Advertisement

ಪುತ್ತೂರಲ್ಲಿ ಬಿರುಗಾಳಿ ಅಬ್ಬರ: 10ಕ್ಕೂ ಹೆಚ್ಚು ಮನೆ, ಕೃಷಿ ಪ್ರದೇಶ ಹಾನಿ

02:26 AM May 02, 2020 | Sriram |

ಪುತ್ತೂರು: ಪುತ್ತೂರು ತಾಲೂಕಿನ ಕೋಡಿಂಬಾಡಿ, ಬೆಳ್ಳಿಪ್ಪಾಡಿ, 34ನೇ ನೆಕ್ಕಿಲಾಡಿ, ಉಪ್ಪಿನಂಗಡಿ ಮತ್ತಿತರ ಕಡೆಯಲ್ಲಿ ಗುರುವಾರ ಸಂಜೆ ಬಿರುಗಾಳಿ ಬೀಸಿ ಅಪಾರ ಪ್ರಮಾಣದ ಕೃಷಿ ಹಾಗೂ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಈ ಬಿರುಗಾಳಿಗೆ ಮನೆಯ ಛಾವಣಿಗಳು ಹಾರಿಹೋಗಿವೆ. ಮರ ಬಿದ್ದು ಕಾಂಕ್ರೀಟ್‌ ಮನೆ ಭಾಗಶಃ ಧ್ವಂಸವಾಗಿದೆ. ಕೆಲವು ಮನೆಗಳ ಹಂಚುಗಳು ಹಾರಿ ಹೋಗಿವೆ.

Advertisement

ಕೋಡಿಂಬಾಡಿಯಲ್ಲಿ 3 ಮನೆ, ಬೆಳ್ಳಿಪ್ಪಾಡಿಯಲ್ಲಿ 3 ಮನೆಗಳಿಗೆ ಅಪಾರ ಹಾನಿ ಉಂಟಾಗಿದೆ. ಇಲ್ಲಿನ ಆಶಾ ಕಾರ್ಯಕರ್ತೆ ಪವಿತ್ರಾ ಸುರೇಶ್‌ ಶೆಟ್ಟಿ ಅವರ ಹೊಸ ಮನೆಗೆ ಅಳವಡಿಸಲಾಗಿದ್ದ ಸಿಮೆಂಟ್‌ ಶೀಟ್‌ಗಳು ಸಂಪೂರ್ಣ ನಾಶವಾಗಿವೆ. ನೆಕ್ಕಿಲಾಡಿಯ ತನಿಯ ಮುಗೇರ ಹಾಗೂ ಆಸ್ಯಮ್ಮ ಅವರ ಮನೆಯ ಹೆಂಚುಗಳು ಹಾರಿಹೋಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಬಳಿಯಲ್ಲಿರುವ ನೌಕರರ ವಸತಿಗೃಹದ ಮೂರು ಮನೆಗಳ ಹಂಚು ಹಾಗೂ ಸಿಮೆಂಟ್‌ ಶೀಟ್‌ಗಳು ಸಂಪೂರ್ಣ ನಾಶವಾಗಿದೆ. ಈ ಮನೆಯಲ್ಲಿದ್ದ ಮೂರು ಕುಟುಂಬಗಳಿಗೆ ತಾತ್ಕಾಲಿಕ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ಉಪ್ಪಿನಂಗಡಿಯ ರಥಬೀದಿಯಲ್ಲಿನ ಲಕ್ಷ್ಮೀವೆಂಕಟರಮಣ ದೇವಾಲಯದ ಕಲ್ಯಾಣ ಮಂಟಪ, ಗಣಪತಿ ಮಠ, ಪಿಂಡ ಪ್ರದಾನ ಕಟ್ಟಡ, ಪಾಕಶಾಲೆ, ಜಗದೀಶ್‌ ಶೆಟ್ಟಿ ಅವರ ಕಟ್ಟಡ ಸಹಿತ ಪರಿಸರದ ಹಲವು ಕಟ್ಟಡಗಳು ಹಾನಿಗೀಡಾಗಿವೆ. ಉಪ್ಪಿನಂಗಡಿ ಸಮೀಪದ ಬನ್ನೆಂಗಲ ಜಯರಾಮಕೃಷ್ಣ ಅವರ ಮನೆಗೆ ಸಿಡಿಲು ಬಡಿದು ಹಾನಿ ಉಂಟಾಗಿದೆ.

