Advertisement

ಸೆಕೆಂಡ್‌ ಹ್ಯಾಂಡ್‌ ಕಾರು ಹೆಚ್ಚುತ್ತಿದೆ ಬೇಡಿಕೆ

10:10 PM Jul 25, 2019 | mahesh |

ಕಾರು ಖರೀದಿಸಲು ಲಕ್ಷಗಟ್ಟಲೆ ಹಣ ವ್ಯಯಿಸಲು ಸಾಧ್ಯವಾಗದವರು ಮೊರೆ ಹೋಗುವುದು ಯುಸ್ಡ್ ಕಾರು ಅಥವಾ ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ. ತಮ್ಮ ಬಜೆಟ್‌ಗೆ ಅನುಗುಣವಾಗಿ ಒಂದು ಒಳ್ಳೆಯ ಕಾರು ಖರೀದಿಗಳಿಯುವವರ ಸಂಖ್ಯೆ ಅಧಿಕ. ಸದ್ಯ ದಕ್ಷಿಣ ಕನ್ನಡದಲ್ಲೂ ಸೆಕೆಂಡ್‌ ಹ್ಯಾಂಡ್‌ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಯುಸ್ಡ್ ಕಾರುಗಳ ಖರೀದಿಗೂ ಮುನ್ನ ಬಹಳಷ್ಟು ಎಚ್ಚರವಹಿಸಬೇಕು. ಎಚ್ಚರ ತಪ್ಪಿದರೆ ನಿಮ್ಮ ಯೋಜನೆಗಳೆಲ್ಲವೂ ಉಲ್ಟಾ ಪಲ್ಟಾವಾಗಬಹುದು.

Advertisement

ಕಾರು ಖರೀದಿ ಯಾರಿಗೆ ಇಷ್ಟ ಇರಲ್ಲ ಹೇಳಿ.. ಮನೆಮಂದಿಯೊಂದಿಗೆ ಜುಮ್ಮನೆ ಕಾರಲ್ಲಿ ಸುತ್ತಾಡಬೇಕು ಎಂಬ ಆಸೆ ಹೆಚ್ಚಿನವರಿಗೆ ಇರುತ್ತದೆ. ಆದರೆ ಹೊಸ ಕಾರು ಖರೀದಿ ಮಾಡುವಷ್ಟು ಲಕ್ಷಗಟ್ಟಲೆ ಹಣ ವ್ಯಯಿಸಲು ಅನೇಕರಿಗೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಸೆಕೆಂಡ್‌ ಹ್ಯಾಂಡ್‌ ಕಾರಿಗೆ ಮೊರೆ ಹೋಗುತ್ತಾರೆ.

ದ.ಕ. ಜಿಲ್ಲೆಯಲ್ಲಿಯೂ ಉಪಯೋಗಿಸಿದ ಕಾರುಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ ಸುಮಾರು 2ರಿಂದ 3 ಲಕ್ಷ ರೂ. ಬಜೆಟ್‌ ಕಾರುಗಳನ್ನು ಖರೀದಿಗೆ ಚ. ಅದರಲ್ಲಿಯೂ ಮಾರುತಿ 800, ಆಲ್ಟೋ, ವ್ಯಾಗನರ್‌, ಸ್ವಿಫ್ಟ್, ಆಮ್ನಿ ಗಾಡಿಗಳ ಖರೀದಿಗೆ ಬೇಡಿಕೆ ಹೆಚ್ಚಿದೆ. ಕೆಲ ಮಂದಿ ತಮ್ಮ ಮನೆಯಲ್ಲಿ ಹೊಸ ಗಾಡಿ ಇದ್ದರೂ ಬಳಕೆಗೆ ಮತ್ತೂಂದು ಗಾಡಿ ಎಂದು ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ಮಾಡುತ್ತಾರೆ. ಇನ್ನೂ ಕೆಲ ಮಂದಿ ಡ್ರೈವಿಂಗ್‌ ಕಲಿತ ಕೂಡಲೇ ಹೊಸ ಕಾರು ಬೇಡ ಎಂದು ಸೆಕೆಂಡ್‌ ಹ್ಯಾಂಡ್‌ ಕಾರಿಗೆ ಮೊರೆ ಹೋಗುತ್ತಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ಸಿಎಆರ್‌ಜಿ ಎಂಬ ಸಂಸ್ಥೆ ಸಂಶೋಧನೆ ನಡೆಸಿದ ಪ್ರಕಾರ ಮುಂದಿನ ಕೆಲ ವರ್ಷಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ವಲಯದಲ್ಲಿ ಶೇ.20ರಷ್ಟು ಬೆಳವಣಿಗೆಯಾಗಲಿದೆಯಂತೆ.

ಹೊಸ ಕಾರು ಖರೀದಿ ಮಾಡುವಾಗ ಸಾಮಾನ್ಯವಾಗಿ ಇಂಜಿನ್‌ ಸೇರಿದಂತೆ ಇನ್ನಿತರ ವೈಶಿಷ್ಟ್ಯ ಸರಿಯಿದೆಯೇ ಎಂಬುದು ಕೂಲಂಕುಷವಾಗಿ ಗಮನಿಸುವುದಿಲ್ಲ. ಏಕೆಂದರೆ ಹೊಸ ಕಾರು ಗುಣಮಟ್ಟದಿಂದಿರುತ್ತದೆ ಎಂದು ಖಾತ್ರಿ ಇರುತ್ತದೆ. ಆದರೆ ಉಪಯೋಗಿಸಿದ ಕಾರು ಖರೀದಿ ಮಾಡುವಾಗ ಕಾರಿನ ವ್ಯವಸ್ಥೆಯ ಬಗ್ಗೆ ಗಮನಹರಿಸಬೇಕು. ಹೊಸ ಕಾರು ಖರೀದಿ ಮಾಡುವುದಕ್ಕಿಂತಲೂ ಹೆಚ್ಚಾಗಿ ಹಳೆ ಕಾರು ಖರೀದಿ ಮಾಡುವಾಗ ಬಜೆಟ್‌ ಬಗ್ಗೆ ತುಂಬಾನೇ ಜಾಣ್ಮೆಯಿಂದಿರಬೇಕು.

