Advertisement

ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಮೇಲೆ “ನಿಗಾ’: ಫ‌ಲಿತಾಂಶ ಆಧರಿಸಿ ಅನುದಾನ ಬಿಡುಗಡೆ

11:09 PM Aug 29, 2022 | Team Udayavani |

ಬೆಂಗಳೂರು: ಅಭಿವೃದ್ಧಿ ಸೂಚ್ಯಂಕ ಗಳಲ್ಲಿ ಹಿಂದುಳಿದಿರುವ ತಾಲೂಕುಗಳನ್ನು ಗುರುತಿಸಿ “ಅಭಿವೃದ್ಧಿ ಆಕಾಂಕ್ಷಿ ತಾಲೂಕು’ ಯೋಜನೆ ರೂಪಿಸಿರುವ ಸರಕಾರ ಅಲ್ಲಿನ ಪ್ರಗತಿ ಬಗ್ಗೆ ನಿಗಾ ವಹಿಸಲು ತೀರ್ಮಾನಿಸಿದೆ.

Advertisement

ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳೂ ಇದರಡಿ ಸೇರ್ಪಡೆಗೊಂಡಿದ್ದು, 93 ತಾಲೂಕುಗಳಲ್ಲಿ ಶಿಕ್ಷಣ, 100 ತಾಲೂಕುಗಳಲ್ಲಿ ಆರೋಗ್ಯ ಸೇವೆ, 102 ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಆದ್ಯತೆ ಮೇರೆಗೆ ಯೋಜನೆ ರೂಪಿಸಲಾಗಿದ್ದು, ಪ್ರಸಕ್ತ ವರ್ಷ ನಿಗದಿಪಡಿಸಿರುವ ಮೂರು ಸಾವಿರ ಕೋಟಿ ರೂ. ಸಮರ್ಪಕ ವೆಚ್ಚದ ಬಗ್ಗೆ ಉಸ್ತುವಾರಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಮುಂದಿನ ವರ್ಷದಿಂದ ಪ್ರಗತಿ ಕುರಿತು ಯೋಜನೆ ಇಲಾಖೆಯ ವಿಶ್ಲೇಷಣೆ ಆಧಾರದ ಮೇಲೆ ಅನುದಾನ ಒದಗಿಸಲಾಗುವುದು ಎಂದು ತಿಳಿಸ ಲಾಗಿದ್ದು, ಆಯಾ ವರ್ಷ ನಿಗದಿತ ಗುರಿ ತಲುಪಬೇಕಿದೆ. ನೀತಿ ಆಯೋಗದ ಸೂಚ್ಯಂಕ ಅನು ಸಾರವೇ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಗೊಳಿಸ ಲಾಗುತ್ತಿದೆ.

ಮೂರನೇ ಸ್ಥಾನ
ನೀತಿ ಆಯೋಗದ ವರದಿ ಪ್ರಕಾರ 2020-21ರಲ್ಲಿ ಕರ್ನಾಟಕ ಸುಸ್ಥಿರ ಅಭಿವೃದ್ಧಿ ವಿಚಾರ ದಲ್ಲಿ 72 ಅಂಕ ಗಳಿಸಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೇರಳ-75, ಹಿಮಾ ಚಲ ಪ್ರದೇಶ ಮತ್ತು ತಮಿಳುನಾಡು -74 ಅಂಕ ಪಡೆದು ಕರ್ನಾಟಕಕ್ಕಿಂತ ಉತ್ತಮ ಸ್ಥಾನದಲ್ಲಿದೆ. ಕರ್ನಾಟಕವು ಉತ್ತಮ ಶ್ರೇಣಿ ಪಡೆಯಲು ಬಡತನ ನಿರ್ಮೂಲನೆ, ಹಸಿವು ಮುಕ್ತ, ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ, ಲಿಂಗಸಮಾನತೆ ಗುರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ವಿಶ್ಲೇಷಣೆ ಮಾಡಿ 101 ತಾಲೂಕು ಕೃಷಿ, 203 ತಾಲೂಕು ಪೌಷ್ಟಿಕತೆ, 100 ತಾಲೂಕು ಆರೋಗ್ಯ, 93 ತಾಲೂಕು ಶಿಕ್ಷಣ, 81 ತಾಲೂಕು ಮೂಲ ಸೌಕರ್ಯ ವಲಯದಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲೂಕುಗಳು ಎಂದು ಗುರುತಿಸಲಾಗಿದೆ.

