟು ಅಂದರೆ 300 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ.

9 ತಿಂಗಳ ವೇತನ ಪರಿಹಾರ?
ಭಾರತದಲ್ಲಿ ಚೀನ ಮೂಲದ ಟಿಕ್‌ಟಾಕ್‌ಗೆ 2020ರ ಜೂನ್‌ನಲ್ಲೇ ನಿಷೇಧ ಹೇರಲಾಗಿದೆ. ಆದರೆ ಇದೀಗ ಟಿಕ್‌ಟಾಕ್‌ ಇಂಡಿಯಾ ಕಂಪೆನಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ 40 ಉದ್ಯೋಗಿಗಳನ್ನು ವಜಾಗೊಳಿಸಿದೆ. ಅವರಿಗೆ ಪರಿಹಾರವಾಗಿ ಬರೋಬ್ಬರಿ 9 ತಿಂಗಳ ವೇತನ ನೀಡಲಾಗಿದೆ ಎಂದು ಹಲವು ಮಾಧ್ಯಮಗಳಲ್ಲಿನ ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next