ಜ್ಞಾನಪೀಠ ಪ್ರಶಸ್ತಿ ಪಡೆದ “ಮೂಕಜ್ಜಿಯ ಕನಸುಗಳು’ ಕಾದಂಬರಿ ಚಿತ್ರವಾಗಿ ಈ ವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ “ಮೂಕಜ್ಜಿ’ಯಾಗಿ ಬಿ. ಜಯಶ್ರೀ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಆಕರ್ಷಣೆ ಅವರು. ತಮ್ಮ ಪಾತ್ರ ಕುರಿತು ಬಿ.ಜಯಶ್ರೀ ಹೇಳಿದ್ದೇನು ಗೊತ್ತಾ? “ನಾನು ಬಹಳ ವರ್ಷಗಳ ಹಿಂದೆಯೇ “ಮೂಕಜ್ಜಿಯ ಕನಸುಗಳು’ ಕಾದಂಬರಿ ಓದಿದ್ದೆ. ಒಮ್ಮೆ ಕಾರಂತರ “ಮೈ ಮನಗಳ ಸುಳಿಯಲ್ಲಿ’ ಕಾದಂಬರಿಯನ್ನು ರಂಗಭೂಮಿಗೆ ತರುವ ಆಸೆ ಹುಟ್ಟುಕೊಂಡಿತು. ಹಾಗಾಗಿ, ಅವರನ್ನು ಭೇಟಿ ಮಾಡಿ ಮಾತಾಡಿದ್ದೆ. ಆಗ ಅವರು, “ಇದನ್ನು ರಂಗಭೂಮಿಗೆ ತರ್ತಿಯೇನವ್ವ’ ಅಂದಿದ್ದರು. ನೀವು ಒಪ್ಪಿದರೆ ಖಂಡಿತವಾಗಿಯೂ ತರುತ್ತೇನೆ’ ಅಂದಿದ್ದೆ. ಆಗ ಅವರು, “ಸರಿ ಸ್ಕ್ರಿಪ್ಟ್ ಮಾಡಿಕೊಂಡು ಬಾರವ್ವ’ ಅಂದಿದ್ದರು. ಮುಕ್ಕಾಲು ಭಾಗ ಸ್ಕ್ರಿಪ್ಟ್ ರೆಡಿಯಾಗಿತ್ತು. ಆದರೆ, ಅವರನ್ನು ಅಷ್ಟೊತ್ತಿಗೆ ಕಳೆದುಕೊಂಡೆವು. ಆದರೆ, ಈಗ ಅವರ “ಮೂಕಜ್ಜಿಯ ಕನಸುಗಳು’ ಕಾದಂಬರಿಯಲ್ಲಿ ನಾನೇ ಮೂಕಜ್ಜಿಯಾಗಿದ್ದೇನೆ ಅನ್ನೋದು ಹೆಮ್ಮೆಯ ವಿಷಯ. ನಾನು ಓದಬೇಕಾದರೆ ಕಂಡ ಮೂಕಜ್ಜಿಯ ಪಾತ್ರ ಮಾಡುವಾಗ, ಕಷ್ಟ ಎನಿಸಿದ್ದು ನಿಜ. ಕಾರಂತರ ಸಾಹಿತ್ಯ ನಿಜಕ್ಕೂ ಕ್ಲಿಷ್ಟಕರ. ನಾನು ಆ ಪಾತ್ರ ಮಾಡುವಾಗ, ಕಾರಂತರು ಕಾಣಿಸುತ್ತಿದ್ದರೇ ಹೊರತು, ಮೂಕಜ್ಜಿ ಅಲ್ಲ. ಅಷ್ಟೊಂದು ಅದ್ಭುತವಾಗಿ ಅದನ್ನು ರೂಪಿಸಿದ್ದಾರೆ. ನಿರ್ದೇಶಕ ಪಿ.ಶೇಷಾದ್ರಿ ಅವರು ಬಂದು ನೀವು “ಮೂಕಜ್ಜಿ’ ಪಾತ್ರ ಮಾಡಬೇಕು ಅಂದಾಗ, ಮಾಡ್ತೀನಾ ಅನ್ನೋ ಪ್ರಶ್ನೆ ಇತ್ತು. ಆದರೆ, ಶೇಷಾದ್ರಿ, ಭಾಸ್ಕರ್ ಜೊತೆ ಇದ್ದರು. ಪಾತ್ರ ಕೂಡ ಸಲೀಸಾಗಿ ಬಂತು. ನಾನು ಕಾರಂತರಿಗೆ ಈ ಮೂಕಜ್ಜಿಯನ್ನು ಒಪ್ಪಿಸಿ ಪಾತ್ರ ಮಾಡಿದ್ದೇನೆ. ಇನ್ನುಳಿದದ್ದು ನೋಡುಗರಿಗೆ ಬಿಟ್ಟದ್ದು’ ಅಂದರು ಬಿ.ಜಯಶ್ರೀ.