Advertisement

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಮುಂದಾದಾಗ ಸದ್ಯದ ಮಾರುಕಟ್ಟೆಯಲ್ಲಿ ಯಾವ ರೀತಿ ಬೆಲೆ ಇದೆ ಎಂಬುದನ್ನು ನುರಿತವರಿಂದ ತಿಳಿದುಕೊಳ್ಳದೆ ಕಾರು ಖರೀದಿ ಮಾಡಿದರೆ ಯಾಮಾರುವುದು ಗ್ಯಾರಂಟಿ. ಏಕೆಂದರೆ, ದಲ್ಲಾಳಿಗಳ ಮಾತು ಪೂರ್ತಿಯಾಗಿ ನಂಬುವುದು ಸರಿಯಲ್ಲ. ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟ ದಲ್ಲಾಳಿ ಅಥವಾ ಮಾರಾಟಗಾರ ಹೇಳುವ ಬೆಲೆಯ ಆಧಾರದಲ್ಲಿ ನಡೆಯುತ್ತದೆ. ಗ್ರಾಹಕರು ಕಾರು ಖರೀದಿ ಮಾಡುವ ಮುನ್ನ ಸೆಕೆಂಡ್‌ ಹ್ಯಾಂಡ್‌ ಕಾರಿಗೆ ಮಾರುಕಟ್ಟೆಯಲ್ಲಿ ಸದ್ಯ ಇರುವ ನಿಖರ ಬೆಲೆಯನ್ನು ಅರಿತುಕೊಳ್ಳಬೇಕು. ಬಳಿಕವಷ್ಟೇ ಡೀಲರ್‌ ಹೇಳಿದ ಬೆಲೆಯನ್ನು ಪರಿಶೀಲನೆ ನಡೆಸಬೇಕು.

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೂ ಮುನ್ನ ಟೆಸ್ಟ್‌ ಡ್ರೆçವ್‌ ಮಾಡುವುದು ಮುಖ್ಯ. ಇದರಿಂದ ಕಾರಿನ ಇಂಜಿನ್‌, ಕಾರು ಬಳಸಿದ ರೀತಿ ಸೇರಿದಂತೆ ಇನ್ನಿತರ ವಿಷಯಗಳನ್ನು ತಿಳಿಯಬಹುದು. ಕಾರಿನ ದಾಖಲೆಗಳಾದ ಎಮಿಶನ್‌ ಟೆಸ್ಟ್‌, ಇನ್ಶೂರೆನ್ಸ್‌ , ಪ್ರಯಾಣಿಸಿದ ದೂರು, ಲೋನ್‌ ಇದೆಯೇ ಹಾಗೂ ಇನ್ನಿತರ ದಾಖಲೆಗಳನ್ನು ಪರಿಶೀಲನೆ ಮಾಡಬೇಕು.

ಆನ್‌ಲೈನ್‌ ಬಗ್ಗೆ ಎಚ್ಚರವಿರಲಿ
ಆನ್‌ಲೈನ್‌ನಲ್ಲಿ ಕಾರು ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಖರೀದಿದಾರರು ತುಂಬಾನೇ ಜಾಗರೂಕತೆಯಿಂದ ವ್ಯವಹಾರ ನಡೆಸಬೇಕು. ಇಲ್ಲಿ ಅವ್ಯವಹಾರ ಮಾಡುವ ಮಂದಿ ಹೆಚ್ಚಾಗಿದ್ದಾರೆ. ಮಂಗಳೂರಿನಲ್ಲಿಯೂ ಇತ್ತೀಚೆಗೆ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಾರು ಮಾರಾಟದ ಜಾಹೀರಾತು ನಂಬಿ 1 ಲಕ್ಷದ 20 ಸಾವಿರ ರೂ. ಕಳೆದುಕೊಂಡಿದ್ದಾರೆ. ಈ ಕಾರಣಕ್ಕೆ ಅಧಿಕೃತ ತಾಣಗಳಲ್ಲಿ ಮಾತ್ರ ಖರೀದಿಗೆ ಮುಂದಾಗಬೇಕಿದೆ.

ಹ್ಯಾಂಡ್‌ ಕಾರು ಖರೀದಿ
ಹೊಸ ಕಾರು ಖರೀದಿ ಬದಲಾಗಿ ನಾನು ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ಇಷ್ಟಪಡುತ್ತೇನೆ. ಏಕೆಂದರೆ, ತಿಂಗಳಿಗೊಂದು ಹೊಸ ಮಾಡೆಲ್‌ ಕಾರುಗಳು ಕಾಲಿಡುತ್ತಿದೆ. ಹೀಗಿರುವಾಗ ಹೊಸ ಕಾರು ಖರೀದಿ ಮಾಡಿದರೆ ಬೇಗನೇ ಮಾರಾಟ ಮಾಡಲು ಸಾಧ್ಯವಿಲ್ಲ..
– ಅಭಿಷೇಕ್‌ , ಉದ್ಯೋಗಿ

-  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next