Advertisement

ಪಿಲಿಕುಳ ನಿಸರ್ಗಧಾಮದಲ್ಲಿ ನೈತಿಕ ಪೊಲೀಸ್‌ಗಿರಿ

12:21 PM Jan 03, 2018 | |

ಮಂಗಳೂರು: ಪಿಲಿಕುಳ ನಿಸರ್ಗ ಧಾಮಕ್ಕೆ ಪಿಕ್‌ನಿಕ್‌ಗೆ ತೆರಳಿದ್ದ ಕಿನ್ನಿಗೋಳಿಯ ಖಾಸಗಿ ಪದವಿ ಪೂರ್ವ ಕಾಲೇಜೊಂದರ ವಿದ್ಯಾರ್ಥಿಗಳ ತಂಡ ದಲ್ಲಿದ್ದ ಓರ್ವ ವಿದ್ಯಾರ್ಥಿನಿಯ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ಮಾಡಿದ ಘಟನೆ ಮಂಗಳವಾರ ನಡೆದಿದ್ದು, ಈ ಪ್ರಕರಣ ಸಂಬಂಧ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಪಿಲಿಕುಳ ನಿವಾಸಿಗಳಾದ ಸಂಪತ್‌ ಶೆಟ್ಟಿ, ವರದ ಮತ್ತು ದಿನೇಶ್‌ ಬಂಧಿತರು. ಸಂಪತ್‌ ಶೆಟ್ಟಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನೆಂದು ಹೇಳಲಾಗಿದೆ. ಈ ನಡುವೆ ಈ ಘಟನೆಗೆ ಸಂಬಂಧಿಸಿದ ವೀಡಿಯೋ ಮತ್ತು ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜಿನ ಗುರುತಿನ ಚೀಟಿ  ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ಮಾಡುವ ಈ ವೀಡಿಯೊ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಸಾಕಷ್ಟು ಟೀಕೆಗೂ ಎಡೆಮಾಡಿದೆ.

ಘಟನೆಯ ವಿವರ
ಕಿನ್ನಿಗೋಳಿ ತಾಳಿಪಾಡಿ ಪೊಂಪೈ ಪ.ಪೂ. ಕಾಲೇಜಿನ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಓರ್ವ ಹಿಂದೂ ಮತ್ತು ಓರ್ವ ಕ್ರೈಸ್ತ ವಿದ್ಯಾರ್ಥಿನಿ ಸೇರಿ ದಂತೆ ಒಟ್ಟು ನಾಲ್ವರು ಪಿಲಿಕುಳ ನಿಸರ್ಗ ಧಾಮಕ್ಕೆ ಹೋಗಿದ್ದು, ಅವರನ್ನು 11 ಗಂಟೆಯ ವೇಳೆಗೆ ಪೊಲೀಸರು ಹೊರಗೆ ಕರೆತರುವ ವೇಳೆ ವಿದ್ಯಾರ್ಥಿಗಳ ಮೇಲೆ ದಿಢೀರನೆ ದಾಳಿ ನಡೆದಿದೆ. ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಹಾಗೂ ವಿದ್ಯಾರ್ಥಿನಿಯರು ಪ್ರಥಮ ಪಿಯುಸಿಯಲ್ಲಿ ಓದುವವರಾಗಿದ್ದಾರೆ.

ವಿದ್ಯಾರ್ಥಿಗಳು ಬೆಳಗ್ಗೆ ಪಿಲಿಕುಳ ನಿಸರ್ಗಧಾಮದ ಮಾನಸ ಅಮ್ಯೂಸ್‌ಮೆಂಟ್‌ ವಾಟರ್‌ ಪಾರ್ಕ್‌ಗೆ ಹೋಗಿದ್ದನ್ನು ಗಮನಿಸಿದ್ದ ಕೆಲವರು, ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ರವಾ ನಿಸಿದ್ದರು. ಹಿಂದೂ ಸಂಘಟನೆಯ ಕಾರ್ಯಕರ್ತರು ಕಾವೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅದರಂತೆ ಪೊಲೀಸರ ಜತೆಯಲ್ಲಿ ಹಿಂದೂ ಸಂಘ ಟನೆಯ ಕಾರ್ಯಕರ್ತರು ಪಿಲಿಕುಳಕ್ಕೆ ತೆರಳಿದ್ದರು.

