ಗದಗ: ಕೋವಿಡ್ ನಿಯಂತ್ರಣದಲ್ಲಿ ಸರಕಾರ ವಿಫಲವಾಗಿದೆ ಎಂಬ ಶಾಸಕ ಎಚ್.ಕೆ. ಪಾಟೀಲರ ಹೇಳಿಕೆಯಲ್ಲಿ ಹುರುಳಿಲ್ಲ. ಜಿಲ್ಲೆಯಲ್ಲಿ ಎರಡು ದಿನಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದರಿಂದ ನಿಗದಿತ ಕೋವಿಡ್ ಆಸ್ಪತ್ರೆ ಭರ್ತಿಯಾಗಿದೆ. 200 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ಹಾಗೂ ಎಲ್ಲ ತಾಲೂಕುಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಕೋವಿಡ್ ಕಾಳಜಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆದರೆ ಜೂ. 28ರಂದು 30 ಪ್ರಕರಣಗಳು ಕಂಡು ಬಂದಿದ್ದರಿಂದ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದ್ದು, 116 ಸಕ್ರಿಯ ಪ್ರಕರಣಗಳಿವೆ. ಹೀಗಾಗಿ ನಿಗದಿತ ಕೋವಿಡ್ ಆಸ್ಪತ್ರೆ ಭರ್ತಿಯಾಗಿದ್ದರಿಂದ ಇನ್ನುಳಿದ ಸೋಂಕಿನ “ಎ’ ಲಕ್ಷಣ ಹೊಂದಿದ್ದವರನ್ನು ಪಕ್ಕದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಲಾಗಿದೆ. ಆದರೆ ಬೆಡ್‌ಗಳಿಲ್ಲದೇ, ಸಮಸ್ಯೆಯಾಗಿಲ್ಲ. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ಒಳಗೊಂಡಂತೆ 1315 ಜನರಿಗೆ ಬೆಡ್‌ಗಳ ವ್ಯವಸ್ಥೆಯಿದೆ. ತೀರಾ ಅನಿವಾರ್ಯ ಎನಿಸಿದರೆ, ಕೆ.ಸಿ. ರಾಣಿ ರಸ್ತೆಯಲ್ಲಿರುವ 200 ಹಾಸಿಗೆಯ ಹೆರಿಗೆ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲೆಯ ಎಲ್ಲ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿಸುವ ಚಿಂತನೆ ಇದೆ.
ಸದ್ಯ ಜಿಲ್ಲೆಯಲ್ಲಿ 16 ಸಾವಿರ ಪಿಪಿಇ, 10 ಸಾವಿರ ಜನರ ಗಂಟಲ ದ್ರವ್ಯ ಪರೀಕ್ಷೆ ಮಾಡುವಷ್ಟು ಪರಿಕರಗಳು ಹಾಗೂ 15 ಸಾವಿರ ಎನ್-95 ಮಾಸ್ಕ್ ಗಳು ದಾಸ್ತಾನು ಇದೆ. ಖಾಸಗಿ ಆಸ್ಪತ್ರೆಯಲ್ಲಿ ಶೇ. 50ರಷ್ಟು ಬೆಡ್‌ಗಳನ್ನು ಮೀಸಲಿಡುವ ಉದ್ದೇಶವಿದೆ. ಆದರೆ, ಖಾಸಗಿ ವೈದ್ಯರ ಮನವಿ ಮೇರೆಗೆ 150-200 ಹಾಸಿಗೆಯುಳ್ಳ ಒಂದೆರಡು ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕೋವಿಡ್‌ಗೆ ಮೀಸಲಿಡಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿ ಉಲ್ಬಣಿಸಿದರೂ, ಸಮರ್ಥವಾಗಿ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ವಿವರಿಸಿದರು.
ಕೋವಿಡ್-19 ಭಾಗವಾಗಿ ರಾಜ್ಯದಲ್ಲಿ ನಡೆದ ಮನೆ ಮನೆ ಸಮೀಕ್ಷೆಯಲ್ಲಿ ಜಿಲ್ಲೆಯು ನಾಲ್ಕನೇ ಸ್ಥಾನದಲ್ಲಿದೆ. ಹಾಸನ ಪ್ರಥಮ, ಕೊಪ್ಪಳ ದ್ವಿತೀಯ, ಧಾರವಾಡ ಮತ್ತು ಗದಗ ಜಿಲ್ಲೆಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಅದಕ್ಕೆ ಅನುಗುಣವಾಗಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಯತೀಶ್ ಎನ್. ಉಪಸ್ಥಿತರಿದ್ದರು.