Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ-2019 ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಬಂದಿದ್ದು, ಭಾನುವಾರ, ಸೋಮವಾರ ಹಾಗೂ ಮಂಗಳವಾರ ಅಧ್ಯಯನ ನಡೆಸಿ, ನಮ್ಮಿಂ ದಲೂ ಮಾಹಿತಿ ಪಡೆಯಲಿದ್ದಾರೆ. ನಾವು ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು.
Related Articles
ಬಾಗಲಕೋಟೆ/ಗದಗ/ಧಾರವಾಡ: ಕೇಂದ್ರ ನೆರೆ ಅಧ್ಯಯನ ತಂಡ ಸೋಮವಾರ ಬಾಗಲ ಕೋಟೆ, ಗದಗ ಹಾಗೂ ಧಾರವಾಡ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ ನೇತೃತ್ವದ ಏಳು ಜನ ಅಧಿಕಾರಿಗಳು, ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಗೆ ತೆರಳಿ 70 ವರ್ಷಗಳ ಸೇತುವೆ ಹಾನಿಯಾಗಿದ್ದನ್ನು ಪರಿಶೀಲಿಸಿದರು. ರಬಕವಿ-ಬನಹಟ್ಟಿ ತಾಲೂಕಿನ ಅಸ್ಕಿ ಪರಿ ಹಾರ ಕೇಂದ್ರಕ್ಕೆ ತೆರಳುತ್ತಿದ್ದಂತೆ ಮಹಿಳೆಯರಿಬ್ಬರು ಅಧಿಕಾರಿಗಳ ಕಾಲಿಗೆ ಬಿದ್ದು ತಮ್ಮ ಗೋಳು ಹೇಳಿಕೊಂಡರು. ಅಲ್ಲಿಂದ ಮುಧೋಳ ತಾಲೂಕಿನ ಮುಧೋಳ-ಯಾದವಾಡ ಸೇತುವೆ ಹಾನಿ, ಚಿಚಖಂಡಿ ಬಳಿ ಪಾಲಿಹೌಸ್, ಸಸಿ ಹಾಗೂ ಬೆಳೆ ಹಾನಿ ವೀಕ್ಷಿಸಿದರು.
Advertisement
ಪಟ್ಟದಕಲ್ಲ, ಕಲಾದಗಿಯಲ್ಲಿ ದಾಳಿಂಬೆ ಹಾನಿ ಕುರಿತು ಮಾಹಿತಿ ಪಡೆದರು. ಮಧ್ಯಾಹ್ನ 1.30ರ ಸುಮಾರಿಗೆ ಗದಗ ಜಿಲ್ಲೆಗೆ ಆಗಮಿಸಿದ ಅಧಿಕಾರಿಗಳು ಕೊಣ್ಣೂರು, ಹೊಳೆ ಆಲೂರಿನಲ್ಲಿ ಮಳೆ ಹಾನಿ ವೀಕ್ಷಿಸಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಹೊಳೆಆಲೂರು ಪ್ರವಾಸಿ ಮಂದಿರ ದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು. ಸಂಜೆ ವೇಳೆ ಧಾರವಾಡ ಜಿಲ್ಲೆಗೆ ಆಗಮಿಸಿದ ಅಧಿ ಕಾರಿಗಳ ತಂಡ, ಹುಬ್ಬಳ್ಳಿ ನಗರ, ತಾಲೂಕು ಹಾಗೂ ನವಲಗುಂದ ತಾಲೂಕಿನಲ್ಲಿ ನೆರೆಯಿಂದ ಹಾನಿ ಯಾಗಿರುವ ಬೆಳೆ ಹಾಗೂ ಮನೆಗಳ ಹಾನಿ ಕುರಿತು ಪರಿಶೀಲನೆ ನಡೆಸಿತು.
