Advertisement

11 ಸಾವಿರ ಕೋಟಿ ಬ್ಯಾಂಕಿಂಗ್‌ ವಂಚನೆ

06:00 AM Feb 15, 2018 | |

ನವದೆಹಲಿ: ಬೆಟ್ಟದಷ್ಟು “ವಸೂಲಾಗದ ಸಾಲ’ ಸಮಸ್ಯೆಯಿಂದ ನರಳುತ್ತಿರುವ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಗೆ ಬಹುದೊಡ್ಡ ವಂಚನೆಯ ಹಗರಣದ ಪೆಟ್ಟು ಬಿದ್ದಿದೆ.

Advertisement

ದೇಶದ ಎರಡನೇ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕು ಎಂದೇ ಹೆಸರುಗಳಿಸಿಕೊಂಡಿರುವ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಮುಂಬೈ ಬ್ರಾಂಚೊಂದರಲ್ಲೇ 11,400 ಕೋಟಿ ರೂ. ಮೌಲ್ಯದ ಹಗರಣ ಪತ್ತೆಯಾಗಿದೆ. 

ಬ್ಯಾಂಕಿನೊಳಗಿನವರೇ “ತಮಗೆ ಬೇಕಾದ’ ದೇಶದೊಳಗಿನ ಮತ್ತು ದೇಶದ ಹೊರಗಿನವರಿಗೆ ಅನುಕೂಲ ಮಾಡಿಕೊಟ್ಟಿರುವ “ವಂಚನೆಯ ಮತ್ತು ಅನಧೀಕೃತ’ ವಹಿವಾಟುಗಳು ಬೆಳಕಿಗೆ ಬಂದಿವೆ. ಸ್ವತಃ ಬ್ಯಾಂಕೇ ಈ ಬಗ್ಗೆ ಷೇರುಪೇಟೆಯಲ್ಲಿ “ಮೋಸದ ವರದಿ’ ಮಾಡಿದೆ.

ಈ ಹಗರಣ ಹೊರಗೆ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬ್ಯಾಂಕ್‌, 10 ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಇಡೀ ಹಗರಣದ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಿದೆ. ಅಲ್ಲದೆ, ನೀರವ್‌ ಮೋದಿ ಮತ್ತು ಇತರೆ ವ್ಯಕ್ತಿಗಳ ವಿರುದ್ಧ ಸಿಬಿಐಗೆ ಎರಡು ದೂರುಗಳನ್ನೂ ನೀಡಲಾಗಿದೆ. ವಿಚಿತ್ರವೆಂದರೆ ಕಳೆದ ವಾರವಷ್ಟೇ ಇದೇ ಬ್ಯಾಂಕಿನ, ಇದೇ ಬ್ರಾಂಚಿನ ಅನುಮಾನಾಸ್ಪದ ಅಥವಾ ವಂಚನೆಯ ವಹಿವಾಟು ನಡೆಸಿದ್ದ ಆರೋಪಕ್ಕೆ ಗುರಿಯಾಗಿರುವ ಶತಕೋಟ್ಯಾಧಿಪತಿ ನೀರವ್‌ ಮೋದಿಗೂ ಈ ಹಗರಣಕ್ಕೂ ಸಂಬಂಧವಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಈ ಹಗರಣದ ಜತೆಯಲ್ಲೇ 11,400 ಕೋಟಿ ವಂಚನೆಯ ಪ್ರಕರಣದ ಬಗ್ಗೆಯೂ ತನಿಖೆ ನಡೆಯುವ ಸಂಭವವಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮೋಸದ ಹಗರಣದ ಪರಿಣಾಮದಿಂದಾಗಿ ಬುಧವಾರ ಷೇರುಪೇಟೆಯಲ್ಲಿ ಪಿಎನ್‌ಬಿ ಷೇರುಗಳು ಬಹುದೊಡ್ಡ ಹೊಡೆತ ತಿಂದಿವೆ. ಶೇ.10 ರಷ್ಟು ಕುಸಿತವಾಗಿದ್ದು, ಒಂದೇ ದಿನ 3000 ಕೋಟಿ ರೂ.ನಷ್ಟು ನಷ್ಟವಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಇತರೆ ಬ್ಯಾಂಕುಗಳ ಮೇಲೆ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಜತೆಗೆ, ಈ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ತಕ್ಷಣದಲ್ಲೇ ಸಂಪೂರ್ಣ ಮಾಹಿತಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದೂ ರಾಜೀವ್‌ ಕುಮಾರ್‌ ಹೇಳಿದ್ದಾರೆ.

