Advertisement

ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ನಿಲ್ಲಿಸಿರುವ ಕ್ರಮ ಖಂಡನೀಯ: ವಸಂತ ಖಾರ್ವಿ

05:29 PM Apr 02, 2022 | Team Udayavani |

ಭಟ್ಕಳ: ಕಳೆದ ಮಾ.23ರಿಂದ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿರುವ ಮೊಗೇರ ಸಮಾಜದ ಧರಣಿ ಪ್ರದೇಶಕ್ಕೆ ಭೇಟಿ ನೀಡಿದ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ಪ್ರಮುಖರಾದ ವಸಂತ ಖಾರ್ವಿ ಅವರು ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿರುವುದನ್ನು ಖಂಡಿಸಿದರು.

Advertisement

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ನೀಡುವಾಗ ಪ್ರತಿ 25 ವರ್ಷಕ್ಕೊಮ್ಮೆ ಬದಲಾಯಿಸುವಂತೆ ಹೇಳಿದ್ದರು, ಆದರೆ ಅದನ್ನು ನಾವು ಪಾಲನೆ ಮಾಡುತ್ತಿದ್ದೇವೆಯೇ? ಸ್ವಾತಂತ್ರ್ಯಾ ನಂತರ ಇದುವರೆಗೆ ರಾಜಕೀಯ ಕಾರಣಕ್ಕಾಗಿ ಬದಲಾವಣೆ ಮಾಡಿಲ್ಲ, ಮೊಗೇರ ಸಮಾಜಕ್ಕೆ ಮಾತ್ರ ನಿಲ್ಲಿಸಿರುವುದರ ಉದ್ದೇಶವೇನು ಎಂದೂ ಅವರು ಪ್ರಶ್ನಿಸಿದರು. ಒಮ್ಮೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿದ ನಂತರ ಅದನ್ನು ನಿಲ್ಲಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಕೊಟ್ಟವರ್ಯಾರು ಎಂದೂ ಪ್ರಶ್ನಿಸಿದ ಅವರು ಇದು ಕಾನೂನು ಬಾಹೀರ, ಸಂವಿಧಾನ ವಿರೋಧಿ ಕೃತ್ಯ ಎಂದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿಸುವುದಕ್ಕೆ ಹೇಗೆ ಹಕ್ಕಿಲ್ಲವೋ ಅದೇ ರೀತಿಯ ತೆಗೆಯುವುಕ್ಕೂ ಹಕ್ಕಿಲ್ಲ ಅಲ್ಲವೇ ಎಂದು ಪ್ರಶ್ನಿಸಿದ ಅವರು ಇದರ ಹಿಂದೆ ಷಡ್ಯಂತ್ರ ಇದೆ ಎನ್ನುವ ಶಂಕೆ ವ್ಯಕ್ತಪಡಿಸಿದರು.

ಶಾಸಕ ಸುನಿಲ್ ನಾಯ್ಕ ಅವರು ವಿಧಾನ ಸಭಾ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸರಕಾರ ಹಾರಿಕೆಯ ಉತ್ತರ ನೀಡಿದೆ, ಸಂಭಂಧ ಪಟ್ಟ ಇಲಾಖೆಯವರಲ್ಲದೇ ಗೋವಿಂದ ಕಾರಜೋಳ ಅವರ ಲಿಖಿತ ಉತ್ತರ ನೀಡಿರುವುದು ಸರಿಯಲ್ಲ ಎಂದರು.

ಹಿಂದೆ ಮೊಗೇರ ಸಮಾಜ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿರುವುದನ್ನು ಅಧ್ಯಯನ ಮಾಡಿಯೇ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿರುವಾಗ ಅದನ್ನು ನಿಲ್ಲಿಸಲು ರಾಜ್ಯ ಸರಕಾರಕ್ಕೆ ಏನು ಹಕ್ಕಿದೆ ಎಂದು ಖಾರವಾಗಿ ಪ್ರಶ್ನಿಸಿದರ ಅವರು ಕಳೆದ 70 ವರ್ಷಗಳಿಂದ ಸೌಲಭ್ಯ ಪಡೆಯುತ್ತಿರುವವರೇ ಇಂದೂ ಪಡೆಯುತ್ತಿದ್ದಾರೆ ಎಂದು ದೂರಿದರು.

Advertisement

ಸವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯ ಕೂಡಾ ನಿರ್ದೇಶನ ನೀಡಿರುವಾಗ ಸರಕಾರ ಮೀನ ಮೇಷ ಎಣಿಸುತ್ತಿರುವುದು ಸರಿಯಲ್ಲ. ರಾಜ್ಯದ ಆರ್ಥಿಕ ಚಟುವಟಿಕೆಗೆ ಮೊಗೇರ ಸಮಾಜದ ಕೊಡುಗೆ ಬಹಳ ಇದೆ, ತಮ್ಮ ಜೀವದ ಹಂಗು ತೊರೆದು ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಈ ಸಮಾಜದ ಕೊಡುಗೆ ಸರಕಾರ ನಿರ್ಲಕ್ಷ ಮಾಡಲಾಗದು ಎಂದು ಹೇಳಿದ ಅವರು ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಗಮನ ಹರಿಸಿ ಇವರಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕಾಗಿದೆ ಎಂದೂ ವಸಂತ ಖಾರ್ವಿ ಹೇಳಿದರು.

ಈ ಸಂದರ್ಭದಲ್ಲಿ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಖಾರ್ವಿ, ಹೋರಾಟ ಸಮಿತಿಯ ಪ್ರಮುಖ ಎಫ್. ಕೆ. ಮೊಗೇರ, ಖಾರ್ವಿ ಸಮಾಜದ ಪ್ರಮುಖ ಎನ್.ಡಿ.ಖಾರ್ವಿ, ತಿಮ್ಮಪ್ಪ ಖಾರ್ವಿ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next