Advertisement

ಕೈ ಪಾಳೆಯದಲ್ಲಿ ಹೆಚ್ಚುತ್ತಿದೆ ಅತೃಪ್ತರ ಪಡೆ

03:45 AM Jan 30, 2017 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ಪಕ್ಷಕ್ಕೆ ವಿದಾಯ ಹೇಳಿದ ನಂತರ ಹಲವಾರು ಮುಖಂಡರು ಪಕ್ಷ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಅಸಮಾಧಾನ ಹೊರ ಹಾಕಲು ಅರಂಭಿಸಿದ್ದಾರೆ. 

Advertisement

ಕಾಂಗ್ರೆಸ್‌ನಲ್ಲಿ ದಟ್ಟವಾಗಿ ಕಾಣಿಸಿ ಕೊಳ್ಳುತ್ತಿರುವ “ಜನರೇಷನ್‌ ಗ್ಯಾಪ್‌’ಗೆ ಮತ್ತಷ್ಟು ಹಿರಿಯರು ನಿರ್ಗಮನದ ಹಾದಿಯಲ್ಲಿರುವುದು ಸ್ಪಷ್ಟವಾಗುತ್ತಿದೆ.ಪಕ್ಷದಲ್ಲಿ ಎಸ್‌.ಎಂ.ಕೃಷ್ಣ ಅವರಷ್ಟೇ ಹಿರಿಯರಾಗಿರುವ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫ‌ರ್‌ ಷರೀಫ್, ಮುಂದಿನ ಚುನಾವಣೆಯಲ್ಲಿ ನಾನು ಯಾವ ಪಕ್ಷದಲ್ಲಿರುತ್ತೇನೋ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ನಲ್ಲಿ ತಾವು ಸಹ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಇನ್ನೊಂದೆಡೆ ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ ಕೂಡ ಎಸ್‌.ಎಂ.ಕೃಷ್ಣ ರಾಜೀನಾಮೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, 2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅವರ ಅವಶ್ಯಕತೆ ಇದೆ. ಕೃಷ್ಣ ಅವರು ನನಗೆ ಅತೀ ಸಮೀಪದ ವ್ಯಕ್ತಿ. ಅವರು ಕೂಡಲೇ ರಾಜೀನಾಮೆ ಹಿಂಪಡೆಯಬೇಕು. ಒಂದು ವೇಳೆ ಅವರು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಅವರ ಹಾದಿಯಲ್ಲೇ ನಾವೂ ಸಾಗಬೇಕಾಗುವ ಸಂದರ್ಭ ಒದಗಿ ಬರಬಹುದು ಎಂದು ಹೇಳಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ನ ಕೆಲ ನಾಯಕರು ಕೃಷ್ಣ ಅವರ ಜತೆಗೆ ನಿಂತಿದ್ದು, ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆತ್ಮಾನಂದ ಅವರು ಭಾನುವಾರ ಕೃಷ್ಣ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಿದ್ದರು. ಇನ್ನೊಂದೆಡೆ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ, ಕೃಷ್ಣ ಅವರಿಲ್ಲದ ಕಾಂಗ್ರೆಸ್‌ನಲ್ಲಿ ಇನ್ನು ನಾವು ಯಾರನ್ನು ನೋಡಿಕೊಂಡು ಇರಬೇಕು ಎಂದು ಪ್ರಶ್ನಿಸುವ ಮೂಲಕ ತಾವೂ ಕಾಂಗ್ರೆಸ್‌ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವರಿಷ್ಠರಿಗೆ ಸಂದೇಶ ರವಾನಿಸಿದ ಜಾಫ‌ರ್‌ ಷರೀಫ್: “ಉದಯವಾಣಿ’ ಜತೆ ಮಾತನಾಡಿದ ಜಾಫ‌ರ್‌ ಷರೀಫ್, ಎಸ್‌.ಎಂ.ಕೃಷ್ಣ ಅವರನ್ನು ಕಾಂಗ್ರೆಸ್‌ ಇಷ್ಟೊಂದು ನಿರ್ಲಕ್ಷ ಮಾಡಬಾರದಿತ್ತು. ಅಷ್ಟೇ ಅಲ್ಲ, ತಮ್ಮನು ಕೂಡ್ನ ಕಾಂಗ್ರೆಸ್‌ ಪಕ್ಷ ಕಡೆಗಣಿಸಿರುವುದು ಬಹಳ ನೋವು ತಂದಿದೆ. ಮುಂದಿನ ದಿನಗಳಲ್ಲಿ ನಾವೂ ಸಹ ಎಸ್‌.ಎಂ.ಕೃಷ್ಣ ಅವರ ದಾರಿಯನ್ನೇ ತುಳಿಯಬೇಕಾದೀತೆಂಬ ಸಂದೇಶವನ್ನು ಪಕ್ಷದ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ರವಾನಿಸಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಜಾಫ‌ರ್‌ ಷರೀಫ್, ಹಿಂದೆ ಯುಪಿಎ ಸರ್ಕಾರ ಇದ್ದಾಗ ರಾಜ್ಯಪಾಲರ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ನೆಹರು ಕುಟುಂಬದ ಜತೆ ಆತ್ಮೀಯ ಸಂಬಂಧ ಹೊಂದಿದ್ದ ತಮ್ಮನ್ನು ಪಕ್ಷ ಈಗ ಮೂಲೆಗುಂಪು ಮಾಡಿರುವುದು ಜಾಫ‌ರ್‌ ಷರೀಫ್ ಅವರನ್ನು ಕೆರಳಿಸಿದೆ. ಕಾಂಗ್ರೆಸ್‌ ತೊರೆಯುವ ಇಂಗಿತವನ್ನು ಜಾಫ‌ರ್‌ ಷರೀಫ್ ವ್ಯಕ್ತಪಡಿಸಿದ್ದು, ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರ ಜೊತೆ ಜಾಫ‌ರ ಷರೀಫ್ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಾಫ‌ರ್‌ ಷರೀಫ್ ಅವರು ಜೆಡಿಎಸ್‌ ಸೇರ್ಪಡೆಯಾಗುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಅವರು ಕಾಂಗ್ರೆಸ್‌ನಲ್ಲಿಯೇ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದರು. ಈಗ ಎಸ್‌.ಎಂ.ಕೃಷ್ಣ ಅವರ ನಡೆಯನ್ನು ಗಮನಿಸಿರುವ ಅವರು, ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದ ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಅವರೂ ಪಕ್ಷದಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಜನಾರ್ದನ ಪೂಜಾರಿ ಅವರಂತೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ನಡವಳಿಕೆಯನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಮತ್ತೂಬ್ಬ ಹಿರಿಯ ಮುಖಂಡ, ಮಾಜಿ ಸಂಸದ ಎಚ್‌.ವಿಶ್ವನಾಥ್‌ ಅವರೂ ಪಕ್ಷ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ತಾವೇ ಮುಂದಾಳುತ್ವ ವಹಿಸಿ ಪಕ್ಷಕ್ಕೆ ಕರೆತಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಗಳನ್ನು ವಿರೋಧಿಸುತ್ತಿದ್ದಾರೆ.

