Advertisement

ದಿಢೀರ್‌ ಭೇಟಿಗಳಲ್ಲಿ ಆನಂದ ಹೆಚ್ಚು ! 

12:31 PM Dec 01, 2017 | Team Udayavani |

ನಿರೀಕ್ಷಿತ ಭೇಟಿಗಿಂತಲೂ ದಿಢೀರ್‌ ಆಗಿ ಆಗುವ ಭೇಟಿ ಹೆಚ್ಚಿನ ಆನಂದವನ್ನು ನೀಡುತ್ತದೆ. ನಂಗೆ ತುಂಬಾ ಇಷ್ಟವಾದವರು ನಾನು ಕ್ಲಾಸ್‌ನಲ್ಲಿ ಕುಳಿತಿದ್ದಾಗ ದಿಢೀರ್‌  ಆಗಿ ಹೊರಗಡೆ ಬಂದು ನಿಂತರೆ ನನ್ನ ಪ್ರತಿಕ್ರಿಯೆ ಹೇಗಿರಬಹುದು? ನನಗೆ ಕ್ಲಾಸ್‌ ಬೇಸರವಾದಾಗಲ್ಲೆಲ್ಲ ಇದೇ ವಿಚಾರದಲ್ಲಿ ಮುಳುಗಿರುತ್ತೇನೆ. ಈ ವಿಚಾರವೇ ನಂಗೇ ತುಂಬಾ ಮುದ ನೀಡುತ್ತದೆ. 

Advertisement

ನನ್ನ ಆತ್ಮೀಯ ಗೆಳೆಯ-ಗೆಳತಿಯರು, ಅಮ್ಮ, ಅಪ್ಪಾ , ಅಣ್ಣ ಬಂದ ಹಾಗೆ ಕಲ್ಪನೆ ಮಾಡುತ್ತ ಆಗ ನನ್ನ ಪ್ರತಿಕ್ರಿಯೆಯ ಕಲ್ಪನೆಯಿಂದ ಆನಂದಿಸುತ್ತೇನೆ. ನನಗೆ ಇದು ತುಂಬಾನೇ ಸಂತಸ ನೀಡುತ್ತಿತ್ತು. ಹೀಗೆ ಕ್ಲಾಸ್‌ನಲ್ಲಿ ನಕ್ಕು ಬೈಗುಳಕ್ಕೆ ಹಲವು ಬಾರಿ ಪಾತ್ರನಾಗಿದ್ದೇನೆ. ನಾನು ಆತ್ಮೀಯರ ಬರುವಿಕೆಗಾಗಿ ಕಾತರದಿಂದ ಕಾಯುತ್ತಿರುವಂತೆ ನನ್ನ ಗೆಳತಿ ಶಿಲ್ಪಾ ಕೂಡಾ ನನ್ನ ಆಗಮನವನ್ನು ನಿರೀಕ್ಷಿಸುತ್ತಿರಬಹುದಲ್ಲವೆ? ನಾನು ಹೀಗೆ ದಿಢೀರ್‌ ಭೇಟಿ ನೀಡಿದರೆ ಅವಳ ಪ್ರತಿಕ್ರಿಯೆ ಹೇಗಿರಬಹುದು? ಎಂಬ ಆಲೋಚನೆಗಳೇ ನಾನು ಶಿಲ್ಪಾಳನ್ನು  ದಿಢೀರ್‌ ಭೇಟಿ ಆಗಲೇಬೇಕು ಎಂಬ ನಿರ್ಧಾರಕ್ಕೆ ಕಾರಣವಾಗಿ, ಅವಳ ಭೇಟಿಗೆ ಎಂದು ಅವಳಿದ್ದಲ್ಲಿಗೆ ಪಯಣ ಬೆಳೆಸಿದೆ.

ಬೆಂಗಳೂರಿನಲ್ಲಿ  ಶಿಲ್ಪಾ ಎಂಬಿಎ ಮಾಡುತ್ತಿದ್ದಾಳೆ ಎಂಬ ವಿಷಯ ತಿಳಿಯಿತು. ಕಾಲೇಜಿನ ವಿಳಾಸ ಅವಳ ಅಪ್ಪನ ಸಹಾಯದಿಂದ ಪಡೆದೆ. ಕಷ್ಟಪಟ್ಟು ವಿಳಾಸ ಹುಡುಕಿ ಅವಳ ಕಾಲೇಜು ತೆರಳಿ ಅಲ್ಲಿ ಸಿಕ್ಕವರನ್ನೆಲ್ಲ ಕೇಳಿ ಅವಳ ವಿಭಾಗವನ್ನು  ಪತ್ತೆಹಚ್ಚಿದೆ. ಕ್ಲಾಸ್‌ನಲ್ಲಿ ಆಗ ಯಾವುದು ಪಾಠ ನಡೆಯುತ್ತಿತ್ತು ! ನಾನು ಬಾಗಿಲನ್ನು ಮೆಲುವಾಗಿ ತಟ್ಟಿದ್ದಾಗ ಸರ್‌ ಬಂದು ಬಾಗಿಲು ತೆರೆದರು. ಕ್ಲಾಸಿನಲ್ಲಿದ್ದ ಮಕ್ಕಳ ದೃಷ್ಟಿ ಎಲ್ಲ ನನ್ನ ಮೇಲೆ ಇತ್ತು! ಯಾರು ನಾನು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು ನನಗೂ ಭಾಸವಾಯಿತು. ಆದರೂ ನನ್ನ ಕಣ್ಣು ಮಾತ್ರ ಶಿಲ್ಪಾಳನ್ನೇ ಹುಡುಕುತ್ತಿತ್ತು. ಅಷ್ಟರಲ್ಲಿಯೇ ಅವಳು ಅಳುತ್ತ ಬಂದು ನನ್ನನ್ನ ಬಿಗಿದಪ್ಪಿದಳು. ಎರಡು ನಿಮಿಷದ ನಂತರ ಇವಳು ನನ್ನ ಫ್ರೆಂಡು ಅಂತ ಕಣ್ಣೀರಿಡುತ್ತ¤ ನಗುಮುಖದಿಂದ ಪರಿಚಯಿಸಿದಳು. ಆ ಎರಡು ನಿಮಿಷದ ಭಾವ ಶಬ್ದಗಳಿಗೆ ನಿಲುಕದ್ದು. ನಮ್ಮಿಬ್ಬರ ಕಣ್ಣಲ್ಲಿ ಕಣ್ಣೀರು ಜಲಧಾರೆಯಂತೆ ಹರಿಯುತ್ತಿತ್ತು. ಸರ್‌ ಕೂಡ ನಮ್ಮನ್ನ ವಿಸ್ಮಯದಿಂದ ನೋಡುತ್ತಲೇ ನಿಂತಿದ್ದರು. ಇಬ್ಬರು ಕ್ಲಾಸ್‌ನಿಂದ ಹೊರಬಂದೆವು. ಸರ್‌ ನನಗೆ ಬೈಯ್ದುಬಿಡುತ್ತಾರೆಂದು ಕೊಂಡೆ. ಆದರೆ ಹಾಗಾಗಲಿಲ್ಲ.

ಶುಭಶ್ರೀ ಗಾಂವ್ಕರ್‌ 

Advertisement

Udayavani is now on Telegram. Click here to join our channel and stay updated with the latest news.

Next