ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಬಿದ್ದ ಅರಣ್ಯ ಪ್ರದೇಶಗಳಲ್ಲಿ ಸೋಮವಾರ ವೀಕ್ಷಣೆ ನಡೆಸಿದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಬೆಂಕಿಯಿಂದ ತೀವ್ರವಾಗಿ ಹಾನಿಗೊಳಗಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ನಾಲ್ಕಾರು ದಿನಗಳಿಂದ ಬೆಂಕಿನಂದಿಸಲು ತೀವ್ರ ಪ್ರಯತ್ನ ನಡೆಸಲಾಗಿದ್ದರೂ ಸಂಪೂರ್ಣ ಸಾಧ್ಯವಾಗಿಲ್ಲ. ಅಗ್ನಿಶಾಮಕ ವಾಹನಗಳು ಸಂಚರಿಸಲು ಸಾಧ್ಯವಾಗದ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ನೀರು ಸಿಂಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಬೆಂಕಿ ನಂದಿಸಲು ನಡೆಸುತ್ತಿರುವ ಮಾನವ ಪ್ರಯತ್ನ ಕಷ್ಟಕರವಾದ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ವಾಯು ಪಡೆಯ ಹೆಲಿಕಾಫ್ಟರ್ ಬಳಕೆ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಹೆಲಿಕಾಪ್ಟರ್ ಅಗತ್ಯಬಿದ್ದರೆ ಕಳುಹಿಸಿಕೊಡಲಾಗುವುದು.
ಬಂಡೀಪುರವನ್ನು ಬೆಂಕಿಯಿಂದ ರಕ್ಷಿಸಲು ಸದ್ಯ ಬೇರಂಬಾಡಿಯ ಕೆಂಪುಸಾಗರ ಕೆರೆ ಮತ್ತು ಹಂಗಳ ಸಮೀಪದಲ್ಲಿರುವ ಹಿರಿಕೆರೆಯಿಂದ ನೀರನ್ನು ಹೆಲಿಕಾಪ್ಟರ್ ಸಹಾಯದಿಂದ ಸಿಂಪಡಿಸಲಾಗುತ್ತಿದೆ ಎಂದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಡುನ ವೈಷಮ್ಯದಿಂದ ಬೆಂಕಿಬಿದ್ದಿದೆ ಎಂಬುದು ಸರಿಯಲ್ಲ.
ಅರಣ್ಯಕ್ಕೆ ದುರುದ್ದೇಶದಿಂದ ಬೆಂಕಿಹಚ್ಚಿದ ಆರೋಪದ ಮೇಲೆ ವ್ಯಕ್ತಿಯೋರ್ವನ ಮೇಲೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಚಿವರು ಬೆಟ್ಟದ ಸುತ್ತಲಿನ ಪ್ರದೇಶಗಳಲ್ಲಿ ಅಧಿಕಾರಿಗಳೊಂದಿಗೆ ಸಂಚರಿಸಿ ವೀಕ್ಷಣೆ ನಡೆಸಿದರು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುನಾಟಿ ಶ್ರೀಧರ್, ಅಂಬಾಡಿ ಮಾಧವ್, ಜಯರಾಂ, ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಮುಖಂಡ ಗಣೇಶ್‌ಪ್ರಸಾದ್ ಇತರರಿದ್ದರು.