Advertisement

ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ವಿವಾದ
ಹಗರಣದ ನೀರವ್‌ ಮೋದಿಯಿಂದ ಶುರುವಾಗಿದೆ ಎಂದುಕೊಂಡರೂ, ಇದರ ಜತೆಯಲ್ಲೇ ಮುಂಬೈನ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಬ್ರಾಂಚ್‌ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ, ಅಲಹಾಬಾದ್‌ ಬ್ಯಾಂಕ್‌ ಮತ್ತು ಆ್ಯಕ್ಸಿಸ್‌ ಬ್ಯಾಂಕಿಗೆ ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಕೊಟ್ಟು ವಿದೇಶದಲ್ಲಿ ಕೆಲವು ಆಮದುದಾರರಿಗೆ ಮುಂಗಡವಾಗಿ ಅಲ್ಪಾವಧಿ ಸಾಲ(ಬೈಯರ್‌ ಕ್ರೆಡಿಟ್‌) ನೀಡಲು ಹೇಳಿತ್ತು. ಈ ಬಗ್ಗೆ ಪಿಎನ್‌ಬಿ ಏನನ್ನೂ ಹೇಳದಿದ್ದರೂ, ಈ ಮೂರು ಬ್ಯಾಂಕುಗಳೇ ಎಲ್‌ಒಯುನಡಿಯಲ್ಲಿ ಸಾಲ ನೀಡಿದ್ದಾಗಿ ಹೇಳಿಕೊಂಡಿವೆ. ಹೀಗಾಗಿ ವಿದೇಶದಲ್ಲಿರುವ ಬ್ರಾಂಚ್‌ಗಳ ಮೇಲೂ ನಿಗಾ ಇಡುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.

ಯಾರ ಮೇಲೆ ಅನುಮಾನ?
ಇಡೀ ಹಗರಣದಲ್ಲಿ ಪ್ರಮುಖವಾಗಿ ಕೆಲವೊಂದು ಆಭರಣ ಮಳಿಗೆಗಳ ಹೆಸರೇ ಕೇಳಿಬರುತ್ತಿದೆ. ಗೀತಾಂಜಲಿ, ಗಿನ್ನಿ ಮತ್ತು ನಕ್ಷತ್ರ ಜ್ಯುವೆಲ್ಲರ್‌ಗಳೇ ಇದರಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಈಗಾಗಲೇ ಸಿಬಿಐ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳ ಗಮನಕ್ಕೂ ತರಲಾಗಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಈ ಆಭರಣ ಅಂಗಡಿಗಳಿಂದ ಪ್ರತಿಕ್ರಿಯೆಗೆ ಪ್ರಯತ್ನಿಸಲಾಯಿತಾದರೂ ಅತ್ತ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲವೆಂದು ಪಿಟಿಐ ವರದಿ ಮಾಡಿದೆ.

ವಂಚನೆಯ ಆಚೀಚೆ…
1. ಯಾರು ವಂಚಕರು?

ಹಗರಣವನ್ನು ಬಹಿರಂಗ ಮಾಡಿರುವುದು ಸ್ವತಃ ಪಿಎನ್‌ಬಿ ಬ್ಯಾಂಕು. ವಂಚಕರು ಯಾರು ಎಂದು ಹೇಳದೇ ಹೋದರು, ಬ್ಯಾಂಕಿನ ಒಳಗಿನವರೇ “ಆಯ್ದ ಖಾತಾದಾರರಿಗೆ, ಅವರ ಅನುಕೂಲಕ್ಕೆ ತಕ್ಕ ಹಾಗೆ’ ವಹಿವಾಟು ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ವಿದೇಶದಲ್ಲಿರುವ ಗ್ರಾಹಕರಿಗೂ ಮುಂಚಿತವಾಗಿಯೇ ಹಣ ಒದಗಿಸಿದ್ದಾರೆ.

2.ಯಾವ ಕ್ರಮ?
ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿಯೇ ಬ್ಯಾಂಕು ಈ ಬಗ್ಗೆ ವರದಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ಮತ್ತು ಇತರೆ ತನಿಖಾ ತಂಡಗಳಿಗೂ ಮಾಹಿತಿ ನೀಡಿದೆ.

3. ವಂಚನೆಯ ಮೂಲ ಯಾವುದು?
ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ, ನೀರವ್‌ ಮೋದಿಯೇ ಈ ಹಗರಣದ ಹಿಂದೆ ಇರಬಹುದು ಎಂಬ ಅನುಮಾನಗಳಿವೆ. ಕಳೆದ ವಾರವಷ್ಟೇ ಈತನ ವಿರುದ್ಧ 282 ಕೋಟಿ ರೂ.ಗಳ ವಂಚನೆ ಸಂಬಂಧ ಎಫ್ಐಆರ್‌ ದಾಖಲಾಗಿತ್ತು.

4. ಅಡ್ಡ ಪರಿಣಾಮಗಳೇನಾದರೂ ಇವೆಯೇ?
ಬುಧವಾರವೇ ಪಿಎನ್‌ಬಿ ಷೇರುಗಳ ಮೌಲ್ಯ ಶೇ.8 ರಷ್ಟು ಕುಸಿತ ಕಂಡಿದೆ. ನಿಫ್ಟಿಯಲ್ಲೂ ಇದೇ ಒತ್ತಡವಿದೆ.