ನವಲಗುಂದ ತಾಲೂಕಿನ ಅಳಗವಾಡಿ, ಯಮನೂರು, ಹುಬ್ಬಳ್ಳಿ ತಾಲೂಕಿನ ಹೆಬಸೂರು, ಕಿರೆಸೂರು ಗ್ರಾಮದಲ್ಲಿನ ಹೆಸರು, ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿತು. ಹುಬ್ಬಳ್ಳಿ ನಗರದ ಉಣಕಲ್ಲ ಕೆರೆ ಕೋಡಿ ಹರಿದ ಪರಿಣಾಮ ಇಲ್ಲಿನ ಉಣಕಲ್ಲ, ದೇವಿ ನಗರ, ಹನುಮಂತ ನಗರದ ಸೇತುವೆ ಕೊಚ್ಚಿ ಹೋಗಿರುವುದನ್ನು ವೀಕ್ಷಿಸಿದರು. ಗೋಕುಲ ಗ್ರಾಮದಲ್ಲಿ ಮಳೆಯಿಂದ ಬಿದ್ದಿರುವ ಮನೆಗಳನ್ನು ಪರಿಶೀಸಿದರು. ನಂತರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲೆ ನೆರೆಯನ್ನು ಕಟ್ಟಿಕೊಡುವ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿದರು.
ಅತಿವೃಷ್ಟಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಿರಿ ಧಾರವಾಡ: “ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಚರ್ಚೆಗಾಗಿಯೇ ವಿಶೇಷ ಅಧಿವೇಶನ ಕರೆಯುವಂತೆ’ ಮಾಜಿ ಗೃಹಸಚಿವ ಎಂ.ಬಿ. ಪಾಟೀಲ ಆಗ್ರಹಿಸಿದರು. ಹಾರೋಬೆಳವಡಿಯಲ್ಲಿ ನೆರೆ ಮತ್ತು ಅತಿವೃಷ್ಟಿಯಿಂದ ಆಗಿರುವ ಹಾನಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಬದ್ಧತೆಯಿಂದ ಕಾಲಮಿತಿಯಲ್ಲಿಯೇ ಕೆಲಸ ಮಾಡಬೇಕು. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು. ಕಬ್ಬು ಬೆಳೆಗಾರರಿಗೆ ನಷ್ಟವಾಗಿರುವ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದೇನೆ. ವಾಣಿಜ್ಯ ಬೆಳೆಗೆ ಪ್ರತಿ ಎಕರೆಗೆ ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದೇವೆ. ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ದೊರೆತಿಲ್ಲ. ಭೇಟಿಯಾಗಿ ಒತ್ತಾಯ ಮಾಡುತ್ತೇನೆ ಎಂದರು. ಕೊಡಗಿನಲ್ಲಿ ಈ ಹಿಂದೆ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ನೀಡಿದ್ದಾರೆ. ಅದೇ ರೀತಿ ಇಲ್ಲಿಯ ಜನರಿಗೂ ನೀಡಬೇಕು. ಕೆಲವೆಡೆ ಪರಿಹಾರ ಕೂಡ ನೀಡಿಲ್ಲ. ಮುಖ್ಯಮಂತ್ರಿಗಳು 40 ಸಾವಿರ ಕೋಟಿ ಹಾನಿ ಅಂದಾಜು ಮಾಡಿದ್ದಾರೆ. ಆದರೆ, 40 ಸಾವಿರ ಕೋಟಿ ಹೇಗೆ ಹೊಂದಿಸುತ್ತಾರೆ ಎನ್ನುವುದು ಮುಂದಿರುವ ಸವಾಲು. ವಿರೋಧ ಪಕ್ಷದವರಾಗಿ ಈ ವಿಚಾರದಲ್ಲಿ ಸರ್ಕಾರದ ಜೊತೆಗೆ ನಾವಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು. ಭೂ ಕುಸಿತವಾಗುವ ಪ್ರದೇಶದಲ್ಲಿ ಸಸಿ ನಾಟಿ
