Advertisement

ಹೆಚ್ಚುತ್ತಿದೆ ಫ್ಯಾನ್ಸಿ ನಂಬರ್‌ ಕ್ರೇಜ್‌ !

12:46 PM Oct 02, 2017 | Team Udayavani |

ಮಹಾನಗರ: ತಾವು ಖರೀದಿಸುವ ಹೊಸ ವಾಹನಗಳಲ್ಲಿ ತಮಗಿಷ್ಟವಾದ ಹಾಗೂ ಅಪರೂಪವೆನಿಸುವ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಪಡೆದುಕೊಳ್ಳಬೇಕೆನ್ನುವ ಕ್ರೇಜ್‌ ನಗರದಲ್ಲಿ ಹೆಚ್ಚಾಗಿದೆ. ಹೀಗೆ ಬೇಕಾದ ಸಂಖ್ಯೆ ಪಡೆಯಲು ಸಾಕಷ್ಟು ಹಣ ಖರ್ಚು ಮಾಡಲೂ ಸಿದ್ಧ.

Advertisement

ಈ ಕ್ರೇಜ್‌ ಎಲ್ಲಿಗೆ ತಲುಪಿದೆಯೆಂದರೆ, ತಮಗಿಷ್ಟದ ನೋಂದಣಿ ಸಂಖ್ಯೆಗೆ ಮೊದಲೇ ಬುಕ್ಕಿಂಗ್‌ ಮಾಡುತ್ತಾರೆ. ಅದು ಸಿಗುವುದು ಖಚಿತವಾದ ಮೇಲೆಯೇ ತಮಗಿಷ್ಟವಾದ ಕಾರನ್ನೋ ಅಥವಾ ಬೈಕನ್ನೋ ಖರೀದಿಸುವವರು ಇದ್ದಾರೆ.

ಮಂಗಳೂರು ಸಾರಿಗೆ ಪ್ರಾಧಿಕಾರ ತನ್ನ ವ್ಯಾಪ್ತಿಯಲ್ಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹರಾಜಿನಲ್ಲಿ ಮೂರು ವರ್ಷಗಳಲ್ಲಿ 1,83,61,156 ರೂ. ಆದಾಯ ಗಳಿಸಿದೆ. 2015-16ನೇ ಸಾಲಿನಲ್ಲಿ ಒಟ್ಟು 277 ವಾಹನಗಳಿಗೆ ಫ್ಯಾನ್ಸಿ ನಂಬರ್‌ ನೀಡಿದ್ದು, 66.64 ಲಕ್ಷ ರೂ., 2016-17ರಲ್ಲಿ 355 ವಾಹನಗಳಿಂದ 78.98 ಲಕ್ಷ ರೂ., 2017ರ ಆಗಸ್ಟ್‌ವರೆಗೆ 165 ವಾಹನಗಳಿಂದ 37.99 ಲಕ್ಷ ರೂ. ಸಂಗ್ರಹವಾಗಿದೆ.

ಕಾರಿನವರದ್ದೇ ಮೇಲುಗೈ
ಈ ಫ್ಯಾನ್ಸಿ ನಂಬರ್‌ ಬಳಕೆದಾರರ ಪೈಕಿ ಕಾರು ಮಾಲಕರದ್ದೇ ಸಿಂಹಪಾಲು. ಚಾಲ್ತಿಯಲ್ಲಿರುವ ಸೀರೀಸ್‌ನಲ್ಲಿ ಕಾರುಗಳಿಗೆ ಫ್ಯಾನ್ಸಿ ನಂಬರ್‌ ಪಡೆಯಲು 20 ಸಾವಿರ ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಬಿಡುಗಡೆಯಾಗಲಿರುವ ಹೊಸ ಸೀರೀಸ್‌ನಲ್ಲಿ ಬೇಕೆಂದರೆ 75 ಸಾವಿರ ರೂ. ನೀಡಿ ಕಾದಿರಿಸಬೇಕು.

ಬೈಕ್‌ಗೆ 5ರಿಂದ 25 ಸಾವಿರ ರೂ. ಮತ್ತು ಉಳಿದ ವಾಹನಗಳಿಗೆ 30  ಸಾವಿರ ರೂ.ನಿಂದ ಪ್ರಾರಂಭ. ಒಂದು ಬಾರಿ ಕಾದಿರಿಸಿದ ಬಳಿಕ 90 ದಿನಗಳ ಕಾಲಾವಕಾಶವಿರುತ್ತದೆ.

Advertisement

ಸದ್ಯ ನಗರದಲ್ಲಿ ಕಾರುಗಳ ಸಾಲಿನಲ್ಲಿ ಎಂ.ಎಚ್‌. ಸೀರೀಸ್‌ನ ನೋಂದಣಿ ಸಂಖ್ಯೆ ಚಾಲ್ತಿಯಲ್ಲಿದೆ. ಶೀಘ್ರವೇ ಎಂ.ಜೆ.ಯಿಂದ ಎಂ.ಪಿ. ಸೀರೀಸ್‌ ವರೆಗೆ ಫ್ಯಾನ್ಸಿ ಸಂಖ್ಯೆಗಳನ್ನು ಕಾದಿರಿಸಬಹುದಾಗಿದೆ.