ಚಿತ್ರದಲ್ಲಿ ಅರವಿಂದ್ ಕುಪಿಕರ್ ಸುಬ್ರರಾಯ ಪಾತ್ರ ಮಾಡಿದ್ದಾರೆ. ಆ ಬಗ್ಗೆ ಹೇಳಿಕೊಂಡು ಅವರು,”ನಿರ್ದೇಶಕರು ಇಲ್ಲೊಂದು ಪಾತ್ರವಿದೆ. ನೀವು ಮಾಡ್ತೀರಾ’ ಅಂದರು. ನಾನು ಅದಕ್ಕೆ, ಜಯಶ್ರೀ ಅವರಂತಹ ಕಲಾವಿದರು, ನಿಮ್ಮಂತಹ ನಿರ್ದೇಶಕರು, ಭಾಸ್ಕರ್ ಅವರಂತಹ ಹಿರಿಯ ಛಾಯಾಗ್ರಾಹಕರು ಅದರಲ್ಲೂ ಕಾರಂತರ ಕಾದಂಬರಿಯ ಸಿನಿಮಾದ ಅವಕಾಶ ಅಂದರೆ ಬಿಡೋದಾ’ ಅಂತ ಒಪ್ಪಿದೆ. ಓಕೆ ಅಂದವರೇ, ನಿರ್ದೇಶಕರು ರಾತ್ರಿ ಸುಮಾರು 10 ಗಂಟೆಗೆ ಒಂದು ಪೇಜ್ ಕುಂದಾಪುರ ಭಾಷೆ ಇರುವ ಡೈಲಾಗ್ ಕಳಿಸಿದರು. ಅದನ್ನು ಓದಿ ತಿಳಿದುಕೊಂಡು, ಕುಂದಾಪುರ ಗೆಳೆಯನೊಬ್ಬನಿಗೆ ಕಾಲ್ ಮಾಡಿ, ಭಾಷೆಯ ಹಿಡಿತದ ಬಗ್ಗೆ ಅರಿತು, ಅದೇ ದಿನ ಮಧ್ಯರಾತ್ರಿ 2.30 ರ ಹೊತ್ತಿಗೆ ಡೈಲಾಗ್ ಕಳಿಸಿದ್ದೆ. ನಿಜ ಹೇಳ್ಳೋದಾದರೆ, ಆ ಭಾಷೆ ಹಿಡಿದು ನಟಿಸೋದು ಕಷ್ಟವಾಗಿತ್ತು. ಬೆಂಗಳೂರಿಗೆ ಬಂದರೂ, ಅದೇ ಭಾಷೆ ಬಾಯಲ್ಲಿ ಬರುತ್ತಿತ್ತು. ಒಳ್ಳೆಯ ಅನುಭವ ಆಗಿದೆ’ ಅಂದರು ಅರವಿಂದ್.
ಹಿರಿಯ ರಂಗಭೂಮಿ ಕಲಾವಿದೆ ರಾಮೇಶ್ವರಿ ವರ್ಮ ಅವರಿಗಿಲ್ಲಿ “ಮೂಕಜ್ಜಿ’ಯ ಸ್ನೇಹಿತೆ ಪಾತ್ರ ಮಾಡಿದ್ದಾರಂತೆ. “ಇಲ್ಲಿ ಸ್ನೇಹದ ಬಗ್ಗೆ ಆಳವಾದ ಸಂದೇಶವಿದೆ. ಸಣ್ಣ ಪಾತ್ರವಾದರೂ ಅದಕ್ಕೊಂದು ವಿಶೇಷತೆಯೂ ಇದೆ. ಹಿಂದೆ ಶೇಷಾದ್ರಿ ಅವರ “ಬೆಟ್ಟದ ಜೀವ’ ಸಿನಿಮಾದಲ್ಲೂ ನಟಿಸಿದ್ದೆ. ಈಗ ಇಲ್ಲೂ ಮಾಡಿದ್ದೇನೆ’ ಇಂತಹ ಚಿತ್ರ ಎಲ್ಲರಿಗೂ ತಲುಪಬೇಕು’ ಎಂದರು ಅವರು.
ನಂದಿನಿ ವಿಠಲ್, ಸಿದ್ಧಾರ್ಥ್, ಸಂಕಲನಕಾರ ಕೆಂಪರಾಜ್ “ಮೂಕಜ್ಜಿ’ ಕುರಿತು ಮಾತನಾಡಿದರು. ಚಿತ್ರಕ್ಕೆ ಭಾಸ್ಕರ್ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತವಿದೆ.