ಭಟ್ಕಳ: ತಮಗೆ ನೀಡಲಾಗುತ್ತಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪುನಃ ನೀಡುವಂತೆ ಆಗ್ರಹಿಸಿ ಇಲ್ಲಿನ ತಾಲೂಕಾ ಆಡಳಿತ ಸೌಧದ ಪಕ್ಕದಲ್ಲಿ ಕಳೆದ 55 ದಿನಗಳಿಂದ ಧರಣಿ ನಡೆಸುತ್ತಿರುವ ಮೊಗೇರ ಸಮಾಜದ ಪ್ರಮುಖರು ಇಂದು ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲುಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶಿವರಾಮ ಹೆಬ್ಬಾರ್ ಅವರನ್ನು ಭೇಟಿಯಾದ ನಿಯೋಗದ ಪ್ರಮುಖರಾದ ಅಣ್ಣಪ್ಪ ಮೊಗೇರ ಅವರು ಮಾತನಾಡಿ ತಮ್ಮ ಸಮಾಜದ ಸಂಕಷ್ಟಗಳನ್ನು ತೋಡಿಕೊಂಡರು.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಜಾತಿ ಪ್ರಮಾಣ ಪತ್ರದ ಕುರಿತು ಚರ್ಚೆ ನಡೆಸಿ ಹದಿನೈದು ದಿನಗಳೊಳಗೆ ಮತ್ತೊಂದು ಸಭೆ ನಡೆಸುವ ಕುರಿತು ನಿರ್ಧರಿಸಲಾಗಿತ್ತು. ಆದರೆ ಹದಿನೈದು ದಿನಗಳ ಕಳೆದಿದ್ದು, ಇನ್ನೂ ಸಭೆ ಕರೆದಿಲ್ಲ. ನಮ್ಮ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಮತ್ತಿತರ ಸೌಲಭ್ಯಕ್ಕೆ ಅನುಕೂಲವಾಗಲು ನಮಗೆ ಈ ಹಿಂದೆ ನೀಡಲಾಗಿದ್ದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕು. ಈ ಕುರಿತು ತಮ್ಮ ಸಹಕಾರ ಅಗತ್ಯ ಎಂದರು. ಮೊಗೇರರ ಅಹವಾಲು ಕೇಳಿದ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಕ್ಯಾಬಿನೆಟ್ ಸಭೆ ಇರುವ ಸಂದರ್ಭದಲ್ಲೇ ಉನ್ನತ ಮಟ್ಟದ ಸಭೆ ನಡೆಸುವಂತೆ ಪ್ರಯತ್ನಿಸುತ್ತೇನೆ. ಈ ಸಭೆಯಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಸಭೆ ಆಯೋಜನೆ ಕುರಿತು ಕಾನೂನು ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಬಳಿ ಮಾತನಾಡುವೆ ಎಂದು ಹೇಳಿದರು. ಉಪಸ್ಥಿತರಿದ್ದ ಮಾಜಿ ಶಾಸಕ ಮಂಕಾಳ ವೈದ್ಯ ಸಹ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಒದಗಿಸಿ ಕೊಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಸಚಿವರಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮೊಗೇರ ಸಮಾಜದ ಹಲವು ಮುಖಂಡರು, ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಡಿಗ, ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಗೋವಿಂದ ನಾಯ್ಕ, ಮೊಗೇರ ಸಮಾಜದ ಪ್ರಮುಖರಾದ ಪುಂಡಲೀಕ ಹೆಬಳೆ, ಎಫ್.ಕೆ.ಮೊಗೇರ, ಭಾಸ್ಕರ ದೈಮನೆ, ಕುಮಾರ ಹೆಬಳೆ ಮುಂತಾದವರಿದ್ದರು.