ರಾಜಕಾರಣಿಗಳು ಮುಂದೆ ಬರುವ ಎಂ.ಪಿ. ಸೀರೀಸ್‌ ಮೇಲೂ ಕಣ್ಣಿಟ್ಟಿದ್ದಾರೆ. ಹತ್ತಿರದ ಆರ್‌ಟಿಒದಿಂದ ನೆಚ್ಚಿನ ಸಂಖ್ಯೆ ಸಿಗದಿದ್ದರೆ ಪಕ್ಕದ ಜಿಲ್ಲೆಗಳಲ್ಲೂ ಫ್ಯಾನ್ಸಿ ಸಂಖ್ಯೆಗೆ ಬೇಡಿಕೆ ಸಲ್ಲಿಸುತ್ತಾರೆ.

ಸಿಂಗಲ್‌ ಡಿಜಿಟ್‌ ನಂಬರ್‌ ಇಲ್ಲ! 
ಮಂಗಳೂರು ಸಾರಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ 1ರಿಂದ 9ರವರೆಗಿನ ಒಂದಂಕಿಯ ಎಲ್ಲ ಸಂಖ್ಯೆಗಳೂ ಎಲ್ಲ ಸೀರೀಸ್‌ನಲ್ಲಿ ಮಾರಾಟವಾಗಿವೆ. ಕೆಲವು ನಂಬರ್‌ಗಳಿಗೆ ಸಾಕಷ್ಟು ಬೇಡಿಕೆಯಿದ್ದು, ಲಕ್ಷಾಂತರ ರೂ. ಕೊಟ್ಟು ಖರೀದಿಸು ವವರಿದ್ದಾರೆ.ಈ ಪೈಕಿ 9ಕ್ಕೆ ಹೆಚ್ಚು ಬೇಡಿಕೆ. ಅಲ್ಲದೆ 789, 8005 ಸಂಖ್ಯೆ ಆಧರಿಸಿದ ನಂಬರ್‌ ಪಡೆಯಲೂ ಕಾಯುವವರಿದ್ದಾರೆ.

ಕೆಲವೊಂದು ಸಮುದಾಯದ ಸಂಪ್ರದಾಯದಂತೆ ನಿರ್ದಿಷ್ಟ ಸಂಖ್ಯೆಗಳನ್ನು ತಮ್ಮ ವಾಹನಗಳಿಗೆ ಪಡೆಯುವುದೂ ಖುಷಿಯ ಸಂಗತಿ. ಇನ್ನು 13, 15, 17 ಇತ್ಯಾದಿ ಬೆಸ ಸಂಖ್ಯೆಗಳಿಗೆ ಬೇಡಿಕೆ ಕಡಿಮೆ. ಒಂದು ವೇಳೆ, ಒಂದೇ ನೋಂದಣಿ ಸಂಖ್ಯೆಗೆ ಹೆಚ್ಚಿನ ಜನರಿಂದ ಬೇಡಿಕೆ ಬಂದರೆ, ಇಷ್ಟಪಟ್ಟರೆ ಹರಾಜು ಹಾಕಲಾಗುತ್ತದೆ. ಹೆಚ್ಚು ಹಣಕ್ಕೆ ಕೂಗಿದವರಿಗೆ ನಂಬರ್‌ ಸಿಗುತ್ತದೆ.

ಕಾರು, ಬೈಕ್‌ ಯಾವುದೇ ಇರಲಿ. ನಂಬರ್‌ಗಳು ಫ್ಯಾನ್ಸಿ ರೂಪದಲ್ಲಿದ್ದರೆ ನೆನಪಿಟ್ಟುಕೊಳ್ಳುವುದು ಸುಲಭ. ಹೀಗಾಗಿ ಇಂತಹ ನಂಬರ್‌ಗಳನ್ನು ಪಡೆಯಲು ಮಂಗಳೂರಿನಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಮಾತ್ರವಲ್ಲ ಇದಕ್ಕಾಗಿ ಜನರು 75 ಸಾವಿರ ರೂ. ವರೆಗೂ ಪಾವತಿಸಲು ಸಿದ್ಧರಾಗಿದ್ದಾರೆ.

ಬೇಡಿಕೆ ಹೆಚ್ಚಿದೆ
ಪ್ರಸ್ತುತ ಹೆಚ್ಚಿನ ಮಂದಿ ಐಷಾರಾಮಿ ಕಾರಿಗೆ ಮೊರೆ ಹೋಗುತ್ತಿದ್ದು, ಫ್ಯಾನ್ಸಿ ನಂಬರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಾರಿಗೆ ಪ್ರಾಧಿಕಾರಕ್ಕೂ ಆದಾಯ ಹೆಚ್ಚಾಗುತ್ತಿದೆ. ಮಂಗಳೂರು ಸಾರಿಗೆ ಪ್ರಾಧಿಕಾರ ವ್ಯಾಪ್ತಿಗೆ ಬಂಟ್ವಾಳವೂ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯದ ಮಾಲಕರ ವಾಹನಗಳೂ ಮಂಗಳೂರಿನಲ್ಲಿ ನೋಂದಣಿಯಾಗುತ್ತಿವೆ.
ಜಿ.ಎಸ್‌. ಹೆಗಡೆ, ಪ್ರಾದೇಶಿಕ
ಸಾರಿಗೆ ಅಧಿಕಾರಿ, ಮಂಗಳೂರು

