ಮಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 5 ಕೋ.ರೂ.ಅನುದಾನ ನೀಡಿದ್ದು, ಇದನ್ನು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದ ಸಮಾರೋಪದಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 50 ಕೋ.ರೂ. ನೀಡಬೇಕು ಎಂದು ರಾಜ್ಯ ಪತ್ರಕರ್ತರ ಸಂಘ ಸರಕಾರಕ್ಕೆ ಮನವಿ ನೀಡಿರುವುದಾಗಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
ಈ ಮನವಿಯನ್ನು ಪರಿಗಣಿಸಿ ಅನುದಾನವನ್ನು ಹೆಚ್ಚಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇನೆ ಎಂದು ಭರವಸೆ ನೀಡಿದರು. ರಾಜ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಸಮ್ಮಾನಿತರ ಪರವಾಗಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.
ಪ್ರಶಸ್ತಿ ಪ್ರದಾನ: ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಕೆಯುಡಬುಜೆ ದತ್ತಿನಿಧಿ ಪ್ರಶಸ್ತಿಗಳನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪ್ರದಾನ ಮಾಡಿದರು. “ಉದಯವಾಣಿ’ಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಲಕ್ಷ್ಮೀನಾರಾಯಣ,
ಅರುಣ್ ಶಿರೂರು ಹಾಗೂ ಹಿರಿಯ ಪತ್ರಕರ್ತರಾದ ತಿಮ್ಮಪ್ಪ ಭಟ್, ಆನಂದ ಶೆಟ್ಟಿ, ಪದ್ಮರಾಜ ದಂಡಾವತಿ, ಪೆ.ನಾ.ಗೋಪಾಲ ರಾವ್, ಅಬ್ಬೂರು ರಾಜಶೇಖರ್, ಜಿ.ಎನ್.ಮೋಹನ್ ಸಹಿತ ಹಲವು ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಡಾ| ಶಿವಾನಂದ ಅವರನ್ನು ಸಮ್ಮಾನಿಸಲಾಯಿತು.