Advertisement

94ಸಿ, 94 ಸಿಸಿ: ಮಂಜೂರಿಗಿಂತ ತಿರಸ್ಕೃತ ಅರ್ಜಿಗಳೇ ಅಧಿಕ !

10:09 AM Jul 15, 2019 | keerthan |

ಮಂಗಳೂರು: ಸರಕಾರಿ ಜಮೀನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ 94 ಸಿ ಮತ್ತು 94 ಸಿಸಿ ಅಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಲ್ಲಿಸಲಾದ ಅರ್ಜಿಗಳ ಪೈಕಿ ಮಂಜೂರಾದದ್ದಕ್ಕಿತ ತಿರಸ್ಕೃತವಾದವುಗಳ ಸಂಖ್ಯೆಯೇ ಅಧಿಕ!

Advertisement

ಅನಧಿಕೃತವಾಗಿ ನಿರ್ಮಿಸಿರುವ ಮನೆ ಸಕ್ರಮ (ನಿಯಮ 94ಸಿ ಗ್ರಾಮೀಣ) ಅಡಿಯಲ್ಲಿ ದ.ಕ. ಜಿಲ್ಲೆ ಯಲ್ಲಿ 1,07,245 ಅರ್ಜಿ ಸ್ವೀಕೃತವಾಗಿದ್ದು, 45,884 ಮಂಜೂರಾಗಿವೆ. 51,209 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿವೆ. ಉಡುಪಿಯಲ್ಲಿ 33,749 ಅರ್ಜಿಗಳು ಸ್ವೀಕೃತವಾಗಿದ್ದರೆ 6,865 ಮಂಜೂರಾಗಿದ್ದು 22,798 ತಿರಸ್ಕೃತಗೊಂಡಿವೆ.

ನಗರ ವ್ಯಾಪ್ತಿಗಿರುವ ನಿಯಮ 94ಸಿಸಿ ಅಡಿಯಲ್ಲಿ ದ.ಕ. ಜಿಲ್ಲೆಯಲ್ಲಿ 40,245 ಅರ್ಜಿಗಳು ಸ್ವೀಕೃತವಾಗಿದ್ದು, 23,702 ಮಂಜೂರಾಗಿವೆ, 11,823 ತಿರಸ್ಕೃತವಾಗಿವೆ. ಉಡುಪಿಯಲ್ಲೂ ಇದೇ ಸ್ಥಿತಿ – 8,948 ಸ್ವೀಕೃತ, 1,942 ಮಂಜೂರು, 5,930 ತಿರಸ್ಕೃತ.

ತಿರಸ್ಕೃತವಾಗಲು ಕಾರಣ?
ಗ್ರಾಮೀಣ ಭಾಗದಲ್ಲಿ “94 ಸಿ’ ಜಾರಿಗೆ ಬಂದ ಸಂದರ್ಭ ನಗರ ಪ್ರದೇಶದ ಜನರೂ ಅರ್ಜಿ ಹಾಕಿದ್ದಾರೆ. ಬಳಿಕ ನಗರ ವ್ಯಾಪ್ತಿಗೆ “94ಸಿಸಿ’ ಬಂದಾಗ ಅವರೇ ಮತ್ತೆ ಸಲ್ಲಿಸಿದ್ದಾರೆ. ಹೀಗಾಗಿ ಒಟ್ಟು ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಅವುಗಳನ್ನು ಪರಾಮರ್ಶಿಸಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಜತೆಗೆ 94ಸಿ,
94ಸಿಸಿಗೆ 2012, 2014, 2015ರಲ್ಲಿ ತಿದ್ದುಪಡಿ ಆದ ಸಂದರ್ಭದಲ್ಲಿಯೂ ಒಂದೇ ಕುಟಂಬದವರು ಮತ್ತೆ ಮತ್ತೆ ಅರ್ಜಿ ನೀಡಿದ್ದಿದೆ ಒಬ್ಬನೇ ನಾಲ್ಕು ಅರ್ಜಿ ನೀಡಿದ ಉದಾಹರಣೆಯೂ ಇದೆ. ಮನೆಯ ಸದಸ್ಯರೆಲ್ಲ ಒಂದೊಂದು ಅರ್ಜಿ ನೀಡಿದ ಪರಿಣಾಮ ಅರ್ಜಿಗಳ ಸಂಖ್ಯೆ ಅಧಿಕವಾಗಿವೆ. ಹಕ್ಕುಪತ್ರ ಮಂಜೂರಾದರೂ ಕೈಗೆ ಸಿಗದ ಕಾರಣ ಮತ್ತೆ ಅರ್ಜಿ ನೀಡಬೇಕೇನೋ ಎಂದು ಭಾವಿಸಿ ನೀಡಿದವರೂ ಇದ್ದಾರೆ.