ಬೆಳ್ಳಿಪ್ಪಾಡಿ ಗ್ರಾಮದ ಸಕಲೇಶ್ವರ ದೇವಸ್ಥಾನದ ಮೇಲೆ ಮರ ಉರುಳಿ ಬಿದ್ದ ಘಟನೆ ಸಂಭವಿಸಿದೆ. ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ಸಮೀಪದ ಬರಮೇಲು ಎಂಬಲ್ಲಿನ ಶಿವಣ್ಣ ಗೌಡ ಅವರ ಮನೆಯ ಮಾಡು ಹಾರಿ ಹೋಗಿದೆ. ಕಾರ್ನೋಜಿ ಬಳಿಯ ಸುರುಳಿಮಜಲು ಎಂಬಲ್ಲಿ ಶಾಂತಿನಗರ ಹಿ.ಪ್ರಾ. ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ಉಷಾ ಅವರ ಮನೆಗೆ ಹಾನಿ ಉಂಟಾಗಿದೆ. ಬೆಳ್ಳಿಪ್ಪಾಡಿ ಗ್ರಾಮದ ಕಾಪಿಕಾಡು ಲೋಕಪ್ಪ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ. ಬಾಳೆ ಕೃಷಿ ಬಹುತೇಕ ನಾಶವಾಗಿದೆ. ಅಡಿಕೆ ತೋಟದಲ್ಲಿದ್ದ ಕೊಕ್ಕೊ ಮತ್ತಿತರ ಕೃಷಿಗಳು ಸಂಪೂರ್ಣ ನಾಶವಾಗಿವೆ.

ತಹಶೀಲ್ದಾರ್‌ ರಮೇಶ್‌ ಬಾಬು ಪರಿಶೀಲನೆ
ಉಪ್ಪಿನಂಗಡಿ, ಕೋಡಿಂಬಾಡಿ, ನೆಕ್ಕಿಲಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮಗಳಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಶುಕ್ರವಾರ ಪುತ್ತೂರು ತಹಶೀಲ್ದಾರ್‌ ರಮೇಶ್‌ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ 10ಕ್ಕೂ ಹೆಚ್ಚು ಮನೆಗಳ ಕುಟುಂಬಗಳನ್ನು ಭೇಟಿ ಮಾಡಿ ಸರಕಾರದಿಂದ ಸಿಗುವ ಪರಿಹಾರವನ್ನು ತತ್‌ಕ್ಷಣ ನೀಡುವುದಾಗಿ ತಿಳಿಸಿದರು. ಗ್ರಾ.ಪಂ. ವತಿಯಿಂದ ಈ ಮನೆಗಳಿಗೆ ಸೌಲಭ್ಯ ನೀಡುವಂತೆ ಸೂಚಿಸಿದರು. ಪುತ್ತೂರು ಕಂದಾಯ ನಿರೀಕ್ಷಕ ರವಿಕುಮಾರ್‌, ಉಪ್ಪಿನಂಗಡಿ ಕಂದಾಯ ನಿರೀಕ್ಷಕ ವಿಜಯ ವಿಕ್ರಮ, ಕೋಡಿಂಬಾಡಿ ಗ್ರಾಮಕರಣ ಚಂದ್ರ ನಾೖಕ್‌, ನೆಕ್ಕಿಲಾಡಿ ಗ್ರಾಮಕರಣಿಕ ರಮಾನಂದ್‌ ಚಕ್ಕಡಿ ಭಾಗವಹಿಸಿದ್ದರು. ಗುರುವಾರ ಸಂಜೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

Advertisement

 ಶೀಘ್ರ ಪರಿಹಾರ
ಮನೆ ಮತ್ತು ಕೃಷಿ ಹಾನಿ ಬಗ್ಗೆ ತಾಂತ್ರಿಕ ವರದಿ ಅನುಸರಿಸಿ ಸರಕಾರದ ವತಿಯಿಂದ ನಿಗದಿಪಡಿಸಲಾದ ಪರಿಹಾರದ ಮೊತ್ತವನ್ನು ಮೂರು ದಿನಗಳ ಅನಂತರ ಮನೆಯ ಮಾಲಕರಿಗೆ ಹಾಗೂ ಕೃಷಿ ಮಾಲಕರಿಗೆ ಪ್ರಾಕೃತಿಕ ವಿಕೋಪ ನಿಧಿಯಿಂದ ನೀಡಲಾಗುವುದು.
 - ರಮೇಶ್‌ ಬಾಬು, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next