Advertisement

ಅಧಿಕ ಬೇಡಿಕೆ ಇದ್ದರೂ ಸಿಎನ್‌ಜಿ ಅಲಭ್ಯ ! ನೈಸರ್ಗಿಕ ಅನಿಲದತ್ತ ವಾಹನ ಸವಾರರ ದೃಷ್ಟಿ

11:32 PM Nov 14, 2021 | Team Udayavani |

ಮಂಗಳೂರು : ತೈಲ ಬೆಲೆ ಏರಿಕೆಯಿಂದ ನೈಸರ್ಗಿಕ ಅನಿಲ (ಸಿಎನ್‌ಜಿ)ಬಳಕೆಯತ್ತ ವಾಹನ ಸವಾರರು ಮನಸ್ಸು ಮಾಡಿದ್ದು ಮಂಗಳೂರಿನಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಆದರೆ ಸಿಎನ್‌ಜಿ ಸಮರ್ಪಕವಾಗಿ ದೊರೆಯದೆ ವಾಹನದವರು ಮಾತ್ರ ನಿತ್ಯ ಪರದಾಡುತ್ತಿದ್ದಾರೆ.

Advertisement

ಮಂಗಳೂರು ನಗರ ವ್ಯಾಪ್ತಿಗೆ ಗೈಲ್‌ ಗ್ಯಾಸ್‌ ಪೈಪ್‌ಲೈನ್‌ ಮೂಲಕ ಎಂಸಿಎಫ್‌ಗೆ ಸರಬರಾಜಾಗುತ್ತಿರುವ ನೈಸರ್ಗಿಕ ಅನಿಲವನ್ನು ಮುಂದೆ ಮಂಗಳೂರಿನ ವಾಹನಗಳ ಪೂರೈಕೆಗೆ ನೀಡಲು ನಿರ್ಧರಿಸಲಾಗಿದೆ. ಸದ್ಯ ಎಂಸಿಎಫ್‌ಗೆ ಗ್ಯಾಸ್‌ ಸರಬರಾಜು ಆಗುತ್ತಿದ್ದರೂ, ಬೈಕಂಪಾಡಿಯಲ್ಲಿ ಸಿಎನ್‌ಜಿ ಮುಖ್ಯ ಕೇಂದ್ರದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಲಾರಿಯ ಮೂಲಕ ತಂದು ವಿತರಿಸಲಾಗುತ್ತಿದೆ. ಮಂಗಳೂರು ವ್ಯಾಪ್ತಿಯ 5 ಪೆಟ್ರೋಲ್‌ ಬಂಕ್‌ಗಳಲ್ಲಿ ಸಿಎನ್‌ಜಿ ಸ್ಟೇಷನ್‌ ತೆರೆಯಲಾಗಿದೆ. ಆದರೆ, ನಗರದಲ್ಲಿ ವಾಹನಗಳ ಸಂಖ್ಯೆ ಸದ್ಯ 800ಕ್ಕೂ ಅಧಿಕವಿರುವ ಕಾರಣ ಪಂಪ್‌ಗ್ಳಲ್ಲಿ ಸಿಎನ್‌ಜಿ ಸೂಕ್ತವಾಗಿ ಲಭಿಸುತ್ತಿಲ್ಲ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ.

ಮಂಗಳೂರು ವ್ಯಾಪ್ತಿಯ ಕಾವೂರು, ಮೂಲ್ಕಿ, ಹೊಸಬೆಟ್ಟು, ಹಳೆಯಂಗಡಿ ಹಾಗೂ ಅಡ್ಯಾರಿನ ಪೆಟ್ರೋಲ್‌ ಬಂಕ್‌ಗಳಿಗೆ ಬೆಂಗಳೂರಿನಿಂದ ವಾಹನದ ಮೂಲಕ ಸಿಎನ್‌ಜಿ ಸರಬರಾಜು ಆಗುತ್ತಿದೆ. ನಾಲ್ಕು “ಎಚ್‌ಸಿವಿ’ ವಾಹನ (ತಲಾ ಒಂದರಲ್ಲಿ 750 ಕೆಜಿ) ಹಾಗೂ ಮೂರು “ಎಲ್‌ಸಿವಿ’ ವಾಹನದಲ್ಲಿ (ತಲಾ ಒಂದರಲ್ಲಿ 400 ಕೆಜಿ) ಸಿಎನ್‌ಜಿ ತರಲಾಗುತ್ತಿದೆ. ಆದರೆ, ಬೆಂಗಳೂರಿನಿಂದ ಸಾಮಾನ್ಯವಾಗಿ ಸುಮಾರು 400 ಕೆ.ಜಿ ಸಿಎನ್‌ಜಿ ಹೊತ್ತ ವಾಹನ ಮಂಗಳೂರು ಪೆಟ್ರೋಲ್‌ ಬಂಕ್‌ ತಲುಪಿದರೆ ಅದರಲ್ಲಿ ಕೆಲವು ಕೆ.ಜಿ ಯಷ್ಟನ್ನು ಸಿಎನ್‌ಜಿ ತಂದ ವಾಹನಕ್ಕೆ ತುಂಬಿಸಿಕೊಳ್ಳುತ್ತಾರೆ. ನಂತರ ಬಂಕ್‌ನವರಿಗೆ ಮಾರಾಟಕ್ಕೆ ಸಿಗುವುದು ಸುಮಾರು 250 ಕೆ.ಜಿ ಯಷ್ಟು ಮಾತ್ರ. ಇದರಲ್ಲಿ ಹೊರಜಿಲ್ಲೆಯ ಬೃಹತ್‌ ವಾಹನಗಳಿಗೆ ಸಿಎನ್‌ಜಿಸಿ
ತುಂಬಿಸಿದರೆ ಸ್ಥಳೀಯ ರಿಕ್ಷಾ, ಕಾರುಗಳಿಗೆ ಸಿಎನ್‌ಜಿ ಸಿಗುತ್ತಿಲ್ಲ!

