Advertisement

ಪೋರ್ನ್ ವಿಡಿಯೋ ವೆಬ್‌ಸೈಟ್‌ ನಿಷೇಧಿಸಿದ್ದರೂ ಸಿಗುತ್ತಿವೆ ಮಕ್ಕಳ ಅಶ್ಲೀಲ ದೃಶ್ಯ ತುಣುಕುಗಳು

09:11 AM Mar 12, 2022 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ವೀಕ್ಷಣೆ, ಅಪ್‌ ಲೋಡ್‌, ಡೌನ್‌ಲೋಡ್‌ ಅಥವಾ ಹಂಚುವವರು ನಗರದಲ್ಲಿ ಹೆಚ್ಚಾಗುತ್ತಿದ್ದು, ನಗರದ 8 ಸೈಬರ್‌, ಎಕಾನಾಮಿಕ್ಸ್‌, ನಾರ್ಕೋಟಿಕ್ಸ್‌( ಸೆನ್‌) ಠಾಣೆಗಳಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

Advertisement

ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಕೆಲವೊಂದು ಮಕ್ಕಳ ಅಶ್ಲೀಲ ವಿಡಿಯೋ ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಆದರೂ ಬೇರೆ ಬೇರೆ ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳ ಸಿಗುತ್ತಿದ್ದು, ಅವುಗಳಿಂದಲೇ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸಂಬಂಧ ಸಿಐಡಿ ಸೂಚನೆ ಮೇರೆಗೆ ನಗರದ ಎಂಟು ಸೆನ್‌ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಹೀಗಾಗಿ ಮಕ್ಕಳ ಅಶ್ಲೀಲ ವಿಡಿಯೋ, ಫೋಟೋಗಳ ವೀಕ್ಷಣೆ, ಅಪ್‌ಲೋಡ್‌, ಡೌನ್‌ಲೋಡ್‌ ಮತ್ತು ಹಂಚುವುದು ಹಾಗೂ ಗೂಗಲ್‌ ಸರ್ಜ್‌ ಎಂಜಿನ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಬಗ್ಗೆ ಸರ್ಚ್‌ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಹಿನ್ನೆಲೆಯಲ್ಲಿ ಅಂತಹ ಜಾಲತಾಣಗಳಿಗೆ ಭೇಟಿ ಕೊಡುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತನಿಖಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಅಲ್ಲದೆ, ಅವರ ವಿರುದ್ಧ ಐಟಿ ಕಾಯ್ದೆ 67(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ.

ಹೇಗೆ ಪತ್ತೆ ಹಚ್ಚುತ್ತಾರೆ?: ಮಕ್ಕಳ ಅಶ್ಲೀಲ ವಿಡಿಯೋ ಕುರಿತು 2019ರಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್‌ ಸೆಂಟರ್‌ ಫಾರ್‌ ಮಿಸ್ಸಿಂಗ್‌ ಆ್ಯಂಡ್‌ ಎಕ್ಸ್‌ಫ್ಲಾಯ್ಲೆಡ್‌( ಎನ್‌ಸಿಎಂಇಸಿ) ಎಂಬ ಸಂಸ್ಥೆ ಆರಂಭಿಸಿದ್ದು, ಅದು ಸೈಬರ್‌ ಟಿಪ್‌ಲೈನ್‌ ಮೂಲಕ ಅಶ್ಲೀಲ ವೆಬ್‌ಸೈಟ್‌ ವೀಕ್ಷಕರ ಪತ್ತೆ ಹಚ್ಚುತ್ತದೆ. ದೇಶದ ಯಾವುದೇ ಸ್ಥಳದಲ್ಲಿ ಕುಳಿತು ಮಕ್ಕಳ ಅಶ್ಲೀಲ ಚಿತ್ರದ ಬಗ್ಗೆ ಜಾಲತಾಣದಲ್ಲಿ ಶೋಧಿಸಿದ ಕೂಡಲೇ ಸೈಬರ್‌ ಟಿಪ್‌ಲೈನ್‌ಗೆ ಸಂದೇಶ ರವಾನೆಯಾಗುತ್ತದೆ. ನಂತರ ಯಾವ ಜಾಗದಲ್ಲಿ? ಯಾವ ಐಪಿ ವಿಳಾಸ? ಆ ವ್ಯಕ್ತಿ ಹೆಸರು, ಮೊಬೈಲ್‌ ನಂಬರ್‌ ಪತ್ತೆ ಹಚ್ಚಲಾಗುತ್ತದೆ. ಈ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ(ಎನ್‌ಸಿಆರ್‌ಬಿ) ಪಡೆದುಕೊಂಡು, ನಂತರ ಆಯಾ ರಾಜ್ಯದ ಸೈಬರ್‌ ಘಟಕದ ಮುಖ್ಯ ಕಚೇರಿಗೆ ಆರೋಪಿತ ವ್ಯಕ್ತಿ ಹೆಸರು, ಐಪಿ ವಿಳಾಸ ಅಥವಾ ಸಿಮ್‌ಕಾರ್ಡ್‌ ನಂಬರ್‌ ನಮೂದಿಸಿ ಕಳುಹಿಸುತ್ತಾರೆ. ಈ ಆಧಾರದ ಮೇಲೆ ಸಿಐಡಿ ಸೂಚನೆ ಮೇರೆಗೆ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸೆನ್‌ ಠಾಣೆಗಳಲ್ಲಿ ಸೈಬರ್‌ ಟಿಪ್‌ಲೈನ್‌ ಪ್ರಕರಣಗಳು ದಾಖಲಾಗುತ್ತವೆ.

