ಮಳೆಗಾಲದಲ್ಲಿ ಧೋ..ಎಂದು ಭೋರ್ಗರೆಯುವ ತಾಲೂಕಿನ ಮೂಕನಮನೆ ಜಲಪಾತ ನೋಡಿದರೆ ಬೆರಗಾದವರಿಲ್ಲ. ತಾಲೂಕು ಕೇಂದ್ರ ಸಕಲೇಶಪುರದಿಂದ ಸುಮಾರು 39ಕಿ.ಮೀ, ಹೆತ್ತೂರು ಹೋಬಳಿ ಕೇಂದ್ರದಿಂದ 12 ಕಿ.ಮೀ ಹಾಗೂ ಅತ್ತಿಹಳ್ಳಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿರುವ ಈ ಜಲಪಾತ ಮೂಕನಮನೆ ಜಲಪಾತ ಹಾಗೂ ಮೂಕನಮನೆ ಅಬ್ಬಿ ಜಲಪಾತ ಎಂದೇ ಹೆಸರುವಾಸಿಯಾಗಿದೆ. ಪ್ರಖ್ಯಾತ ಬಿಸಿಲೆ ಘಾಟ್‌ನಿಂದ ಕೇವಲ 11 ಕಿ.ಮೀ ದೂರದಲ್ಲಿರುವುದರಿಂದ ಬಿಸಿಲೆಗೆ ಬರುವ ಅನೇಕ ಪ್ರವಾಸಿಗರು ಈ ಜಲಪಾತಕ್ಕೆ ಬರುತ್ತಿದ್ದಾರೆ.
ಹೊಂಗಡಹಳ್ಳ ನದಿ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಕಿರ್ಕಳ್ಳಿ, ಜೇಡಗದ್ದೆ, ಬಾಚನಹಳ್ಳಿ, ಮೂಕನಮನೆ ಮುಂತಾದ ಗ್ರಾಮಗಳಲ್ಲಿ ಹರಿಯುವ ಇದು ಮೂಕನ ಮನೆ ಸಮೀಪ ಒಂದಾಗಿ ಎತ್ತರದಿಂದ ಧುಮುಕುತ್ತದೆ. ನಂತರ ನದಿಯ ನೀರು ಒಂದೆಡೆ ಹೋಗಿ ಸುಬ್ರಹ್ಮಣ್ಯದ ಕುಮಾರಪರ್ವತದ ಮುಖಾಂತರ ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ವಿಲೀನವಾಗುತ್ತದೆ.
ಜಲಪಾತದಲ್ಲಿ ಸಾಮಾನ್ಯವಾಗಿ ವರ್ಷವಿಡಿ ನೀರಿರುತ್ತದೆ ಆದರೆ ಬೇಸಿಗೆಯಲ್ಲಿ ಧುಮುಕುವ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿರುತ್ತದೆ. ಮಳೆಗಾಲದಲ್ಲಿ ಹಾಲಿನಂತೆ ಉಕ್ಕಿ ಹರಿಯುವುದರಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಮೂಲಭೂತ ಸೌಕರ್ಯಗಳ ಕೊರತೆ: ಮೂಕನಮನೆ ಜಲಪಾತವಿರುವ ಬಗ್ಗೆ ತಾಲೂಕಿನ ಬಹುತೇಕ ಜನರಿಗೆ ಅರಿವು ಇಲ್ಲ. ಈ ಜಲಪಾತದ ಸಮೀಪ ಯಾವುದೇ ರೀತಿಯ ಸೌಕರ್ಯವಿಲ್ಲ. ಪುಂಡಪೋಕರಿಗಳ ಹಾವಳಿ ವಿಪರೀತವಾಗಿದ್ದು ಕುಡಿದು ಎಲ್ಲೆಂದರಲ್ಲಿ ಬಿಸಾಡುವ ಮಧ್ಯದ ಬಾಟಲ್‌ಗಳಿಂದ ಅನೇಕ ಪ್ರವಾಸಿಗರ ಕಾಲಿಗೆ ಚುಚ್ಚಿ ಗಾಯವಾಗಿರುವ ಉದಾಹರಣೆಗಳು ಇದೆ. ಈ ನಿಟ್ಟಿನಲ್ಲಿ ತಾಲೂಕು ಆಡಳಿತ ಇತ್ತ ಗಮನವರಿಸಿ ತಕ್ಷಣಕ್ಕೆ ಸರಿಯಾದ ನಾಮ ಫಲಕ ಹಾಕಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ.
ಮೂಕನಮನೆ ಜಲಪಾತದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ದಿಗಾಗಿ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು. ಇದರಿಂದ ಅತ್ತಿಹಳ್ಳಿ ಸುತ್ತುಮುತ್ತ ಪ್ರವಾಸೋದ್ಯಮ ಕೇಂದ್ರವಾಗಲು ಸಹಾಯವಾಗುತ್ತದೆ.
ರವಿ: ಹೆತ್ತೂರು ಗ್ರಾಮಸ್ಥ
ಸುಧೀರ್ ಸಕಲೇಶಪುರ