ಬಾಗಲಕೋಟೆ: ನಮ್ಮದು ರಾಷ್ಟ್ರೀಯ ಪಕ್ಷ. ನಿಂತ ನೀರಲ್ಲ. ಹರಿಯುವ ನೀರು. ಹರಿಯುವ ನೀರಿನಲ್ಲಿ ಹೊಸ ನೀರು ಸೇರುವುದು ಸ್ವಾಭಾವಿಕ. ಶೀಘ್ರವೇ ಇನ್ನೂ ಹಲವು ಶಾಸಕರು ಬಿಜೆಪಿಗೆ ಸೇರಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನ್ನ ಪುತ್ರನ ಜತೆಗೆ ಜೆಡಿಎಸ್-ಕಾಂಗ್ರೆಸ್‌ನ ಕೆಲವು ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದರ ಕುರಿತು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾತನಾಡುತ್ತೇನೆ ಎಂದರು.
ಸಚಿವ ಸ್ಥಾನಕ್ಕಾಗಿ ವಲಸೆ ಮತ್ತು ಮೂಲ ಬಿಜೆಪಿಗರ ಮಧ್ಯೆ ಪೈಪೋಟಿ, ತಿಕ್ಕಾಟ ನಡೆಯುತ್ತಿದೆ ಎಂಬುದು ಮಾಧ್ಯಮಗಳ ಸೃಷ್ಟಿ. ನಮ್ಮಲ್ಲಿ ವಲಸಿಗರು, ಬಿಜೆಪಿಗರು ಎಲ್ಲರೂ ಒಗ್ಗಟ್ಟಾಗಿದ್ದೇವೆ. ಎಲ್ಲರೂ ಸೇರಿ ಹಾಲು-ಜೇನಿನಂತೆ ಕೆಲಸ ಮಾಡುತ್ತೇವೆ. ವಲಸೆ ಬಂದವರಿಗೆಲ್ಲ ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಸಚಿವ ಶ್ರೀರಾಮುಲು ಮುನಿಸಿಕೊಂಡಿಲ್ಲ. ಅವರು ಅನುಮತಿ ಪಡೆದೇ ಸಚಿವ ಸಂಪುಟ ಸಭೆಗೆ ಗೈರಾಗಿದ್ದು ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ದೇಶದ ಕೆಲವು ರಾಜ್ಯಗಳಲ್ಲಿ ಈಗ ಚುನಾವಣೆ ನಡೆಯುತ್ತಿದೆ. ಅನಂತರ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದರು.
ರಾಹುಲ್‌ಗೆ ಮಾತಿನ ಹಿಡಿತ ಇಲ್ಲ
ರಾಹುಲ್ ಗಾಂಧಿಗೆ ಜ್ಞಾನದ ಕೊರತೆ ಇದೆ. ಅವರ ಹೇಳಿಕೆಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಲೋಕಸಭೆ ಸದಸ್ಯರಾಗಿ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದರ ಬಗ್ಗೆ ಅವರಿಗೆ ಪರಿಜ್ಞಾನ ಇಲ್ಲ. ಯಾವುದೇ ವಿಷಯದ ಬಗ್ಗೆ ಮಾತನಾಡುವ ವೇಳೆ ನಾಲಗೆ ಮೇಲೆ ಹಿಡಿತ ಇರಬೇಕು ಎಂದರು.