ಬೆಂಗಳೂರು: ಮಳೆ ಸಂದರ್ಭದಲ್ಲಿ ಭೂ ಕುಸಿತವಾಗುವ ಪ್ರದೇಶಗಳನ್ನು ಗುರುತಿ ಸಿದ್ದು, ಅಲ್ಲಿ ರಸ್ತೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದೆ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಮಣ್ಣನ್ನು ಬಿಗಿಗೊಳಿಸಲಾಗಿತ್ತದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಳೆ ಬಂದಾಗ ಕೊಡಗು ಸೇರಿ ಕೆಲವೆಡೆ ಪದೇ ಪದೆ ಭೂ ಕುಸಿತವಾಗಿರುವ ಪ್ರದೇಶಗಳನ್ನು ಗುರುತಿಸಿ ಕಾಮಗಾರಿ ಕೈಗೊಳ್ಳಬಾರದು ಹಾಗೂ ಯಾರೂ ವಾಸ ಮಾಡಬಾರದು ಎಂಬ ನಿಯಮ ತರಲಾಗಿದೆ. ಇಲ್ಲಿ ಭೂ ಕುಸಿತ ಹತೋಟಿಗೆ ಅರಣ್ಯ ಇಲಾಖೆಯಿಂದ ಹೆಚ್ಚು ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಅಧ್ಯಯನ ಮಾಡುತ್ತಿದೆ. ಸರ್ಕಾರವನ್ನು ಮಂಗಳವಾರ ಕೇಂದ್ರ ತಂಡವನ್ನು ಭೇಟಿ ಮಾಡಿ ಪ್ರವಾಹದಿಂದ ಆದ ನಷ್ಟ, ಪ್ರವಾಹಕ್ಕೊಳಗಾದ ಪ್ರದೇಶ ಮೊದಲಾದ ಮಾಹಿತಿಗಳನ್ನು ನೀಡಿ 30 ಸಾವಿರ ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಹೇಳಿದರು. ವೈಜ್ಞಾನಿಕ ಪರಿಹಾರ ನೀಡುವಂತೆ ಸಿಎಂಗೆ ಮನವಿ
ಬೆಂಗಳೂರು: ಪ್ರವಾಹದಿಂದ ಉಂಟಾಗಿರುವ ಕೃಷಿ ಹಾಗೂ ತೋಟಗಾರಿಕೆ ಬೆಳೆನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ನೀಡ ಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ರೈತ ಸಂಘಟನೆಗಳ ನಿಯೋಗ, ಪ್ರವಾಹದಿಂದ ಲಕ್ಷಾಂತರ ಹೆಕ್ಟೇರ್ ಕಬ್ಬು, ಗೋವಿನ ಜೋಳ, ಬಾಳೆ, ಹತ್ತಿ, ಈರುಳ್ಳಿ, ಹೆಸರು, ಸೂರ್ಯಕಾಂತಿ, ಭತ್ತ, ತೆಂಗು, ಮಾವು, ಸೀಬೆ, ಸಪೋಟ, ದಾಳಿಂಬೆ ಬೆಳೆಗಳು ಸಾಕಷ್ಟು ನಷ್ಟವಾಗಿವೆ. ಇದಕ್ಕೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತರು ಉಳಿಯುವುದಿಲ್ಲ ಎಂದು ಕೋರಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ರೈತ ಸಂಘದಿಂದ ಭದ್ರಾವತಿ ಎಂಪಿಎಂ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಆರಂಭಿಸುವಂತೆ ಮನವಿ ಮಾಡಿದರು. ಶಿವಮೊಗ್ಗ ಜಿಲ್ಲೆ ಯಲ್ಲಿ ಪ್ರಸಕ್ತ ವರ್ಷ 4 ಸಾವಿರ ಕೆರೆಯಲ್ಲಿ ಕಬ್ಬು ಬೆಳೆದಿದ್ದು ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ ಎಂಪಿಎಂ ಪ್ರಾರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಜತೆಗೆ ರೈತರಿಗೆ ಕಾರ್ಖಾನೆ ಯಿಂದ ಬರಬೇಕಿರುವ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಂಕಷ್ಟದಲ್ಲೂ ಆರತಿ ಎತ್ತಿ ಸ್ವಾಗತಿಸಿದರು
