ರಬಕವಿ-ಬನಹಟ್ಟಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲು ಆರಂಭಿಸಿದೆ.
ಗುರುವಾರ ಸಂಜೆಯವರೆಗೆ ಕೃಷ್ಣೆ ಈಗ ತನ್ನ ಎರಡು ಒಡಲುಗಳ ಮೈದುಂಬಿಕೊಂಡು ಹರಿಯುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೊಯ್ನಾ ಹಾಗೂ ದೂಧಗಂಗಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದರಿಂದ ನೀರಿನ ಪ್ರಮಾಣ ಏರಿಕೆಯಾಗಿದೆ ಎಂದು ತಹಶೀಲ್ದಾರ್ ಎಸ್.ಬಿ. ಇಂಗಳೆ ತಿಳಿಸಿದರು.
ಪ್ರವಾಹ ಭೀತಿ ಇಲ್ಲ: ಮುಂದಿನ ವಾರದ ನದಿ ಅಪಾಯ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ಈಗ ಪ್ರವಾಹದ ಯಾವುದೇ ಭಯಬೇಡ. ಎರಡು ಲಕ್ಷ ಕ್ಯೂಸೆಕ್ ನೀರು ನದಿಗೆ ಬಂದಾಗ ಮಾತ್ರ ಪ್ರವಾಹ ಎದುರಿಸಬೇಕಾಗುತ್ತದೆ. ಈಗ ನದಿ ಪಾತ್ರದ ಪ್ರತಿ ಗ್ರಾಮದಲ್ಲಿಯೂ ನೋಡಲ್ ಅ ಧಿಕಾರಿಯನ್ನು ನೇಮಿಸ ಲಾಗಿದೆ. ಪ್ರತಿ ಗಂಟೆಗೊಮ್ಮೆ ನೀರಿನ ಏರಿಳಿತಗಳ ಬಗ್ಗೆ ತಾಲೂಕು ಆಡಳಿತಕ್ಕೆ ಮಾಹಿತಿ ರವಾನೆಯಾ ಗುತ್ತಿರುತ್ತದೆ. ಈ ಬಾರಿಯೂ ತಾಲೂಕು ಆಡಳಿತ ಪ್ರವಾಹ ಮುನ್ನೆಚ್ಚರಿಕೆ ಕ್ರಮ ಜಾಗರುಕತೆಯಿಂದ ನಿಭಾಯಿಸಲಿದೆ. ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡು ನದಿದಡದಲ್ಲಿನ ಜನರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ತೀರ ನದಿ ಹತ್ತಿರದಲ್ಲಿ ವಾಸಿಸುವ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ಹೋಗುವುದು ಉತ್ತಮ ಎಂದು ತಹಶೀಲ್ದಾರ್ ಎಸ್.ಬಿ. ಇಂಗಳೆ ಪತ್ರಿಕೆಗೆ ತಿಳಿಸಿದರು. ಗುರುವಾರ ದೂಧಗಂಗಾ ಜಲಾಶಯದಿಂದ 14120 ಕ್ಯೂಸೆಕ್, ರಾಜಾಪುರ ಡ್ಯಾಂದಿಂದ 65870 ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದ್ದು, ಗುರುವಾರ ಸಂಜೆಯಿಂದ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ಬಂದಷ್ಟೇ ನೀರಿನ ಪ್ರಮಾಣ 65000 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ಹಿಪ್ಪರಗಿ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ವಿ. ಎಸ್. ನಾಯಕ ಪತ್ರಿಕೆಗೆ ತಿಳಿಸಿದರು.