Advertisement

ಯಾರನ್ನೂ ಬಿಡೆವು: ಯಾರೇ ಭ್ರಷ್ಟಾಚಾರ ಮಾಡಿದರೂ ನಾವು ಸಹಿಸಲಾರೆವು

12:32 AM Mar 29, 2023 | Team Udayavani |

ಹೊಸದಿಲ್ಲಿ: “ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭ್ರಷ್ಟರೆಲ್ಲರೂ ಒಂದೇ ವೇದಿಕೆಯತ್ತ ಬರುತ್ತಿದ್ದಾರೆ. ಅವರೆಲ್ಲರೂ ಒಂದುಗೂಡಿ ಭ್ರಷ್ಟರನ್ನು ಪಾರು ಮಾಡುವ ಆಂದೋಲನ ಶುರು ಮಾಡಿದ್ದಾರೆ’ ಎಂದು ಎಲ್ಲ ವಿಪಕ್ಷಗಳನ್ನು ಗುರಿಯನ್ನಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರು.

Advertisement

ಹೊಸದಿಲ್ಲಿಯ ಬಿಜೆಪಿ ಪ್ರಧಾನ ಕಾರ್ಯಾಲಯದ ಹೊಸ ಸಭಾಂಗಣ ಉದ್ಘಾಟಿಸಿ ಮಾತ ನಾಡಿದ ಅವರು ಇ.ಡಿ., ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವ ದಲ್ಲಿ 14 ವಿಪಕ್ಷಗಳು ಸುಪ್ರೀಂ ಕೋರ್ಟ್‌ ಮೆಟ್ಟಿ ಲೇರಿರುವಂತೆಯೇ ಪ್ರಧಾನಿ ಮೋದಿ ವಿಪಕ್ಷ ಗಳನ್ನು ಉದ್ದೇಶಿಸಿ ವಾಗ್ಧಾಳಿ ನಡೆಸಿದ್ದಾರೆ.

ಮಾತಿನುದ್ದಕ್ಕೂ ವಿಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ ವಿರುದ್ಧ ಕೆಂಡಕಾರಿದರು. ಅದಾನಿ ಗ್ರೂಪ್‌ ವಿರುದ್ಧದ ಆರೋಪ ಮತ್ತು ರಾಹುಲ್‌ ಗಾಂಧಿ ಅನರ್ಹತೆ ವಿಚಾರದಲ್ಲಿ ಸಂಸತ್‌ನ ಹೊರಗೆ, ಒಳಗೆ ವಿಪ ಕ್ಷ ಗಳು ಗದ್ದಲ ಉಂಟು ಮಾಡುತ್ತಿರುವಾಗಲೇ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.

ನಮ್ಮ ದೇಶದಲ್ಲಿ ಪ್ರಬಲ ತಳಹದಿ ಇರುವ ಸಂವಿಧಾನ ವ್ಯವಸ್ಥೆ ಇದೆ. ಅದನ್ನು ತಡೆಯಲು ವಿಪಕ್ಷಗಳು ಮುಂದಾಗುತ್ತಿವೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ವಿಚಾರದಲ್ಲಿ ಹುಯಿಲೆಬ್ಬಿಸಲಾಗುತ್ತಿದೆ. ಭ್ರಷ್ಟರು ಮತ್ತು ಆಪರಾಧ ನಡೆಸಿ ಸಿಕ್ಕಿಬಿದ್ದವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಂಡಾಗ ದೇಶ ವಿ ರೋಧಿ ಗುಂಪು ಗಳು ಅವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ ವೆ ಎಂದು ತೀಕ್ಷ್ಣ ವಾಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿಯವರ ಅನರ್ಹತೆ ಖಂಡಿಸಿ ಮಂಗಳವಾರ ಕಾಂಗ್ರೆಸ್‌ ಕೈಗೊಂಡಿದ್ದ ಪ್ರಜಾ ಪ್ರಭುತ್ವ ಉಳಿಸಿ ಆಂದೋಲನ ಹಾಗೂ ಕೆಂಪುಕೋಟೆಯಿಂದ ಟೌನ್‌ಹಾಲ್‌ ವರೆಗೆ ನಡೆಸಿದ್ದ ಪಂಜಿನ ಮೆರವಣಿಗೆ ಬಗ್ಗೆಯೂ ಪ್ರಧಾನಿ ಪರೋಕ್ಷವಾಗಿ ಆಕ್ಷೇಪಿಸಿದರು.