ಮನೆ ಇದ್ದವರಿಂದಲೂ ಅರ್ಜಿ!
ಈ ಮಧ್ಯೆ ಸ್ವಂತ ಮನೆ ಇದ್ದವರೂ 94 ಸಿ, 94ಸಿಸಿ ಅಡಿಯಲ್ಲಿ ಅರ್ಜಿ ನೀಡಿದ ಹಲವು ಪ್ರಕರಣಗಳಿವೆ. ಅರಣ್ಯ ಇಲಾಖೆಯ ಜಾಗದಲ್ಲಿ ವಾಸವಾಗಿದ್ದವರೂ ಅರ್ಜಿ ಹಾಕಿದ್ದಾರೆ. ಖಾಸಗಿ ಭೂಮಿ ಮತ್ತು ಕುಮ್ಕಿ ಜಾಗದಲ್ಲಿ ವಾಸವಾಗಿದ್ದು, ಸಲ್ಲಿಸಿದವರ ಅರ್ಜಿಗಳೂ ತಿರಸ್ಕೃತವಾಗಿವೆ.

Advertisement

ಲೋಕಸಭೆ ಚುನಾವಣೆ ಘೋಷಣೆಯಾಗುವವರೆಗೂ 94 ಸಿ, 94ಸಿಸಿ ಅಡಿಯಲ್ಲಿ ಅರ್ಜಿ ನೀಡಲುಅವಕಾಶವಿತ್ತು. ಆದರೆ ಸದ್ಯ ಸ್ಥಗಿತವಾಗಿದೆ. ಬಂದಿರುವ ಅರ್ಜಿಗಳನ್ನು 3 ತಿಂಗಳ ಒಳಗೆ ವಿಲೇವಾರಿ ನಡೆಸುವಂತೆ ಕಂದಾಯ ಸಚಿವರು ಇತ್ತೀಚೆಗೆ ಎಲ್ಲ ಪಿಡಿಒ-ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಿದ್ದರು.

ಬೆಳ್ತಂಗಡಿ, ಕಾರ್ಕಳದಲ್ಲಿ ಹೆಚ್ಚು
94ಸಿ ಅಡಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 13,269 ಅರ್ಜಿಗಳು ತಿರಸ್ಕೃತವಾಗಿದ್ದು, ಇದು ದ.ಕ. ಜಿಲ್ಲೆಯಲ್ಲಿಯೇ ಅಧಿಕ. ಅನಂತರದ ಸ್ಥಾನದಲ್ಲಿ ಬಂಟ್ವಾಳ (10,699)ಇದೆ. ವಿಶೇಷವೆಂದರೆ ಮೂಲ್ಕಿ ತಾಲೂಕಿನಲ್ಲಿ ಸಲ್ಲಿಕೆಯಾದ ಎಲ್ಲ 1,194 ಅರ್ಜಿಗಳೂ ತಿರಸ್ಕೃತವಾಗಿವೆ. 94ಸಿಸಿ ಅಡಿಯಲ್ಲಿ ಮಂಗಳೂರಿನಲ್ಲಿ 5,680 ಅರ್ಜಿಗಳು ತಿರಸ್ಕೃತವಾಗಿದ್ದು, ಇದು ಜಿಲ್ಲೆಯಲ್ಲೇ ಅಧಿಕ. ಆ ಬಳಿಕದ ಸ್ಥಾನದಲ್ಲಿ ಮೂಡುಬಿದಿರೆ (2,183) ಇದೆ. ಉಡುಪಿ ಜಿಲ್ಲೆಯಲ್ಲಿ 94ಸಿ ಅಡಿಯಲ್ಲಿ ಕಾರ್ಕಳ ತಾಲೂಕಿನಲ್ಲಿ 7,172, ಕುಂದಾಪುರ 5,607 ಅರ್ಜಿ ತಿರಸ್ಕೃತಗೊಂಡಿವೆ. 94ಸಿಸಿ ಅಡಿ ಕಾರ್ಕಳ ತಾ|ನಲ್ಲಿ 2,632 ಅರ್ಜಿ ತಿರಸ್ಕೃತವಾಗಿದ್ದರೆ ಆ ಬಳಿಕದ ಸ್ಥಾನದಲ್ಲಿ ಉಡುಪಿ (1,957) ಇದೆ.