5. ಬೈಯರ್‌ ಕ್ರೆಡಿಟ್‌ ಎಂದರೇನು?
ವಿದೇಶಗಳಲ್ಲಿನ ಬ್ಯಾಂಕುಗಳು ಮತ್ತು ಇತರೆ ಆರ್ಥಿಕ ಸಂಸ್ಥೆಗಳು ಆಮದುದಾರರಿಗೆ ಅವರು ಆಮದು ಮಾಡಿಕೊಳ್ಳುವ ವಸ್ತುಗಳಿಗಾಗಿ ಅಲ್ಪಾವಧಿ ಸಾಲ ನೀಡುತ್ತವೆ. ಇದಕ್ಕೆ ಆಮದುದಾರರ ಬ್ಯಾಂಕುಗಳು ಒಂದು ಲೆಟರ್ಸ್‌ ಆಫ್ ಅಂಡರ್‌ಸ್ಟಾಂಡಿಂಗ್‌ ಕೊಟ್ಟರೆ ಸಾಕು. ಪಿಎನ್‌ಬಿ ನೀಡಿದ ಈ ಎಲ್‌ಒಯುನಡಿಯಲ್ಲೇ ಮೂರು ಬ್ಯಾಂಕುಗಳು ಸಾಲ ನೀಡಿವೆ.

6. ನೀರವ್‌ ಮೋದಿ ಯಾರು?
ಇವರು ಪ್ರಸಿದ್ಧ ವೈಭೋವಪೇತ ಆಭರಣಗಳ ವಿನ್ಯಾಸಗಾರರಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಪ್ರಸಿದ್ಧಿಯಾಗಿದ್ದಾರೆ. 2017ರ ಫೋರ್ಬ್ಸ್ ಪಟ್ಟಿನಂತೆ ಭಾರತದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಇವರದ್ದು 57ನೇ ಸ್ಥಾನ. ದೇಶ, ವಿದೇಶಗಳಲ್ಲೂ ನೀರವ್‌ ಮೋದಿಯವರದ್ದು ಡೈಮಂಡ್‌ ಆಭರಣಗಳ ರಿಟೈಲ್‌ ಸ್ಟೋರ್‌ಗಳಿವೆ. ಅಂದಹಾಗೆ ಇವರ ಕಂಪನಿಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಬ್ರಾಂಡ್‌ ಅಂಬಾಸಿಡರ್‌.

ಪ್ರಕರಣದ ಹಿನ್ನೆಲೆ
ಈ ಹಗರಣದ ರೂಪ ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇತ್ತೀಚೆಗೆ ಹಲವು ಪ್ರಕರಣಗಳಲ್ಲಿ ಪಿಎನ್‌ಬಿ ಸಿಲುಕಿಕೊಂಡಿದೆ. ಕಳೆದ ವಾರ ವಜ್ರಾಭರಣ ಉದ್ಯಮಿ ಹಾಗೂ ದೇಶದ ಶ್ರೀಮಂತರ ಪಟ್ಟಿಯಲ್ಲಿ ಒಬ್ಬರಾದ ನೀರವ್‌ ಮೋದಿ 282 ಕೋಟಿ ರೂ. ವಂಚನೆ ಮಾಡಿದ್ದ ಬಗ್ಗೆ ಎಫ್ಐಆರ್‌ ದಾಖಲಾಗಿತ್ತು. ಫೆಬ್ರವರಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಸ್ಥಳಗಳಲ್ಲಿ ಸಿಬಿಐ ಶೋಧವನ್ನೂ ನಡೆಸಿತ್ತು. ಮೋದಿ ಮನೆ ಹಾಗೂ ಡೈಮಂಡ್‌ ಆರ್‌ ಅಸ್‌, ಆತನ ಸೋದರ ನಿಶಾಲ್‌, ಪತ್ನಿ ಆಮಿ ಮತ್ತು ಮೆಹುಲ್‌ ಚಿನುಭಾಯಿ ಚೋಕ್ಸಿ ಮನೆ ಮತ್ತು ಕಚೇರಿಗಳ ಮೇಲೂ ದಾಳಿ ನಡೆಸಲಾಗಿತ್ತು. ಇವರ ಹೊರತಾಗಿಯೂ ಇಬ್ಬರು ಪಿಎನ್‌ಬಿ ಅಧಿಕಾರಿಗಳೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದರು. ಗೋಕುಲನಾಥ್‌ ಶೆಟ್ಟಿ ಮತ್ತು ಮನೋಜ್‌ ಕಾರಟ್‌ ವಿರುದ್ಧವೂ ಎಫ್ಐಆರ್‌ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next