Advertisement

303 ಸೀಟುಗಳ ವರೆಗೆ: ದೇಶದ ಸಂಸತ್‌ನಲ್ಲಿ ಕೇವಲ 2 ಸ್ಥಾನಗಳಲ್ಲಿ ಆರಂಭವಾದ ಪಕ್ಷದ ಪ್ರಾಬಲ್ಯ 2019ರ ಲೋಕಸಭೆ ಚುನಾವಣೆಯಲ್ಲಿ 303 ಸ್ಥಾನಗಳಲ್ಲಿ ಜಯ ಗಳಿಸಿ ಅಧಿಕಾರಕ್ಕೆ ಏರಿದ್ದು ಸಾಧನೆಯೇ ಸರಿ ಎಂದರು. ಹಿಂದಿನ ಚುನಾವಣೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಮತಗಳನ್ನು ಪಡೆದಿತ್ತು ಎಂದರು. ಪಕ್ಷದ ವಿಸ್ತಾರ ಎನ್ನುವುದು ಕೇವಲ ಪಕ್ಷದ ಪ್ರಧಾನ ಕಚೇರಿಯ ವಿಸ್ತರಣೆ ಅಲ್ಲ. ದೇಶದ ಪ್ರತಿಯೊಂದು ಹಂತದಲ್ಲಿಯೂ ಆಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತನ ಆಸೆಯಾಗಿತ್ತು. ಇಂಥ ಸಾಧನೆಗೆ ಕಾರಣರಾದ ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯ ಕರ್ತನಿಗೆ ಕೂಡ ನನ್ನ ಸಾಷ್ಟಾಂಗ ಪ್ರಣಾ ಮಗಳು ಎಂದು ಪ್ರಧಾನಿ ನುಡಿದರು.

ಎ. 6ರಂದು ಪಕ್ಷ ತನ್ನ 44ನೇ ಸಂಸ್ಥಾಪನ ದಿನ ಆಚರಿ ಸಿಕೊಳ್ಳಲಿದೆ. ಇದೊಂದು ನಿರಂತರ ಪ್ರಯಾಣ ವಾಗಲಿದೆ. ಪಕ್ಷದ ತತ್ತ ಮತ್ತು ಸಿದ್ಧಾಂತಗಳನ್ನು ಎಲ್ಲರೂ ಮೆಚ್ಚಿಕೊಂಡು ಬೆಂಬಲಿಸಿದ್ದರಿಂದ ಈ ಸಾಧನೆ ಮಾಡ ಲಾಗಿದೆ ಎಂದರು.

ಬಿಜೆಪಿ ಭವಿಷ್ಯದ ಪಕ್ಷ: ಬಿಜೆಪಿ ಎಂದರೆ ಭವಿಷ್ಯದ ಪಕ್ಷ ಎಂದು ಪ್ರಧಾನಿ ಬಣ್ಣಿಸಿದರು. ಸದ್ಯ ನಮ್ಮ ಪಕ್ಷ ದಕ್ಷಿಣದಿಂದ ಉತ್ತರಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ಹೀಗೆ ವ್ಯಾಪಕವಾಗಿ ಪ್ರಭಾವ ಬೀರಿದೆ. ಜಗತ್ತಿನ ಅತೀದೊಡ್ಡ ಪಕ್ಷ ಮಾತ್ರವಲ್ಲ, ಭವಿಷ್ಯದ ಪಕ್ಷವೆಂದರೆ ಅದು ಬಿಜೆಪಿ ಯೇ ಆಗಿದೆ ಎಂದರು. ಜಗತ್ತಿನ ಪ್ರಮುಖ ಪಕ್ಷಗಳ ಸಾಲಿಗೆ ನಮ್ಮ ಪಕ್ಷವನ್ನೂ ಪರಿಗಣಿಸಲಾಗುತ್ತಿದೆ. ಆಯಾ ದೇಶಗಳಲ್ಲಿ ಧನಾತ್ಮಕ ಬದಲಾವಣೆಗೆ ಯಾವ ರೀತಿ ಕಾರಣವಾಗಿದೆಯೋ ಅದೇ ರೀತಿ ನಮ್ಮನ್ನೂ ಪರಿ ಗಣಿ ಸಲಾಗುತ್ತದೆ ಎಂದರು ಮೋದಿ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ವಿವಿಧ ಪಕ್ಷಗಳು ನೀಡಿದ ಸರಕಾರದ ಆಡ ಳಿತ ವೈಖರಿಯನ್ನು ಒರೆಗೆ ಹಚ್ಚಿ ಅಧ್ಯಯನ ನಡೆ ಸಲಾಗುತ್ತಿದೆ. ಅದರ ಜತೆಗೆ ಬಿಜೆಪಿ ನೇತೃತ್ವದ ಸರ ಕಾರದ ಕೊಡುಗೆಗಳ ಬಗ್ಗೆಯೂ ವಿಶ್ಲೇಷಣಾ ತ್ಮಕವಾಗಿರುವ ಹೋಲಿಕೆ ನಡೆಸಲಾಗಿದೆ ಎಂದರು.