ಬನಹಟ್ಟಿ (ಬಾಗಲಕೋಟೆ): ನೆರೆ ಹಾನಿ ಅಧ್ಯಯನಕ್ಕೆ ಬಂದಿರುವ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳ ಕಾಲಿಗೆ ಬಿದ್ದು ಸಂತ್ರಸ್ತರು ಗೋಳಾಡಿದ ಪ್ರಸಂಗ ಅಸ್ಕಿ ಪರಿಹಾರ ಕೇಂದ್ರದಲ್ಲಿ ನಡೆದಿದೆ. ಕೇಂದ್ರ ಗೃಹ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ನೇತೃತ್ವದ ಅಧಿಕಾರಿಗಳ ತಂಡ, ಅಸ್ಕಿ ಪರಿಹಾರ ಕೇಂದ್ರಕ್ಕೆ ಆಗ ಮಿಸುತ್ತಿದ್ದಂತೆ ಅವರ ಕಾಲಿಗೆ ಬಿದ್ದರು. ಇನ್ನೂ ಕೆಲವು ಮಹಿಳೆಯರು ಕಣ್ಣೀರು ಹಾಕಿ “ಸಾಹೇಬ್ರ ನಮ್ಮ ಕಷ್ಟಾ ನೋಡ್ರಿ’ ಎಂದು ಸಮಸ್ಯೆ ಹೇಳಿಕೊಂಡರು. ಜಿಲ್ಲಾ ಧಿಕಾರಿ ರಾಮಚಂದ್ರನ್ ಹಿಂದಿಯಲ್ಲಿ ಸಮಸ್ಯೆ ಹೇಳಿಕೊಳ್ಳಲು ಮನವಿ ಮಾಡಿದರು. ಆಗ ತೇರದಾಳ ಶಾಸಕ ಸಿದ್ದು ಸವದಿ ಮಹಿಳೆಯರ ಅಳಲು ಹಾಗೂ ವಸ್ತು ಸ್ಥಿತಿ ಬಗ್ಗೆ ಹಿಂದಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು. ಸಂಕಷ್ಟದಲ್ಲೂ ಗೌರವ: ತಮ್ಮ ಸಮಸ್ಯೆ ಅರಿಯಲು ಬಂದಿದ್ದ ಕೇಂದ್ರ ಅಧ್ಯಯನ ತಂಡದ ಅಧಿ ಕಾರಿಗಳನ್ನು ಅಸ್ಕಿ ಪರಿಹಾರ ಕೇಂದ್ರದ ಸಂತ್ರಸ್ತರು ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇಂದ್ರ ತಂಡದ ಅ ಧಿಕಾರಿಗಳು ಹಾಗೂ ಜಿಲ್ಲಾ ಧಿಕಾರಿ ರಾಮಚಂದ್ರನ್ ಅಲ್ಲಿಯೇ ವಾಸವಿದ್ದ ಕುಟುಂಬಗಳನ್ನು ಭೇಟಿ ಮಾಡಿ ಅವರಿಂದ ಸಮಸ್ಯೆ ಆಲಿಸಿದರು. ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ಶಾಖೆ ನಿರ್ದೇಶಕ ಎಸ್.ಸಿ.ಮೀನಾ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪುಣ್ಣುಸ್ವಾಮಿ, ಕೇಂದ್ರ ಜಲಸಂಪನ್ಮೂಲದ ಬೆಂಗ ಳೂರಿನ ಪ್ರಾದೇಶಿಕ ಕಚೇರಿಯ ಎಸ್.ಇ. ಜಿತೇಂದ್ರ ಪನವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪ್ರಾದೇಶಿಕ ಕಚೇರಿಯ ವಿಜಯಕುಮಾರ, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಣಿಕಚಂದ್ರ ಪಂಡಿತ ಹಾಗೂ ಇಂಧನ ಸಚಿವಾಲಯದ ಉಪನಿರ್ದೇಶಕ ಓ.ಪಿ.ಸುಮನ್ ಇದ್ದರು. ಮನೆ, ಬೆಳೆ, ರಸ್ತೆ, ಸೇತುವೆ ಹಾನಿಯ ಪ್ರಾಥಮಿಕ ವರದಿಯನ್ನಾಧರಿಸಿ ಸಮಗ್ರ ಹಾನಿ ಕುರಿತು ಪ್ರಸ್ತಾವನೆಯನ್ನು ಮಂಗಳವಾರ ರಾಜ್ಯ ಸರ್ಕಾರ ನೀಡಲಿದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಪ್ರಕಾಶ, ಕೇಂದ್ರ ನೆರೆ ಅಧ್ಯಯನ ತಂಡದ ಮುಖ್ಯಸ್ಥ