ಇವರೊಂದಿಗೆ ಸಚಿವ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬಗ್ಗೆ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ಅಂಬರೀಶ್‌, ಖಮರುಲ್‌ ಇಸ್ಲಾಂ, ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಮಾಲಿಕಯ್ಯ ಗುತ್ತೆದಾರ್‌, ಡಾ.ಎ.ಬಿ.ಮಾಲಕರೆಡ್ಡಿ ಕೂಡ ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅಷ್ಟೇ ಏಕೆ, ಮುಖ್ಯಮಂತ್ರಿಯ ಪರಮಾಪ್ತರಾದ ಸಿ.ಎಂ.ಇಬ್ರಾಹಿಂ ಸಹ ನಿರ್ಲಕ್ಷ್ಯದ ಬಗ್ಗೆ ಅಪಸ್ವರ ಎತ್ತಿ ಜೆಡಿಎಸ್‌ ಜತೆ ಸಂಪರ್ಕದಲ್ಲಿದ್ದಾರೆ.

ಇದುವರೆಗೆ  ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿದ್ದರೂ ಮೌನವಾಗಿದ್ದ ಅನೇಕ ನಾಯಕರು ಎಸ್‌.ಎಂ.ಕೃಷ್ಣ ರಾಜೀನಾಮೆ ಬಳಿಕ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಕಲು ಆರಂಭಿಸಿದ್ದು, ಇದು ಕೃಷ್ಣ ರಾಜೀನಾಮೆಯಿಂದ ಆಘಾತಗೊಂಡಿರುವ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next