ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಹೆಚ್ಚಿನ ಬಲ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕನ್ನಡ ಭವನದ ಅಂತರಂಗದಲ್ಲಿ ವಿವಿಧ ಟ್ರಸ್ಟ್ ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಮಾತನಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ 24 ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿವರ್ಷ ಈ ಟ್ರಸ್ಟ್ ಗಳ ಕಾರ್ಯ ಚಟುವಟಿಕೆಗಾಗಿ ಅನುದಾನ ಒದಗಿಸಲಾಗುತ್ತಿದೆ. ಈ ಟ್ರಸ್ಟ್ ಗಳು ನಡೆಸುವ ಕಾರ್ಯ ಚಟುವಟಿಕೆಗಳು ಮತ್ತು ಅವುಗಳ ಕುಂದು ಕೊರತೆ ಹಾಗೂ ಅವುಗಳ ಪರಿಹಾರಗಳನ್ನು ಕುರಿತಂತೆ ಈ ಸಮಾಲೋಚನಾ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಿತು. ಪ್ರತಿಯೊಂದು ಟ್ರಸ್ಟ್ ಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಜಿಲ್ಲಾ ಪ್ರವಾಸ ಮಾಡುವ ವೇಳೆ ಆಯಾ ಜಿಲ್ಲೆಗಳಲ್ಲಿರುವ ಟ್ರಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಎಲ್ಲಾ ಟ್ರಸ್ಟ್ ಗಳ ಮನವಿಗಳನ್ನು ತಾವು ಅತ್ಯಂತ ಸಕಾರಾತ್ಮಕ ದೃಷ್ಟಿಯಿಂದಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಟ್ರಸ್ಟ್ ಗಳ ಕಾರ್ಯನಿರ್ವಹಣೆಗೆ ಅಗತ್ಯವಾದ ಅನುದಾನ ಹೆಚ್ಚಿಸಲು ತಾವು ಮುಂಬರುವ ಆಯವ್ಯಯದಲ್ಲಿ ಹೆಚ್ಚಿನ ಅನುದಾನವನ್ನು ಕೊಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.