ಕರ್ನಾಟಕದಲ್ಲಿ ನಂಬರ್‌1: ದಕ್ಷಿಣ ಭಾರತದಲ್ಲಿ ವಿಶೇ ಷವಾಗಿ ಕರ್ನಾಟಕದಲ್ಲಿ ಬಿಜೆಪಿ ಮೊದಲ ಸ್ಥಾನ ದಲ್ಲಿಯೇ ಇದೆ ಎಂದರು ಪ್ರಧಾನಿ. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಪಕ್ಷ ಅಸ್ತಿತ್ವ ಬಲಪಡಿಸಲು ಶ್ರಮಿಸುತ್ತಿದೆ. ಈ ಎಲ್ಲ ರಾಜ್ಯಗಳಲ್ಲಿಯೂ ಪಕ್ಷದ ಮೇಲಿನ ವಿಶ್ವಾಸ ವೃದ್ಧಿಯಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪ್ರಧಾನಿಯವರ ಈ ಮಾತು ಮಹತ್ವ ಪಡೆದಿದೆ.

ಭ್ರಷ್ಟಾಚಾರಕ್ಕೆ ಅಂಕುಶ
ದೇಶದಲ್ಲಿ ಭ್ರಷ್ಟಾಚಾರಕ್ಕೆ ಅಂಕುಶ ಹಾಕ ಲಾಗಿದೆ ಎಂಬ ಬಿಜೆಪಿಯ ಮುಖಂಡರ ಮಾತುಗಳನ್ನು ಸಮರ್ಥಿಸಿ ಮಾತ ನಾಡಿದ ಪ್ರಧಾನಿ, ಹಾಲಿ ಸರಕಾರದ ಅವಧಿ ಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅನ್ವಯ 1.10 ಲಕ್ಷ ಕೋಟಿ ರೂ. ವಶಪಡಿಸಿ ಕೊಳ್ಳಲಾಗಿದೆ ಎಂದರು. ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿಯಲ್ಲಿ ಕೇವಲ 5 ಸಾವಿರ ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು ಮತ್ತು 22 ಸಾವಿರ ಕೋಟಿ ರೂ. ವಂಚಿಸಿ ಅಪರಾಧಿ ಗಳು ದೇಶಬಿಟ್ಟು ಪರಾರಿಯಾಗಿದ್ದರು. ಇಂಥ ವರ 20 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ  ಯನ್ನು ನಮ್ಮ ಸರಕಾರ ವಶಪಡಿಸಿದೆ ಎಂದರು.

ಕಠಿನಾತಿಕಠಿನ ಕ್ರಮ
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ಬಳಿಕದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರಿಗಳ ವಿರುದ್ಧ ಕಠಿನಾತಿಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭ್ರಷ್ಟಾಚಾರಿ ಗಳ ವಿರುದ್ಧ ಕ್ರಮ ಕೈಗೊಳ್ಳುವ ವೇಳೆಯಲ್ಲಿ ವಿಪಕ್ಷಗಳ ಕೆಲವು ಮುಖಂಡರಿಗೆ ಆತಂಕ ಉಂಟಾಗಿದೆ. ಹೀಗಾಗಿ ತನಿಖಾ ಸಂಸ್ಥೆ ಗಳ ಕಾರ್ಯವೈಖರಿ ವಿರುದ್ಧ ವಿನಾಕಾರಣ ಆಕ್ಷೇಪ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿಯೇ ಭ್ರಷ್ಟಾ ಚಾರ ಎಸಗಿದವರೆಲ್ಲರೂ ಒಂದೇ ಗುಂಪಿನಲ್ಲಿ ಸೇರಿಕೊಂಡಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next