ಹೊಸದಿಲ್ಲಿ: ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿ ದಶಕಗಳಿಂದ ಬಾಕಿ ಇದ್ದ ಖರೀದಿ ಪ್ರಕ್ರಿಯೆಗಳಿಗೆ ನಮ್ಮ ಸರಕಾರ ಅನುಮೋದನೆ ನೀಡಿದೆ. ದೇಶದ ಭದ್ರತೆಗೆ ಅಗತ್ಯವಾಗಿರುವ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎನ್‌ಸಿಸಿ ಕೆಡೆಟ್‌ಗಳನ್ನು ಉದ್ದೇಶಿಸಿ ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ನವ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಾವು ಕಠಿಣ ಪರಿಶ್ರಮಿಗಳಿಗೆ ಅವಕಾಶ ನೀಡುತ್ತೇವೆ ಎಂದಿದ್ದಾರೆ.
ನೀವು ಜನಿಸಿದ ಕುಟುಂಬ ಹಾಗೂ ನಿಮ್ಮ ಆರ್ಥಿಕ ಸನ್ನಿವೇಶವು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ನಿಮ್ಮ ಕೌಶಲ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವು ಫಲಿತಾಂಶ ನೀಡುತ್ತದೆ ಎಂಬ ಭರವಸೆಯನ್ನು ನೀಡುತ್ತೇವೆ ಎಂದು ಅವರು ಹೇಳಿದ್ದಾರೆ. ನಾವು ವಿಐಪಿ ಸಂಸ್ಕೃತಿ ನಿವಾರಿಸಿ ಇಪಿಐ ಸಂಸ್ಕೃತಿ ತರಲಿದ್ದೇವೆ. ಇಪಿಐ ಎಂದರೆ ಪ್ರತಿ ವ್ಯಕ್ತಿಯೂ ಪ್ರಮುಖ ಎಂದಾಗಿದೆ. ಮುಂದಿನ ದಿನಗಳಲ್ಲಿ ದೇಶಕ್ಕೆ ಅತ್ಯಂತ ಅಗತ್ಯವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಇಂತಹ ಹಲವು ಕಠಿಣ ಹಾಗೂ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.
ಸರಕಾರದ ಈ ಎಲ್ಲ ಸಾಧನೆಯನ್ನೂ ಯುವಕರ ಮುಂದಾಳತ್ವದಲ್ಲೇ ನಡೆಸಲಾಗಿದೆ. ಸ್ವತ್ಛ ಭಾರತ ಚಳವಳಿಯನ್ನು ಯುವಕರೇ ಮುಂದುವರಿಸಿದರು. ಭ್ರಷ್ಟಾಚಾರ ತೊಲಗಿಸುವ ಉದ್ದೇಶದಿಂದ ಜಾರಿಗೊಳಿಸಿದ ನೋಟು ಅಮಾನ್ಯ, ಡಿಜಿಟಲ್ ಇಂಡಿಯಾ ಮೂಲಕ ಸರಳ ಮತ್ತು ಪಾರದರ್ಶಕ ವ್ಯವಸ್ಥೆ ರೂಪಿಸಲು ಯುವಕರೇ ಬೆಂಬಲಿಸಿದರು ಎಂದು ಅವರು ಹೇಳಿದ್ದಾರೆ.
ದೇಶದ ಭದ್ರತೆ ನಿಟ್ಟಿನಲ್ಲಿ ಹಲವು ಕಠಿಣ ಕ್ರಮ ಕೈಗೊಂಡಿದ್ದೇವೆ
ಎನ್‌ಸಿಸಿ ರ್ಯಾಲಿಯಲ್ಲಿ ಮೋದಿ