ಹೊಸದಿಲ್ಲಿ: ಈರುಳ್ಳಿ ದೇಶಾದ್ಯಂತ ಗ್ರಾಹಕರ ಕಣ್ಣೀರಿಗೆ ಕಾರಣವಾಗಿರುವಂತೆಯೇ, ಬೆಲೆ ಇಳಿಕೆಯ ಕ್ರಮವಾಗಿ ವಿದೇಶದಿಂದ ಮತ್ತಷ್ಟು ಈರುಳ್ಳಿ ಆಮದಿಗೆ ಕೇಂದ್ರ ಸರಕಾರ ಮುಂದಾಗಿದೆ. ಈಗಾಗಲೇ ಈಜಿಪ್ಟ್ ನಿಂದ ಈರುಳ್ಳಿ ಭಾರತಕ್ಕೆ ಆಮದಾಗುತ್ತಿದ್ದು, ಟರ್ಕಿಯಿಂದಲೂ ಹೆಚ್ಚುವರಿಯಾಗಿ ಆಮದಿಗೆ ನಿರ್ಧರಿಸಲಾಗಿದೆ.
ಟರ್ಕಿಯಿಂದ 11000 ಮೆಟ್ರಿಕ್ ಟನ್ ಮತ್ತು ಈಜಿಪ್ಟ್ ನಿಂದ 6090 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಲಾಗುವುದು ಎಂದು ಸರಕಾರದ ಮೂಲಗಳು ಹೇಳಿವೆ. ಡಿಸೆಂಬರ್ ಮಧ್ಯಭಾಗದಿಂದ ಈ ಈರುಳ್ಳಿ ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.
ಈರುಳ್ಳಿ ದರ ಹೆಚ್ಚಳ ಹಿನ್ನೆಲೆಯಲ್ಲಿ ನ.20ರಂದು 1.2 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಆಮದಿಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತ್ತು. ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ, ದಿಲ್ಲಿ ಸರಕಾರಗಳು ಕೇಂದ್ರ ಸರಕಾರಕ್ಕೆ ಪತ್ರ ಬರೆದು ಈರುಳ್ಳಿ ಬೆಲೆ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದವು.
ಇತ್ತ ನ.30ರ ಹೊತ್ತಿಗೆ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಸರಾಸರಿ 75 ರೂ. ಆಗಿತ್ತು. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಕೆ.ಜಿ.ಗೆ 120 ರೂ.ವರೆಗೆ ತಲುಪಿದೆ. ದಿಲ್ಲಿ, ಉತ್ತರ ಪ್ರದೇಶಗಳಲ್ಲಿ 90-110 ರೂ. ದರಗಳಲ್ಲಿ ಮಾರಾಟವಾಗಿದೆ. ಕೇಂದ್ರ ಆಹಾರ ಸಚಿವಾಲಯದ ಮಾಹಿತಿ ಪ್ರಕಾರ ದಿಲ್ಲಿ ಮಾರುಕಟ್ಟೆಯಲ್ಲಿ 76 ರೂ, ಮುಂಬಯಿಯಲ್ಲಿ 82 ರೂ., ಕೋಲ್ಕತಾದಲ್ಲಿ 90 ರೂ. ಚೆನ್ನೈಯಲ್ಲಿ 80 ರೂ. ದರ ದಾಖಲಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅತಿ ಕಡಿಮೆ ಅಂದರೆ ಕೆ.ಜಿ.ಗೆ 42 ರೂ. ಇತ್ತು. ಈ ಬಾರಿ ಮಾನ್ಸೂನ್ ವಿಳಂಬವಾದ್ದರಿಂದ ಈರುಳ್ಳಿ ಬೆಳೆ ನಿಧಾನವಾಗಿದ್ದು ಜತೆಗೆ ಕೆಲವೆಡೆ ಅತಿವೃಷ್ಟಿಯಿಂದ ಬೆಳೆಗೆ ಹಾನಿಯಾಗಿದೆ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.