ಹೀಗಾಗಿ, ಆರೋಗ್ಯ ಮತ್ತು ಪೌಷ್ಟಿಕತೆಗೆ ಶೇ.30, ಶಿಕ್ಷಣಕ್ಕೆ ಶೇ.30, ಕೃಷಿ, ತೋಟಗಾರಿಕೆ, ಜಲಸಂಪನ್ಮೂಲಕ್ಕೆ ಶೇ. 20, ಮೂಲಸೌಕರ್ಯಕ್ಕೆ ಶೇ. 10ರಷ್ಟು ಅನುದಾನ ನಿಗದಿಪಡಿಸಲಾಗಿದೆ.

Advertisement

ಸರಕಾರವು 2000ನೇ ಸಾಲಿನಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆ ಬಗ್ಗೆ ಅಧ್ಯಯನ ನಡೆಸಲು ಡಾ| ಡಿ.ಎಂ.ನಂಜುಂಡಪ್ಪ ನೇತೃತ್ವ ದಲ್ಲಿ ಉನ್ನತಾಧಿಕಾರಿ ಸಮಿತಿ ರಚಿಸಿತ್ತು. ಸಮಿತಿಯು 2002ರಲ್ಲಿ ವರದಿ ಸಲ್ಲಿಸಿತ್ತು. 175 ತಾಲೂಕುಗಳ ಪೈಕಿ 114 ತಾಲೂಕು ಹಿಂದುಳಿದ, 61 ಅಭಿವೃದ್ಧಿ ಹೊಂದಿದ ತಾಲೂಕು ಎಂದು ವರ್ಗೀಕರಣ ಮಾಡಿತ್ತು. 114 ಹಿಂದುಳಿದ ತಾಲೂಕುಗಳ ಪೈಕಿ 39 ತಾಲೂಕು ಅತ್ಯಂತ ಹಿಂದುಳಿದ, 40 ತಾಲೂಕು ಅತಿ ಹಿಂದುಳಿದ ಹಾಗೂ 35 ತಾಲೂಕು ಹಿಂದುಳಿದ ತಾಲೂಕು ಎಂದು ವರ್ಗೀಕರಣ ಮಾಡಲಾಗಿತ್ತು.
ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಗಾಗಿ 31 ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಸಮಿತಿ ಶಿಫಾರಸು ಮಾಡ ಲಾಗಿತ್ತು. 2007-08ರಿಂದ 2014-15ಕ್ಕೆ ಅವಧಿ ಪೂರ್ಣಗೊಂಡಿತ್ತು. 2017ರಲ್ಲಿ ಬೆಳ ಗಾವಿ ಅಧಿವೇಶನದಲ್ಲಿ ಯೋಜನೆ ಅನುಷ್ಠಾನ 2015-16 ರಿಂದ 2019-20ರ ವರೆಗೂ ಮೂರು ಸಾವಿರ ಕೋಟಿ ರೂ. ಅನುದಾನದೊಂದಿಗೆ ಮುಂದುವರಿಸಲು ತೀರ್ಮಾನಿಸಲಾಗಿತ್ತು.

ಯಾದಗಿರಿ, ರಾಯಚೂರು ಜಿಲ್ಲೆ ಸೇರ್ಪಡೆ
ಪ್ರಧಾನಮಂತ್ರಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಯೋಜನೆಯಡಿ ನೀತಿ ಆಯೋಗವು ದೇಶದ 112 ಜಿಲ್ಲೆಗಳನ್ನು ಗುರುತಿಸಿದ್ದು ಆ ಪೈಕಿ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಸೇರ್ಪಡೆಯಾಗಿರುತ್ತದೆ. ಈ ಜಿಲ್ಲೆಗಳ ಅಭಿವೃದ್ಧಿ ಅಳತೆ ಮಾಡಲು 49 ಸೂಚನೆಗಳನ್ನು ನಿರ್ದಿಷ್ಟ ಮಾನದಂಡಗಳೊಂದಿಗೆ ಆರೋಗ್ಯ ಮತ್ತು ಆಪೌಷ್ಟಿಕತೆ, ಶಿಕ್ಷಣ, ಕೃಷಿ ಮತ್ತು ಜಲಸಂಪನ್ಮೂಲ, ಆರ್ಥಿಕ ಸೇರ್ಪಡೆ ಮತ್ತು ಕೌಶಲಾಭಿವೃದ್ಧಿ ಹಾಗೂ ಮೂಲ ಸೌಕರ್ಯ ಐದು ವಲಯಗಳಲ್ಲಿ ನಿಗದಿಪಡಿಸಿ ಸುಸ್ಥಿರ ಅಭಿವೃದ್ಧಿ ಗುರಿ-2030′ ಯೋಜನೆ ರೂಪಿಸಲಾಗಿದೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next