Advertisement

ಇನ್ನಷ್ಟು ಕಾಂಗ್ರೆಸ್‌ ಜೆಡಿಎಸ್‌ ಮುಖಂಡರು ಬಿಜೆಪಿಗೆ : ಸಿಎಂ ಬೊಮ್ಮಾಯಿ

09:24 PM Mar 01, 2022 | Team Udayavani |

ಬೆಂಗಳೂರು: ಕಾಂಗ್ರೆಸ್‌- ಜೆಡಿಎಸ್‌ ಇವೆರಡೂ ಪಕ್ಷಗಳ ಜನಹಿತ ಬಯಸುವ ಅನೇಕ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ದೇವನಹಳ್ಳಿಯ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ ಮತ್ತು ಅವರ ಬೆಂಬಲಿಗರ ಹಾಗೂ ಕಾಂಗ್ರೆಸ್‌ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವನಹಳ್ಳಿಯ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ ಅವರ ಸೇರ್ಪಡೆಯಿಂದ ಬಿಜೆಪಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಯಲ್ಲಿ ದೊಡ್ಡ ಶಕ್ತಿ ಲಭಿಸಲಿದೆ. ದೇವನಹಳ್ಳಿ ಪ್ರಗತಿಪರ ಚಿಂತನೆ ಇರುವ ಕ್ಷೇತ್ರ. ಅಲ್ಲಿನ ಜನಸಮುದಾಯದ ಆಶಯ ಕಾಂಗ್ರೆಸ್‌ ಪಕ್ಷದ ವಿರುದ್ಧವಾಗಿದೆ. ಇವತ್ತು ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಹಲವು ಮುಖಂಡರು ಬಿಜೆಪಿ ಸೇರುತ್ತಿರುವುದರಿಂದ ಬಿಜೆಪಿ ನೇತೃತ್ವದ ಹೊಸ ರಾಜಕೀಯ ಸಮೀಕರಣ ಆಗುತ್ತಿದೆ ಎಂದರು.

ಇಂಥ ಸೇರ್ಪಡೆ ಕಾರ್ಯಕ್ರಮಗಳು ಮುಂದಿನ ಒಂದು ತಿಂಗಳು ನಡೆಯಲಿವೆ. ಮುಂದಿನ ರಾಜಕಾರಣಕ್ಕೆ ಇದು ಸಾಕ್ಷಿ ಎಂದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ಯಾವುದೇ ವರ್ಗಕ್ಕೂ ಸಮಾಧಾನ ಇರಲಿಲ್ಲ. ಅಲ್ಲದೆ, ಕೆಲವು ವರ್ಗಕ್ಕೆ ಬಹಳಷ್ಟು ಅನ್ಯಾಯವಾಗಿತ್ತು ಎಂದು ವಿವರಿಸಿದರು. ಇದೇ ಕಾರಣಕ್ಕೆ ಕಾಂಗ್ರೆಸ್‌ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಮುಂದಾದರು. ಅಪವಿತ್ರ ಮೈತ್ರಿಯಿಂದ ಮಾಡಿದ ಸಮ್ಮಿಶ್ರ ಸರಕಾರದಿಂದ ಜನರಿಗೆ ಭ್ರಮನಿರಸನವಾಯಿತು ಎಂದರು.

ಬಿಜೆಪಿ ಎಲ್ಲ ಸಂದರ್ಭಗಳಲ್ಲೂ ಕೇಂದ್ರದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲೂ ಕ್ರಿಯಾಶೀಲ, ಜನಪರ ಸರಕಾರವಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡಲಾಗುವುದು ಎಂದು ತಿಳಿಸಿದರು.

Advertisement

ಕಾಂಗ್ರೆಸ್‌ ಪಕ್ಷದವರು ಹೊರಗಡೆ ಅಧಿಕಾರಕ್ಕೆ ಬಂದಂತೆ ಪೋಸ್‌ ಕೊಡುತ್ತಾರೆ. ಒಳಗಡೆ ಪೊಳ್ಳುತನ ಇದೆ. ಅವರು ಏನೇ ಮಾಡಿದರೂ ಕಾಂಗ್ರೆಸ್‌ ಪಕ್ಷದ ದುರಾಡಳಿತ, ಸರ್ವಾಧಿಕಾರ ಧೋರಣೆಯನ್ನು ಕರ್ನಾಟಕದ ಜನರು ಒಪ್ಪಿಕೊಳ್ಳುವುದಿಲ್ಲ. ನವ ಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಶ್ರಮಿಸೋಣ. ಹೊರಗಿನವರು – ಒಳಗಿನವರು ಎಂಬ ಪ್ರಶ್ನೆ ಇಲ್ಲ. ಇಂದಿನಿಂದ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ದೇವನಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಿದೆ ಎಂದರು.

ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ಕೊಡುವ ನೀತಿ ನಿಯಮಾವಳಿ ರೂಪಿಸಲಾಗುವುದು ಎಂದು ತಿಳಿಸಿದರು. 2023ರಲ್ಲಿ ದೇವನಹಳ್ಳಿಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next