Advertisement

ದೇಸಿ ಹಸುವಿನ ಹಾಲಿಗೆ ಬೇಡಿಕೆ ಹೆಚ್ಚು : ಪ್ರಭು ಚವ್ಹಾಣ್

09:42 AM Sep 14, 2019 | sudhir |

ಬೆಂಗಳೂರು:ದೇಶಿ ಹಸುವಿನ ಹಾಲಿಗೆ ಬೇಡಿಕೆ ಇತ್ತೀಚೆಗೆ ಹೆಚ್ಚಾಗಿದೆ. ಕರ್ನಾಟಕ ಹಾಲು ಮಹಾಮಂಡಳಿಯು ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ದೇಶಿ ಹಸುವಿನ ಹಾಲು ಶೇಖರಣೆ ಪ್ರಾರಂಭಿಸಿದ್ದು, ದಿನಕ್ಕೆ ಎರಡು ಸಾವಿರ ಲೀಟರ್ ಶೇಖರಣೆ ಆಗುತ್ತಿದೆ, ಮುಂದಿನ ದಿನಗಳಲ್ಲಿ ಇದನ್ನು ಹತ್ತು ಸಾವಿರ ಲೀಟರ್‌ಗೆ ಹೆಚ್ಚಿಸಲು ಅಗತ್ಯ ಕ್ರಮ ವಹಿಸಬೇಕೆಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು.

Advertisement

ಪಶುಸಂಗೋಪನೆ ಇಲಾಖೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಇಂದು ಸಚಿವರಾದ ಶ್ರೀ ಪ್ರಭು ಚವ್ಹಾಣ್ ಅವರು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಹಾಲು ಉತ್ಪಾದನೆ ಹೆಚ್ಚಿಸಲು ಹಾಲಿನ ಶೇಖರಣೆಯನ್ನು ಸದ್ಯ ಇರುವ 77.00 ಲಕ್ಷ ಕೆಜಿಯಿಂದ ಪ್ರತಿ ದಿನಕ್ಕೆ 1 ಕೋಟಿ ಲೀಟರ್‌ಗೆ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಯಿತು.

“ಬೈಪಾಸ್ ಪ್ರೋಟೀನ್” ಪಶು ಆಹಾರ ಸಾಕಷ್ಟು ಪ್ರಮಾಣದಲ್ಲಿ ಪೂರೈಸಲು, ಪಶು ಆಹಾರ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಅವಶ್ಯಕತೆಗನುಗುಣವಾಗಿ ಆಯಾ ಪ್ರದೇಶಗಳಲ್ಲಿ ಹೊಸ ಘಟಕ ಪ್ರಾರಂಭಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.

ದೆಹಲಿಯ ಮದರ್ ಡೇರಿ ಪ್ರತಿ ನಿತ್ಯ 5 ಲಕ್ಷ ಲೀಟರ್ ಆಕಳ ಹಾಲನ್ನು, ಕರ್ನಾಟಕ ಹಾಲು ಮಹಾ ಮಂಡಳದಿಂದ ಖರೀದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಇದಕ್ಕೆ ಸಜ್ಜಾಗುವಂತೆ ಸೂಕ್ತವಾದ ಕ್ರಮಗಳನ್ನು ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅದೇ ರೀತಿ ಗೋವಾ, ಮುಂಬೈ, ಪುಣೆ, ಚನೈ, ವಿಜಯವಾಡ, ಸೇರಿ ಸುಮಾರು 4 ಲಕ್ಷಕ್ಕೂ ಅಧಿಕವಾದ ಹಾಲು ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೇಡಿಕೆಯೂ ಇನ್ನೂ ಹೆಚ್ಚಾಗಲಿದ್ದು ಅದಕ್ಕೆ ಪೂರಕವಾದ ತಯಾರಿ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಹೇಳಿದರು.

’ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತೇನೆ. ಯಾವುದೇ ಭಾಗದಲ್ಲಿ, ಯಾವುದೇ ಹಂತದ ಆಶಿಸ್ತನ್ನು ಸಹಿಸುವುದಿಲ್ಲ’ ಎಂದರು.

ಇಲಾಖೆಯಿಂದ ಅನುಷ್ಠಾನಗೊಂಡ ಪ್ರತಿಯೊಂದು ಯೋಜನೆಯ ಬಗ್ಗೆ ಸಮಗ್ರವಾದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಭೇಟಿಯ ಸಂದರ್ಭದಲ್ಲಿ ಯಾವುದೇ ರೀತಿಯ ಕರ್ತವ್ಯ ಲೋಪ ಸಹಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದರು.

ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ಸಿವಿಲ್ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರದ ಬದಲಾಗಿ ಕೆ.ಟಿ.ಟಿ.ಪಿ ಕಾಯ್ದೆಯ ಅಡಿಯಲ್ಲಿ ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಕರು ವಿದ್ಯಾರ್ಥಿಗಳ ಹಾಜರಾತಿ ತೆಗೆದುಕೊಳ್ಳುವ ರೀತಿಯಲ್ಲಿ ಅಧಿಕಾರಿಗಳ ಹಾಜರಿಯನ್ನು ಖುದ್ದಾಗಿ ಪಶುಸಂಗೋಪನಾ ಸಚಿವರು ತೆಗೆದುಕೊಂಡರು. ಈ ಸಂದರ್ಭದಲ್ಲಿ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಹ ಸೂಚಿಸಿದರು. ಸಚಿವರು ಹಾಜರಾತಿ ತೆಗೆದುಕೊಳ್ಳುವುದನ್ನು ನೋಡಿ ಕ್ಷಣಕಾಲ ಎಲ್ಲ ಅಧಿಕಾರಿಗಳು ಗಲಿಬಿಲಿಗೊಂಡರು.

ಇಲಾಖೆಯ ಕಾರ್ಯದರ್ಶೀ ವಿ,ರಶ್ಮಿ ಮಹೇಶ್, ಆಯುಕ್ತರಾದ ಶ್ರೀ ಉಪೇಂದ್ರ ಪ್ರತಾಪ್ ಸಿಂಗ್ ಹಾಗೂ ೧೫೦ಕ್ಕೂ ಹೆಚ್ಚು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next