94ಸಿ, 94ಸಿಸಿ ಅಂದರೇನು?
ಗ್ರಾಮೀಣ ಪ್ರದೇಶಗಳಲ್ಲಿ 2012ಕ್ಕೂ ಮುನ್ನ ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸವಾಗಿರುವವರಿಗೆ ಹಕ್ಕುಪತ್ರ ನೀಡುವ ಯೋಜನೆ. ಇದಕ್ಕೆ “94ಸಿ’ ಅಡಿಯಲ್ಲಿ ಅರ್ಜಿ ನೀಡಲಾಗುತ್ತದೆ. ನಗರ ಪ್ರದೇಶದ (ನಗರಸಭೆ, ಪುರಸಭೆ, ಪ.ಪಂ., ಮುಡಾ, ಮಹಾನಗರ ಪಾಲಿಕೆ) ಸರಕಾರಿ ಭೂಮಿಯಲ್ಲಿ ವಾಸವಾ
ಗಿರುವವರಿಗೆ ಹಕ್ಕುಪತ್ರ ನೀಡುವ ಯೋಜನೆಗೆ “94 ಸಿಸಿ’ ಅಡಿಯಲ್ಲಿ ಅರ್ಜಿ ನೀಡಲಾಗುತ್ತದೆ.

ಅನರ್ಹ ಅರ್ಜಿಗಳು ತಿರಸ್ಕೃತ
ಕುಟುಂಬ ಸದಸ್ಯರಿಗೆ ಮನೆ ಅಥವಾ ಸೈಟ್‌ ಇದ್ದರೆ, ಆದಾಯ ತೆರಿಗೆ ಪಾವತಿಸುವವರಾಗಿದ್ದರೆ, ಸರಕಾರಿ ಭೂಮಿಯಲ್ಲಿ ಅನಧಿಕೃತ ಕಟ್ಟಡ ಇಲ್ಲದವರಾಗಿದ್ದರೆ, ಕುಮ್ಕಿ ಭೂಮಿ ಅಥವಾ ಸಿಆರ್‌ಝಡ್‌ ವ್ಯಾಪ್ತಿಯಲ್ಲಿದ್ದರೆ 94 ಸಿ ಅಥವಾ 94ಸಿಸಿ ಅಡಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಅಂತಹ ಅರ್ಜಿಗಳು ಹೆಚ್ಚಾಗಿ ಬಂದಿರುವುದರಿಂದ ಸ್ಥೂಲವಾಗಿ ಪರಾಮರ್ಶಿಸಿ, ಅನರ್ಹವಾದವನ್ನು ತಿರಸ್ಕರಿಸಲಾಗಿದೆ.
ಶಶಿಕಾಂತ ಸೆಂಥಿಲ್‌, ದ.ಕ. ಜಿಲ್ಲಾಧಿಕಾರಿ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next