Advertisement

ಕಾರಂತರ ಹುಟ್ಟೂರಲ್ಲೇ “ಮೂಕಜ್ಜಿ…’ಗೆ ನೀರಸ ಪ್ರತಿಕ್ರಿಯೆ; ನಿರ್ದೇಶಕ ಶೇಷಾದ್ರಿ ಬೇಸರ

12:14 AM Dec 01, 2019 | Sriram |

ಕುಂದಾಪುರ/ಉಡುಪಿ/ ಮಂಗಳೂರು: ಡಾ| ಶಿವರಾಮ ಕಾರಂತರ ಕಾದಂಬರಿ ಆಧಾರಿತ “ಮೂಕಜ್ಜಿಯ ಕನಸುಗಳು’ ಚಿತ್ರಕ್ಕೆ ಬೆಂಗಳೂರು ಮೊದಲಾದೆಡೆ ಉತ್ತಮ ಸ್ಪಂದನೆ ಲಭಿಸಿದೆ. ಆದರೆ ಕಾರಂತರ ಹುಟ್ಟೂರಿನಲ್ಲಿ, ಪ್ರಾದೇಶಿಕ ಭಾಷೆಯಲ್ಲೇ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಕುಂದಾಪುರದಲ್ಲಿ ಮಾತ್ರ ಉತ್ತಮ ಪ್ರತಿಕ್ರಿಯೆ ಸಿಗದಿರುವುದು ಬೇಸರ ತಂದಿದೆ ಎಂದು ಚಿತ್ರದ ನಿರ್ದೇಶಕ ಪಿ. ಶೇಷಾದ್ರಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಮತ್ತು ಮಣಿಪಾಲದ ಕೆನರಾ ಮಾಲ್‌ನ ಭಾರತ್‌ ಸಿನೆಮಾಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ರೀತಿಯ ಅನುಭವಗಳು ಕಲಾ ಚಿತ್ರ ಮಾಡುವಾಗ ಸಾಮಾನ್ಯ. ಆದರೆ ಇಲ್ಲಿರುವ ಲಕ್ಷಕ್ಕೂ ಮಿಕ್ಕಿ ಜನರಲ್ಲಿ ಶೇ. 10ರಷ್ಟು ಮಂದಿ ಚಿತ್ರ ವೀಕ್ಷಿಸಿದರೂ ಆ ಚಿತ್ರ ಗೆದ್ದಂತೆ. ಚಿತ್ರ ಲಾಭ ಗಳಿಸದಿದ್ದರೂ ನಿರ್ಮಾಪಕರು ಹಾಕಿದ ಹಣವಾದರೂ ಸಿಗುವಂತಾಗಲಿ ಎಂದವರು ಹೇಳಿದರು.

50ರ ಸಂಭ್ರಮ ಯಾರಲ್ಲೂ ಇಲ್ಲ!
ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ರಚನೆಯಾಗಿ ಈಗ ಸುವರ್ಣ ಸಂಭ್ರಮ. ನಾವೆಲ್ಲ ಇದನ್ನು ಸಂಭ್ರಮಿಸಬೇಕಿತ್ತು. ಸರಕಾರದಲ್ಲಾಗಲೀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಾಗಲೀ ಸಾಹಿತ್ಯ ಲೋಕದಲ್ಲಾಗಲೀ ಸಾರ್ವಜನಿಕರಲ್ಲಾಗಲೀ ಯಾರಲ್ಲೂ ಈ ಸಂಭ್ರಮವೇ ಕಾಣುತ್ತಿಲ್ಲ. ಈ ಕಾರಣಕ್ಕಾಗಿಯೇ ಇದನ್ನೊಂದು ದೃಶ್ಯ ರೂಪದಲ್ಲಿ ತೆರೆಗೆ ತಂದಿದ್ದೇನೆ. ಈ ಸಂಭ್ರಮ ಐದೇ ದಿನಗಳಲ್ಲಿ ಮುಗಿಯುವ ಹಂತಕ್ಕೆ ತಲುಪದಿರಲಿ ಎಂದು ಶೇಷಾದ್ರಿ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಬಿಡುಗಡೆ
ಗೊಂಡ 45 ಚಿತ್ರಗಳಲ್ಲಿ 9 ಚಿತ್ರಗಳು ಮಾತ್ರ ಕನ್ನಡದ್ದು. ಭೋಜಪುರಿ ಸಿನೆಮಾವೂ ಒಂದಿತ್ತು.ಅದೇ 10 ಲಕ್ಷ ಕನ್ನಡಿಗರು ಇರುವ ಚೆನ್ನೈನಲ್ಲಿ,25 ಲಕ್ಷ ಕನ್ನಡಿಗರು ಇರುವ ಮುಂಬಯಿಯಲ್ಲಿ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳುತ್ತಿಲ್ಲ. ಮಣಿಪಾಲದ ಚಿತ್ರಮಂದಿರದ 200 ಆಸನಗಳಲ್ಲಿ 19 ಆಸನಗಳಷ್ಟೇ ಭರ್ತಿಯಾಗಿದ್ದವು ಎಂದು ವಿಷಾದಿಸಿದರು.

ಬಾಲನಟಿ ಶ್ಲಾಘಾ ಸಾಲಿಗ್ರಾಮ ಮಾತನಾಡಿ, ನನಗೆ ಇದೊಂದು ಉತ್ತಮ ಅನುಭವ ತಂದುಕೊಟ್ಟ ಚಿತ್ರವಾಗಿದ್ದು, ಇಂತಹ ಚಿತ್ರಗಳನ್ನು ನೋಡುವ ಮೂಲಕ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

Advertisement

ನಟರಾದ ಅರವಿಂದ ಹುಬ್ಳೀಕರ್‌, ಅನಂತ್‌ ವಿ.ಎನ್‌., ನೀಲಕಂಠ ಕರಬ, ಉದಯ ಹಾಲಂಬಿ, ಪ್ರದೀಪ್‌ಚಂದ್ರ, ಶಿಖೀನ್‌ ಸಾಲಿಗ್ರಾಮ, ಬಾಲನಟಿ ಶ್ಲಾಘಾ ಸಾಲಿಗ್ರಾಮ ಪತ್ರಿಕಾಗೋಷ್ಠಿಯಲ್ಲಿದ್ದರು.

ವಿದ್ಯಾರ್ಥಿಗಳಿಗೆ ವಿಶೇಷ ಪ್ರದರ್ಶನ
ಶಾಲಾ – ಕಾಲೇಜುಗಳಲ್ಲಿ 100ಕ್ಕೂ ಅಧಿಕ ಮಕ್ಕಳು ವೀಕ್ಷಿಸುವು ದಾದರೆ ರಿಯಾಯಿತಿ ದರದಲ್ಲಿ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಪ್ರದರ್ಶನ ಏರ್ಪಡಿಸಬಹುದು ಎಂದು ಶೇಷಾದ್ರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next