Advertisement

Moorane Krishnappa Review; ಕಾಮಿಡಿ ಡೋಸ್‌ನಲ್ಲಿ ಕೃಷ್ಣಪ್ಪ ಕಮಾಲ್‌!

10:51 AM May 25, 2024 | Team Udayavani |

ಸಿನಿಮಾ ಎಂದರೆ ಕೇವಲ ಗ್ಲಾಮರ್‌, ಕಲರ್‌ಫ‌ುಲ್‌ ಅಲ್ಲ, ಅದರಾಚೆ ಒಂದು ಗ್ರಾಮರ್‌ ಇದೆ, ಅದನ್ನು ಅರ್ಥಮಾಡಿಕೊಂಡು ಸಿನಿಮಾ ಕಟ್ಟಿಕೊಟ್ಟರೆ ಪ್ರೇಕ್ಷಕರನ್ನು ಖುಷಿಪಡಿಸಬಹುದು ಎಂದು ಆಗಾಗ ಅನೇಕ ಸಿನಿಮಾಗಳು ಸಾಬೀತು ಮಾಡುತ್ತವೆ. ಈ ವಾರ ತೆರೆಕಂಡಿರುವ “ಮೂರನೇ ಕೃಷ್ಣಪ್ಪ’ ಕೂಡಾ ಈ ಸಾಲಿನಲ್ಲಿ ನಿಲ್ಲುವ ಸಿನಿಮಾ.

Advertisement

ಪಕ್ಕಾ ಹಳ್ಳಿಸೊಗಡಿನಲ್ಲಿ ಮೂಡಿಬಂದಿರುವ ಈ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕನ ಮುಖದಲ್ಲೊಂದು ನಗುಮೂಡಿಸುತ್ತಲೇ ಸಾಗುತ್ತದೆ. ಆ ಮಟ್ಟಿಗೆ ಚಿತ್ರತಂಡದ ಶ್ರಮವನ್ನು ಮೆಚ್ಚಲೇಬೇಕು. ಒಂದು ಸಾದಾಸೀದಾ ಕಥೆಯನ್ನು, ಒಂದಷ್ಟು ಮಜವಾದ ಅಂಶಗಳೊಂದಿಗೆ ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ಈ ಸಿನಿಮಾ ಒಂದೊಳ್ಳೆಯ ಉದಾಹರಣೆಯಾಗಬಹುದು.

ಗ್ರಾಮಪಂಚಾಯ್ತಿ ಅಧ್ಯಕ್ಷ ಹಾಗೂ ಆತನ ಬೆಂಬಲಿಗರ ಎಡವಟ್ಟು ಗಳಿಂದ ಆರಂಭವಾಗುವ ಸಿನಿ ಮಾದ ಪರಮ ಉದ್ದೇಶ ನಗು. ಫ‌ನ್ನಿ, “ಮಸಾಲಾ’ ಸಂಭಾ ಷಣೆ, ಹಳ್ಳಿ ಬೈಗುಳಗಳ ಮೂಲಕ ಸಾಗುವ ಸಿನಿಮಾ ಅದರ ಭಾಷೆಯ ಮೂಲಕ ಹೆಚ್ಚು ಗಮನ ಸೆಳೆಯುತ್ತದೆ. ಆನೇಕಲ್‌ ಭಾಗದ ಭಾಷೆಯ ಸೊಗಡು ಈ ಸಿನಿಮಾದ ಹೈಲೈಟ್‌.

ಸಿನಿಮಾದ ಮೊದಲರ್ಧ ಪೂರ್ತಿ ಕೃಷ್ಣಪ್ಪನದ್ದು ಕಾಮಿಡಿ ಹಾದಿ. ದ್ವಿತೀಯಾರ್ಧ ಒಂದಷ್ಟು ಗಂಭೀರ ಅಂಶಗಳು… ಸಿನಿಮಾ ಮುಂದೆ ಹೀಗೆ ಆಗುತ್ತದೆ ಎಂಬ ಸಣ್ಣ ಸುಳಿವನ್ನು ಪ್ರೇಕ್ಷಕರಿಗೆ ಬಿಟ್ಟುಕೊಟ್ಟೇ ಸಾಗುವ ಸಿನಿಮಾ ಎಲ್ಲೂ ಬೋರ್‌ ಹೊಡೆಸುವು ದಿಲ್ಲ. ಆ ಮಟ್ಟಿಗೆ ಚಿತ್ರ ಲವಲವಿಕೆಯನ್ನು ಕಾಪಾಡಿಕೊಂಡು ಬಂದಿದೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಗ್ಲಾಮರ್‌ ಎಂಬುದಿಲ್ಲ. ಆಗಾಗ ಚಡ್ಡಿಯಲ್ಲಷ್ಟೇ ಕಾಣಿಸಿಕೊಳ್ಳುವ “ಉಗ್ರಂ’ ಮಂಜುವನ್ನು ಈ ಸಿನಿಮಾದ “ಗ್ಲಾಮರ್‌’ ಎಂದುಕೊಳ್ಳಬಹುದು!

ಇಡೀ ಸಿನಿಮಾದ ಹೈಲೈಟ್‌ ರಂಗಾಯಣ ರಘು. ಅವರ ಹಾವಭಾವ, ಮಾತಿನ ಶೈಲಿ ಎಲ್ಲವೂ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ. ಅದರಾಚೆ ಸಂಪತ್‌ ಮೈತ್ರೆಯಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಇತರ ಪಾತ್ರಧಾರಿಗಳು ಕೂಡಾ ಅಲ್ಲಲ್ಲಿ ನಗೆಬುಗ್ಗೆ ಎಬ್ಬಿಸುತ್ತಾರೆ. “ಮೂರನೇ ಕೃಷ್ಣಪ್ಪ’. ಫ್ಯಾಮಿಲಿಗಿಂತ ಫ್ರೆಂಡ್ಸ್‌ ಜೊತೆ ಹೋದರೆ ಹೆಚ್ಚು ಎಂಜಾಯ್‌ ಮಾಡಬಹುದು

Advertisement

ಆರ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next