ಪೊಲೀಸರ ಎದುರೇ ಹಲ್ಲೆ
ಪೊಲೀಸರು ವಾಟರ್‌ ಪಾರ್ಕ್‌ನ ಒಳಗೆ ಹೋಗಿ ನಾಲ್ವರು ವಿದ್ಯಾರ್ಥಿಗಳನ್ನು ಹೊರಗೆ ಕರೆದುಕೊಂಡು ಬಂದು ವಾಹನದತ್ತ ಕರೆದುಕೊಂಡು ಹೋಗುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಿಂದಿನಿಂದ ಹೋಗಿ ಓರ್ವ ವಿದ್ಯಾರ್ಥಿನಿಯ ಕುತ್ತಿಗೆಗೆ ಹೊಡೆದಿದ್ದು,  ಪೊಲೀಸರ ಸಮ್ಮುಖ ದಲ್ಲಿಯೇ ನಡೆದ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲ ತಾಣದಲ್ಲಿ  ವೈರಲ್‌ ಆಗಿದೆ.

Advertisement

ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿ ಓರ್ವ ವಿದ್ಯಾರ್ಥಿನಿ ನೀಡಿದ ದೂರಿನಂತೆ ಕಾವೂರು ಪೊಲೀಸ್‌ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 341, 342, 324, 506, 509, 355, 153(ಎ), 74(1) ಜೆ.ಜೆ.(ಬಾಲ ನ್ಯಾಯ ಕಾಯ್ದೆ) ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಾದ ಸಂಪತ್‌ ಶೆಟ್ಟಿ, ವರದ ಮತ್ತು ದಿನೇಶ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತರಗತಿಗೆ ಚಕ್ಕರ್‌
ವಿದ್ಯಾರ್ಥಿಗಳು ಮಂಗಳವಾರ ತರಗತಿಗೆ ಗೈರುಹಾಜರಾಗಿ ವಾಟರ್‌ ಪಾರ್ಕ್‌ಗೆ ಬಂದಿದ್ದು, ಠಾಣೆ ಯಲ್ಲಿ ವಿಚಾರಣೆ ವೇಳೆ ಇದನ್ನು ಒಪ್ಪಿದ್ದಾರೆ ಎನ್ನಲಾಗಿದೆ.

ಲವ್‌ ಜೆಹಾದ್‌ ಕಾರಣ: ಶರಣ್‌
ಇಂತಹ ಘಟನೆಗಳಿಗೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಲವ್‌ ಜೆಹಾದ್‌ ಪ್ರಕರಣಗಳೇ ಕಾರಣ ಎಂದು ಬಜರಂಗ ದಳ ರಾಜ್ಯ ಸಂಚಾಲಕ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ. ಈ ಘಟನೆ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, “ಪ್ರತಿನಿತ್ಯ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಕರೆದೊಯ್ಯುತ್ತಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದವರು ಆಗ್ರಹಿಸಿದ್ದಾರೆ.

ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿ.ಎಂ. ಸೂಚನೆ
ಪಿಲಿಕುಳ ಪ್ರಕರಣದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಪಿಲಿಕುಳ ಹಾಗೂ ಸುಬ್ರಹ್ಮಣ್ಯದಲ್ಲಿ ನಡೆದಿರುವ ಗೂಂಡಾಗಿರಿ ಪ್ರಕರಣಗಳನ್ನು ಗಂಭೀರವಾಗಿ ಪರಿ ಗಣಿಸಲಾಗಿದೆ. ಈ ಸಂಬಂಧ ಗೃಹ ಇಲಾಖೆಯಿಂದ ವರದಿ ಪಡೆಯಲಾಗಿದೆ ಎಂದರು.

ಪೊಲೀಸ್‌ ವಿಚಾರಣೆ
ಘಟನೆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ ರನ್ನು ಕೂಡ ವಿಚಾರಣೆ ನಡೆಸಿ ವರದಿ ಸಲ್ಲಿಸು ವಂತೆ ಅಧಿಕಾರಿಗಳಿಗೆ ಸೂಚನೆ ನೀಡ ಲಾಗಿದೆ. ಒಂದು ವೇಳೆ ಪೊಲೀಸರ ಕರ್ತವ್ಯ ದಲ್ಲಿ ಲೋಪ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next