ಫ್ಯಾನ್ಸಿ ನಂಬರ್‌ ಇದ್ದರೆ ಹೆದರ ಬೇಕಿಲ್ಲ
ವಾಹನಗಳನ್ನು ಪೊಲೀಸರು ತತ್‌ಕ್ಷಣ ಗುರುತು ಹಿಡಿಯುತ್ತಾರೆ ಎಂಬ ಕಾರಣಕ್ಕೆ ಅನೇಕ ಮಂದಿ ಫ್ಯಾನ್ಸಿ ನಂಬರ್‌ ಪಡೆಯಲು ಹೆದರುತ್ತಾರೆ. ಸುರಕ್ಷೆ ಮತ್ತು ನಿಯಮಗಳನ್ನು ಅನುಸರಿಸಿದರೆ ಹೆದರಬೇಕಿಲ್ಲ. ಸುಮಾರು 7 ಲಕ್ಷ ರೂ.ವರೆಗಿನ ಹರಾಜು ನಡೆದ ಉದಾಹರಣೆಯೂ ಇದೆ.
ಸುಹಾನ್‌ ಆಳ್ವ ,
ನಿರೂಪಕ

ಪ್ರತಿಷ್ಠಿತರ ನಂಬರ್‌ ಗೇಮ್‌
ಪ್ರಭಾವಿ ವ್ಯಕ್ತಿಗಳಿಗೆ ಇದೊಂದು ಪ್ರತಿಷ್ಠೆಯ ಸಂಗತಿಯೂ ಹೌದು.ಹಾಗಾಗಿ ಬಹಳ ವಿಶಿಷ್ಟವೆನಿಸುವಂತೆಯೇ ಸಂಖ್ಯೆ ಪಡೆಯುತ್ತಾರೆ. ಉದ್ಯಮಿ ಎ.ಜೆ. ಶೆಟ್ಟಿ ಅವರ ಹೊಸ ಮರ್ಸಿಡಿಸ್‌ ಎಸ್‌ 400 ಕಾರಿಗೆ ಕೆ.ಎ. 1, ಎ.ಜೆ.1 ಎಂಬ ಫ್ಯಾನ್ಸಿ ನೋಂದಣಿ ನಂಬರ್‌ ಪಡೆದಿದ್ದಾರೆ. ಸಚಿವ ಯು.ಟಿ. ಖಾದರ್‌ ಅವರ ಮನೆಯ ಕೆಲ ಕಾರು, ಜೀಪಿಗೆ 1 ಸೀರೀಸ್‌ ನಂಬರ್‌ ಇದ್ದು, ಶಾಸಕ ಮೊದಿನ್‌ ಬಾವಾ ಅವರ ಎಲ್ಲ ವಾಹನಗಳ ಕೊನೆಯ ಸಂಖ್ಯೆ 55ರಿಂದ ಕೊನೆಗೊಳ್ಳುತ್ತದೆ. ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ಎರಡು ಕಾರುಗಳ ನೋಂದಣಿ ಸಂಖ್ಯೆ 5050. ಕಾರುಗಳ ಕ್ರೇಜ್‌ ಹೊಂದಿರುವ ಉದ್ಯಮಿ ಅರ್ಜುನ್‌ ಮೋರಸ್‌ ಅವರ ಎಲ್ಲ ಕಾರುಗಳಿಗೂ 7200 ಎಂದಿದ್ದರೆ, ಮಂಗಳೂರಿನ ಶರೀಫ್‌ ಎಂಬ ಉದ್ಯಮಿ ಪಡೆದಿರುವ ನೋಂದಣಿ ಸಂಖ್ಯೆ 999.

90ರ ದಶಕದ ಕ್ರೇಜ್‌
ಮಂಗಳೂರಿನಲ್ಲಿ ಫ್ಯಾನ್ಸಿ ನಂಬರ್‌ ಕ್ರೇಜ್‌ ಪ್ರಾರಂಭವಾದದ್ದು 90ರ ದಶಕದಲ್ಲಿ. ಉದ್ಯಮಿ ಅಮರ್‌ ಆಳ್ವ ಅವರ ಕಾರಿನ 1234 ನಂಬರ್‌ ಸಾಕಷ್ಟು ಗಮನ ಸೆಳೆದಿತ್ತು. ಸದ್ಯಅವರ ಮನೆಯಲ್ಲಿರುವ ಎರಡು ಕಾರುಗಳಿಗೂ 1234 ನಂಬರ್‌ ಇದೆ. ಇಂಥದ್ದರಿಂದಲೇ ಫ್ಯಾನ್ಸಿ ನಂಬರ್‌ ಕ್ರೇಜ್‌ ಆರಂಭವಾಗಿರಬಹುದು.

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next