ಹಾಸನ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಯಲು ದಿನಸಿ ಅಂಗಡಿಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯಲು ಅವಕಾಶ ನೀಡುವುದು. ಅಗತ್ಯ ಸೇವೆಯಲ್ಲಿ ಇರುವವರಿಗೆ ಮಾತ್ರ ಪೆಟ್ರೋಲ್, ಡೀಸೆಲ್ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಎಲ್ಲಾ ಶಾಸಕರೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಲಾಕ್‌ಡೌನ್ ಜಾರಿಯಲ್ಲಿದ್ದರೂ ಸಾರ್ವಜನಿಕರು ದಿನಸಿ ಖರೀದಿ ನೆಪದಲ್ಲಿ ದಿನವಿಡೀ ಸಂಚರಿಸುವುದನ್ನು ತಡೆಯಲು ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನಿಡಲಾಗುತ್ತದೆ. ಅಗತ್ಯವಿದ್ದವರ ಮನೆಗೆ ವರ್ತಕರೇ ದಿನಸಿ ತಲುಪಿಸಲಿ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಆಹಾರ ಸಾಮಗ್ರಿ ಸರಬರಾಜಿಗೆ ಅವಕಾಶ: ಅಹಾರ ಸಾಮಗ್ರಿ ಸರಬರಾಜು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು. ಜಿಲ್ಲಾಧಿಕಾರಿ ಅನುಮತಿ ಪಡೆದು ಯಾರು ಎಲ್ಲಿಂದ ಬೇಕಿದ್ದರೂ ಅಹಾರ ಸಾಮಗ್ರಿ ತರಿಸಿಕೊಳ್ಳಬಹುದು. ಪರಿಸ್ಥಿತಿಯ ದುರ್ಲಾಭ ಪಡೆದು ದುಬಾರಿ ಬೆಲೆಗೆ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆ ನಿರ್ಧರಿಸಿತು.
ಅಗತ್ಯವಿರುವಷ್ಟು ಔಷಧ ಪೂರೈಕೆ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೆ.ಸಿ. ಮಾಧು ಸ್ವಾಮಿ ಅವರು, ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕಿತರಿಲ್ಲ. ಇದೇ ಸ್ಥಿತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವೈದ್ಯರು ರಜೆ ಪಡೆಯದಂತೆ ಸೂಚನೆ ನೀಡಿದ್ದು, ಅನಿವಾರ್ಯ ಸಂದರ್ಭ ಇದ್ದರಷ್ಟೇ ರಜೆ ನೀಡಬೇಕು. ಮನೆ ಮನೆಗೆ ತೆರಳಿ ಆರೋಗ್ಯ ಬಗ್ಗೆ ತಪಾಸಣೆಗೆ ಆಶಾ ಕಾರ್ಯ ಕರ್ತೆಯರ ಬಳಕೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾ ಗಿದೆ. ಮೆಡಿಕಲ್ ಸ್ಟೋರ್‌ಗಳಿಗೆ ಅಗತ್ಯವಿರುವಷ್ಟು ಔಷಧ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲೆಯ ಗಡಿ ಬಂದ್: ಹಾಸನ ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆ ಗಳಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲೂ ನಿರ್ಬಂಧ ವಿಧಿಸಲಾಗಿದೆ. ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ಬಾಮಿ, ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಶ್ರೀನಿವಾಸ್‌ಗೌಡ, ಜಿಪಂ ಸಿಇಒ ಬಿ.ಎ.ಪರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಶಾಸಕರಾದ ಎಚ್.ಡಿ.ರೇವಣ್ಣ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ, ಕೆ.ಎಸ್. ಲಿಂಗೇಶ್ ಅವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡು ಕೆಲವು ಸಲಹೆ ನೀಡಿದರು.