ಕಿ.ಮೀ. ಕಾದರೂ ಸಿಎನ್‌ಜಿ ಇಲ್ಲ!
ಪೆಟ್ರೋಲ್‌ ಬೆಲೆ ಗಗನಮುಖೀಯಾಗಿ ಏರಲಾರಂಭಿಸುತ್ತಿದ್ದಂತೆ ನಗರದಲ್ಲಿ ತಮ್ಮ ವಾಹನಗಳಿಗೆ ಸಿಎನ್‌ಜಿ ಕಿಟ್‌ ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಗೂಡ್ಸ್‌ ಲಾರಿಗಳು, ರಿಕ್ಷಾ, ಖಾಸಗಿ/ಟೂರಿಸ್ಟ್‌ ಕಾರುಗಳು ಸೇರಿದಂತೆ ನಗರದಲ್ಲಿ ಹಲವು ವಾಹನಗಳ ಮಾಲಕರು ಸಿಎನ್‌ಜಿ ಕಿಟ್‌ಗೆ ಬದಲಾಗಿದ್ದಾರೆ. ಜತೆಗೆ ಸಿಎನ್‌ಜಿ ಆವೃತ್ತಿಯ ಕಾರುಗಳು ಮಾರುಕಟ್ಟೆಗೆ ಪರಿಚಿತಗೊಂಡು ಈ ಸಂಖ್ಯೆಯೂ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಮಂಗಳೂರಿನ ಐದು ಪಂಪುಗಳಲ್ಲಿ ಮಾತ್ರ ಸಿಎನ್‌ಜಿ ಸಿಗುವ ಕಾರಣದಿಂದ ಬಂಕ್‌ಗಳಲ್ಲಿ ಸಿಎನ್‌ಜಿಗಾಗಿ ಕಿ.ಮೀ ಉದ್ದ ತಾಸುಗಟ್ಟಲೇ ಕಾಯಬೇಕಾಗಿದೆ!

“ಮುಂದಿನ ವಾರ ಸಭೆ’
ಮಂಗಳೂರಿನಲ್ಲಿ ಸಿಎನ್‌ಜಿ ಸಮರ್ಪಕವಾಗಿ ದೊರೆಯದೆ ಗ್ರಾಹಕರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ ಸಿಎನ್‌ಜಿ ಸರಬರಾಜು ಮಾಡುವವರು, ಗೈಲ್‌ ಸಂಸ್ಥೆಯವರ ಜತೆಗೆ ಮುಂದಿನ ವಾರ ವಿಶೇಷ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ

Advertisement

“ಸಿಎನ್‌ಜಿಗಾಗಿ ಹಾಹಾಕಾರ’
ನಗರದಲ್ಲಿ ಸಿಎನ್‌ಜಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ ಹಲವು ಸಮಯದಿಂದ ಸಿಎನ್‌ಜಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಬೆರಳೆಣಿಕೆ ಪಂಪ್‌ಗ್ಳ ಮುಂದೆ ಕಾಯುವ ಪರಿಸ್ಥಿತಿಯಿದೆ. ಹೀಗಾಗಿ ಪಣಂಬೂರಿನಲ್ಲಿ ಗೈಲ್‌ ಸಂಸ್ಥೆಯ ಸಿಎನ್‌ಜಿ ಸ್ಥಾವರ ಬೇಗನೆ ಆಗಬೇಕು. ಆ ಮೂಲಕ ಸಿಎನ್‌ಜಿ ಸರಬರಾಜು ಅಧಿಕವಾಗಲಿ.
– ಹೈಕಾಡಿ ಶ್ರೀನಾಥ್‌ ರಾವ್‌, ಪ್ರಮುಖರು, ದ.ಕ ಜಿಲ್ಲಾ ಸಿಎನ್‌ಜಿ ಬಳಕೆದಾರರ ಸಂಘ

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next