Advertisement

ಮೂರೂವರೆ ವರ್ಷದಲ್ಲಿ 280 ಪ್ರಕರಣ!

ರಾಜ್ಯದಲ್ಲಿ 2019ರಿಂದ ಇದುವರೆಗೂ ಸುಮಾರು 280ಕ್ಕೂ ಹೆಚ್ಚು ಟಿಪ್‌ಲೈನ್‌ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಬೆಂಗಳೂರು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಬೆಂಗಳೂರು, ಶಿವಮೊಗ್ಗ ಹಾಗೂ ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿನ ತನಿಖೆಯಲ್ಲಿ ರಾಜ್ಯದವರಿಗಿಂತ ಬಿಹಾರ, ಪಶ್ಚಿಮ ಬಂಗಾಳ ಸೇರಿ ಉತ್ತರ ಭಾರತದ ರಾಜ್ಯದ ವ್ಯಕ್ತಿಗಳೇ ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ನೆರೆ ರಾಜ್ಯ ಮತ್ತು ಜಿಲ್ಲೆಯವರು ಬೆಂಗಳೂರಿನ ವಿಳಾಸದಲ್ಲಿ ಪಡೆದ ಸಿಮ್‌ಕಾರ್ಡ್‌ ಮೂಲಕ ಈ ದೃಶ್ಯಗಳನ್ನು ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಪ್ರಕರಣ ಪತ್ತೆಗೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸೈಬರ್‌ ಟಿಪ್‌ಲೈನ್‌ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುತ್ತದೆ. ಈ ಕೃತ್ಯದ ಹಿಂದೆ ಒಬ್ಬನೇ ವ್ಯಕ್ತಿ ಇದ್ದಾನೆಯೇ? ಅಥವಾ ವ್ಯವಸ್ಥಿತ ಜಾಲ ಇದೆಯೇ? ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತದೆ.-  ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ.

ನಗರದಲ್ಲಿ ಎಲ್ಲೆಲ್ಲಿ ಪ್ರಕರಣ?

ನಗರದ 8 ಸೆನ್‌ ಠಾಣೆಗಳಲ್ಲಿ ಸಿಐಡಿ ಸೂಚನೆ ಮೇರೆಗೆ ಎರಡೂವರೆ ತಿಂಗಳಲ್ಲಿ 30 ಸೈಬರ್‌ ಟಿಪ್‌ಲೈನ್‌ ಪ್ರಕರಣಗಳು ದಾಖಲಾಗಿವೆ. ಪೂರ್ವ-05, ಉತ್ತರ-05, ವೈಟ್‌ ಫೀಲ್ಡ್‌ -04, ಈಶಾನ್ಯ -01, ಆಗ್ನೇಯ-04 ಇನ್ನುಳಿದಂತೆ ಕೇಂದ್ರ, ದಕ್ಷಿಣ, ಪಶ್ಚಿಮ ವಿಭಾಗ ಸೆನ್‌ ಠಾಣೆಗಳಲ್ಲೂ ಪ್ರರಕಣಗಳು ದಾಖಲಾಗಿದ್ದು, ಒಟ್ಟು 30 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ ಬಹುತೇಕ ಅಶ್ಲೀಲ ವಿಡಿಯೋ ಅಪ್‌ಲೋಡ್‌ ಮತ್ತು ಡೌನ್‌ಲೋಡ್‌ ಮಾಡಿರುವ ಪ್ರಕರಣಗಳೇ ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ.

ಅಶ್ಲೀಲ ಚಿತ್ರ ವೀಕ್ಷಣೆಗೆ ಶಿಕ್ಷೆ ಏನು?

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಥವಾ ಅಪ್‌ಲೋಡ್‌ ಮಾಡಿದರೆ ಐಟಿ ಕಾಯ್ದೆ 67(ಬಿ) ಪ್ರಕಾರ ಐದು ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ. ಎರಡನೇ ಬಾರಿ ವೀಕ್ಷಣೆಗೆ 7 ವರ್ಷ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

 ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next